ಮೊದಲ ಟಾಸ್ಕ್ ನಲ್ಲೇ ಫೇಲ್: ಸುಮಲತಾಗೆ ರಾಜಕೀಯ ಭವಿಷ್ಯದ ಅನಿಶ್ಚಿತತೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಬಿಜೆಪಿಯಲ್ಲಿನ ರಾಜಕೀಯ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತಿತ್ತು. ಆದರೆ, ಜಿಲ್ಲೆಯಲ್ಲಿ ಬಿಜೆಪಿಯ ದಯನೀಯ ವೈಫಲ್ಯ ಮುಂಬರುವ ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಸುಮಲತಾಗೆ ಅನಿಶ್ಚಿತತೆ ಕಾಡುವಂತೆ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಬಿಜೆಪಿಯಿಂದ ಬೆಂಬಲ ತೆಗೆದುಕೊಂಡಿದ್ದ ಸುಮಲತಾ, ಅಸೆಂಬ್ಲಿ ಚುನಾವಣೆಯ ವೇಳೆ ಅಧಿಕೃತವಾಗಿಯೇ ಬಿಜೆಪಿಗೆ ಬೆಂಬಲಿಸುವುದಾಗಿ ಪ್ರಕಟಿಸಿದ್ದರು. ವಿಧಾನಸಭಾ ಚುನಾವಣೆಯ ಬಿಜೆಪಿಯ ಬಹಿರಂಗ ಪ್ರಚಾರದಲ್ಲಿ ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜೊತೆ ವೇದಿಕೆ ಹಂಚಿಕೊಂಡಿದ್ದರು.

ಸಕ್ಕರೆ ನಾಡಿನ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ ಎಂದು ಸುಮಲತಾ ಹೇಳುತ್ತಿದ್ದರು. ಅದರಂತೆಯೇ ಮೋದಿ ಮತ್ತು ಯೋಗಿಯ ರೋಡ್ ಶೋಗೆ ಜನ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಆದರೆ, ಮೋದಿ ಮತ್ತು ಯೋಗಿಯನ್ನು ನೋಡಲು ಬಂದ ಜನ, ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿಯ ಮುಖ ನೋಡಲು ಹೋಗಲಿಲ್ಲ ಎನ್ನುವುದು ಚುನಾವಣಾ ಫಲಿತಾಂಶ ಸಾರಿ ಹೇಳುತ್ತಿದೆ.
ಮಂಡ್ಯದ ಏಳೂ ಕ್ಷೇತ್ರದಲ್ಲಿ ಬಹುತೇಕ ನೇರ ಫೈಟ್
ಮಂಡ್ಯದ ಏಳೂ ಕ್ಷೇತ್ರದಲ್ಲಿ ಬಹುತೇಕ ನೇರ ಫೈಟ್ ಇರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ. ಆದರೂ, 2019ರ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆಯಿಂದ ಬಿಜೆಪಿ ಗೆದ್ದಿತ್ತು. ಈ ಬಾರಿ ಅಬ್ಬರದ ಪ್ರಚಾರ, ಮೋದಿಯವರ ಚರಿಸ್ಮಾದಿಂದ ಬಿಜೆಪಿ ಮೋಡಿ ಮಾಡಬಹುದು ಎನ್ನುವ ಸುಮಲತಾ ಲೆಕ್ಕಾಚಾರ ಸರಿಯಾಗಿ ಉಲ್ಟಾ ಹೊಡೆದಿದೆ.
ಬಿಜೆಪಿಗೆ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ
ಎಷ್ಟರ ಮಟ್ಟಿಗೆ ಬಿಜೆಪಿಯ ತಂತ್ರಗಾರಿಕೆ ವರ್ಕೌಟ್ ಆಗಲಿಲ್ಲ ಎಂದರೆ, ಕಳೆದ ಬಾರಿ ಏಳಕ್ಕೆ (2018ರ ಚುನಾವಣೆ) ಏಳೂ ಸ್ಥಾನವನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಅನ್ನದಾನಿ ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳು ಕೂಡಾ ಕಾಂಗ್ರೆಸ್ ಆರ್ಭಟಕ್ಕೆ ಸೈಲೆಂಟಾದರು. ಯಾವ ಒಂದು ಕ್ಷೇತ್ರದಲ್ಲೂ ಬಿಜೆಪಿಗೆ ಪ್ರತಿರೋಧ ತೋರಲು ಸಾಧ್ಯವಾಗಲಿಲ್ಲ.

