ಕೊರೊನಾ ಕರ್ತವ್ಯಕ್ಕೆ ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ; ಸುಮಲತಾ ಮೆಚ್ಚುಗೆ
ಮಂಡ್ಯ, ಏಪ್ರಿಲ್ 18: ಕೊರೊನಾ ವೈರಸ್ ತಡೆಗೆ ದೇಶದಾದ್ಯಂತ ಲಾಕ್ ಡೌನ್ ಮಾಡಿರುವ ಕಾರಣ, ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮಗಳೆಲ್ಲವೂ ರದ್ದಾಗಿವೆ. ಕೆಲವರು ಸರಳವಾಗಿ ಮದುವೆಯಾಗಿದ್ದಾರೆ. ಈ ನಡುವೆ ಕೊರೊನಾ ವಾರಿಯರ್ ಆಗಿರುವ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿರುವ ಎಂ.ಜೆ.ಪೃಥ್ವಿ ಕೊರೊನಾ ಪರಿಸ್ಥಿತಿ ನಿರ್ವಹಣೆಗಾಗಿ ತಮ್ಮ ಮದುವೆಯನ್ನೇ ಮುಂದೂಡಿ ಮಾದರಿಯಾಗಿದ್ದಾರೆ.
ಈಗಾಗಲೇ ಮಳವಳ್ಳಿಯಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಇಲ್ಲಿನ ಉಪ ವಿಭಾಗದ ಡಿವೈಎಸ್ಪಿಯಾಗಿರುವ ಎಂ.ಜೆ.ಪೃಥ್ವಿ ಅವರು ಕೊರೊನಾ ಸೋಂಕು ತಡೆಗಾಗಿ ಶ್ರಮಪಡುತ್ತಿದ್ದು, ಇದೀಗ ತಮ್ಮ ಮದುವೆಯನ್ನೇ ಮುಂದೂಡಿ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.

ಏಪ್ರಿಲ್ 4ಕ್ಕೆ ನಿಗದಿಯಾಗಿದ್ದ ಮದುವೆ
ಡಿವೈಎಸ್ಪಿ ಎಂ.ಜೆ. ಪೃಥ್ವಿ ಮತ್ತು ದ್ಯಾಮಪ್ಪ ಅವರ ಮದುವೆ ಏ.4 ಮತ್ತು 5ರಂದು ಧಾರವಾಡದ ಡಿ.ಬಿ. ಪಾಟೀಲ್ ಕನ್ವೆಂಷನ್ ಹಾಲ್‌ನಲ್ಲಿ ನಿಗದಿಯಾಗಿತ್ತು. ಅಲ್ಲದೆ ಮೈಸೂರಿನ ಪೊಲೀಸ್ ಭವನದಲ್ಲಿ ಏ. 10ರಂದು ಆರತಕ್ಷತೆ ಸಮಾರಂಭ ನಿಗದಿಯಾಗಿತ್ತು. ಆದರೆ, ಕೊರೊನಾ ಕಾರಣದಿಂದಾಗಿ ಮದುವೆ ಮುಂದೂಡಿದ್ದಾರೆ. ಈ ಬಗ್ಗೆ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಡಿವೈಎಸ್ಪಿ ಕಾರ್ಯ ಮೆಚ್ಚಿದ ಸಂಸದೆ ಸುಮಲತಾ
ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರು ಇತ್ತೀಚೆಗೆ ಮಳವಳ್ಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಈ ವೇಳೆ ಡಿವೈಎಸ್ಪಿ ಮದುವೆ ಮುಂದೂಡಿರುವ ವಿಚಾರ ತಿಳಿದು ಪೃಥ್ವಿ ಅವರನ್ನು ಅಭಿನಂದಿಸಿದ್ದರು. ನಂತರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಡಿವೈಎಸ್ಪಿ ಪೃಥ್ವಿ ಅವರ ಕಾರ್ಯವನ್ನು ಹೊಗಳಿದ್ದರು.

ದಕ್ಷ ಅಧಿಕಾರಿ ಎಂದು ಸುಮಲತಾ ಮೆಚ್ಚುಗೆ
"ಕೊರೊನಾ ಸೋಂಕು ತಡೆಗಟ್ಟಲು ಲಾಕ್‌ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲುವಾಗಿ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಇಂಥ ಧೈರ್ಯವಂತ, ದಕ್ಷ, ಪ್ರಾಮಾಣಿಕ, ಮಾದರಿ ಮಹಿಳಾ ಆಧಿಕಾರಿ ಮಂಡ್ಯ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ" ಎಂದು ಸುಮಲತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನತೆ ಒಳಿತಿಗೆ ಮದುವೆ ಮುಂದೂಡಿದ ಅಧಿಕಾರಿ
ಇಡೀ ದೇಶ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅದರಲ್ಲೂ ಮಂಡ್ಯದ ಮಳವಳ್ಳಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಜನತೆಯ ಒಳಿತಿಗಾಗಿ ತಮ್ಮ ಮದುವೆಯನ್ನೇ ಮುಂದೂಡಿ ಕಾರ್ಯದಲ್ಲಿ ನಿರತರಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.












Click it and Unblock the Notifications