ಮೇಲುಕೋಟೆ ಮತ್ತು ನಾಗಮಂಗಲ ಕ್ಷೇತ್ರ
ಮೇಲುಕೋಟೆ ಮತ್ತು ನಾಗಮಂಗಲ ಕ್ಷೇತ್ರ ಹೊರತು ಪಡಿಸಿ, ಬಿಜೆಪಿಯ ಅಭ್ಯರ್ಥಿಗಳು ತಕ್ಕಮಟ್ಟಿನ ವೋಟ್ ಶೇರ್ ಪಡೆದುಕೊಂಡಿದ್ದರು. ಆದರೆ ಅದು ಸೀಟಾಗಿ ಪರಿವರ್ತನೆಯಾಗದೇ ಇದ್ದದ್ದು, ಜಿಲ್ಲೆಯ ಬಿಜೆಪಿಯಲ್ಲಿ ಹಿಡಿತ ಸಾಧಿಸಬೇಕು ಎನ್ನುವ ಸುಮಲತಾ ಅವರ ರಾಜಕೀಯ ಮುಂದಾಲೋಚನೆಗೆ ಹಿನ್ನಡೆಯಾಗುವಂತೆ ಮಾಡಿದೆ.
ಮಂಡ್ಯ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿಜೆಪಿ ಪಡೆದ ಮತ:
| ಮಂಡ್ಯ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿಜೆಪಿ ಪಡೆದ ಮತ | |||
| ಕ್ರಮ ಸಂಖ್ಯೆ | ಕ್ಷೇತ್ರದ ಹೆಸರು | ಅಭ್ಯರ್ಥಿಯ ಹೆಸರು | ಪಡೆದ ಮತ |
| 1 | ಮಳವಳ್ಳಿ (SC) | ಮುನಿರಾಜು | 25,116 |
| 2 | ಮದ್ದೂರು | ಎಸ್.ಪಿ.ಸ್ವಾಮಿ | 28,996 |
| 3 | ಮೇಲುಕೋಟೆ | ಇಂದ್ರೇಶ್ ಕುಮಾರ್ | 6,470 |
| 4 | ಮಂಡ್ಯ | ಅಶೋಕ್ ಜಯರಾಮ್ | 30,661 |
| 5 | ಶ್ರೀರಂಗಪಟ್ಟಣ | ಇಂಡವಾಳು ಸಚ್ಚಿದಾನಂದ | 42,306 |
| 6 | ನಾಗಮಂಗಲ | ಸುಧಾ ಶಿವರಾಮ್ | 7,769 |
| 7 | ಕೆ.ಆರ್.ಪೇಟೆ | ಕೆ.ಸಿ.ನಾರಾಯಣಗೌಡ | 38,151 |
ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿದೆ
ಲೋಕಸಭಾ ಚುನಾವಣೆಗೆ ಒಂದು ವರ್ಷ ಬಾಕಿಯಿದೆ, ಮಂಡ್ಯದಿಂದ ಬಿಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸಬೇಕು ಎನ್ನುವ ಸುಮಲತಾ ಲೆಕ್ಕಾಚಾರಕ್ಕೆ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಸದ್ಯದ ಮಟ್ಟಿಗೆ ಹಿನ್ನಡೆಯನ್ನು ತಂದೊಡ್ಡಿದೆ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಇಪ್ಪತ್ತು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಟಾಸ್ಕ್ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುಮಲತಾ ಮಹತ್ವಾಕಾಂಕ್ಷೆಗೆ ಸದ್ಯದ ಮಟ್ಟಿಗೆ ಹಿನ್ನಡೆ
ಕಳೆದ ಬಾರಿ ಪಕ್ಷೇತರರಾಗಿ ಸುಮಲತಾ ಸ್ಪರ್ಧಿಸಿದ್ದರು, ಅನುಕಂಪದ ಅಲೆ ಕೂಡಾ ಇತ್ತು, ಜೊತೆಗೆ, ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಬೇಕೆಂದು ಕಾಂಗ್ರೆಸ್ ಕೈಜೋಡಿಸಿತ್ತು. ಆದರೆ, ಈ ಬಾರಿ ಬಿಜೆಪಿ ಟಿಕೆಟಿನಿಂದ ಸುಮಲತಾ ಸ್ಪರ್ಧಿಸಿದ್ದೇ ಆದಲ್ಲಿ ಕಾಂಗ್ರೆಸ್, ರೈತಸಂಘದ ಬೆಂಬಲ ಸಿಗುವ ಸಾಧ್ಯತೆಯಿಲ್ಲ. ಹಾಗಾಗಿ, ಮಂಡ್ಯ ಜಿಲ್ಲೆಯ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಸುಮಲತಾ ಮಹತ್ವಾಕಾಂಕ್ಷೆಗೆ ಸದ್ಯದ ಮಟ್ಟಿಗೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications