ಮಳೆಯಿಂದ ಮಂಡ್ಯ ಜಿಲ್ಲೆಯಲ್ಲಿ 750 ಕೋಟಿ ರೂ. ಹಾನಿ, ಹಂತ ಹಂತವಾಗಿ ಪರಿಹಾರ
ಮಂಡ್ಯ, ಸೆಪ್ಟೆಂಬರ್ 5: ಪ್ರಸತ್ತ ಮುಂಗಾರು ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗು ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ಹಾನಿಗೆ ಹಂತ ಹಂತವಾಗಿ ಪರಿಹಾರ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಆಡಳಿತ ಅಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಯರಾಮ್ ರಾಯಪುರ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿಗಳಿಂದ ಉಂಟಾದ ಹಾನಿ ಮತ್ತು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಅಧಿಕಾರಿಗಳ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಳೆಯಿಂದ ಮಂಡ್ಯ ತಾಲೂಕು ಮತ್ತು ನಾಗಮಂಗಲ ತಾಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದು ಅವರಿಗೆ 10 ಲಕ್ಷ ರೂ ಪರಿಹಾರ ವಿತರಿಸಲಾಗಿದೆ. ಭಾರಿ ಮಳೆಯಿಂದ 42 ಮನೆಗಳು ಸಂಪೂರ್ಣ, 159 ಮನೆಗಳು ತೀವ್ರ ಹಾಗೂ 707 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಈ ಎಲ್ಲಾ ಮನೆಗಳಿಗೆ 5,44,65,100 ರು., 8 ದೊಡ್ಡ ಜಾನುವಾರುಗಳು, 46 ಸಣ್ಣ ಜಾನುವಾರುಗಳು, 4200 ಕೋಳಿಗಳು ಸಾವನ್ನಪ್ಪಿರುವುದಕ್ಕೆ 3,88,000 ರು. ಪರಿಹಾರ ವಿತರಿಸಲಾಗಿದೆ ಎಂದು ವಿವರಿಸಿದರು.

750 ಕೋಟಿ ರು.ಗಳಷ್ಟು ಹಾನಿ
ಜಿಲ್ಲೆಯಲ್ಲಿ ಮಳೆಯಿಂದಾಗಿ ಸುಮಾರು 750 ಕೋಟಿ ರು.ಗಳಷ್ಟು ಹಾನಿಯಾಗಿದ್ದು ಸರಕಾರ ಹಂತ ಹಂತವಾಗಿ ಪರಿಹಾರ ಬಿಡುಗಡೆ ಮಾಡುತ್ತಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಲ್ಲಿ 19 ಕೋಟಿ ರೂ ಹಣ ಇದ್ದು ಹಾನಿಗೆ ಅನುಗುಣವಾಗಿ ಇಲಾಖಾವಾರು ಸರಕಾರ ಪರಿಹಾರ ಹಣ ಬಿಡುಗಡೆ ಮಾಡುತ್ತಿದೆ ಎಂದು ಹೇಳಿದರು.
ಕೆ.ಆರ್. ಪೇಟೆ ತಾಲ್ಲೂಕಿನ ಅಘಲಯ, ದೊಡ್ಡಕ್ಯಾತನಹಳ್ಳಿ ಕೆರೆ, ಮಾವಿನ ಕೊಪ್ಪಲು ಕೆರೆ ಹಾಗೂ ಲೋಕನಹಳ್ಳಿ ಕೆರೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಕೆರೆಗಳ ವೀಕ್ಷಣೆ ನಡೆಸಲಾಗಿದ್ದು ಕೆರೆಗಳ ಕೋಡಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬದಲು ಶಾಶ್ವತ ಪರಿಹಾರ ದೊರಕಿಸುವ ನೆಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮಳೆಯಿಂದ ಲೋಕೋಪಯೋಗಿ ಇಲಾಖೆ ರಸ್ತೆಗಳು, ಗ್ರಾಮೀಣ ರಸ್ತೆಗಳು, ಕಿರು ಸೇತುವೆಗಳು ಸೇರಿದಂತೆ ನಾಲೆಗಳಿಗೂ ಹಾನಿ ಉಂಟಾಗಿದೆ. ಇವೆಲ್ಲವನ್ನೂ ಮುಂದಿನ ಜನವರಿ ತಿಂಗಳವರೆಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮೊದಲಿನ ಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಶಾಲೆ-ಅಂಗನವಾಡಿ ದುರಸ್ತಿ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 55.6 ಲಕ್ಷ
ಪ್ರವಾಹ ಹಾಗೂ ಮಳೆಯಿಂದಾಗಿ ಶಾಲೆಗಳ ದುರಸ್ತಿಗೆ 46 ಲಕ್ಷ ರೂ., ಅಂಗನವಾಡಿ ಕೇಂದ್ರಕ್ಕೆ 2 ಲಕ್ಷ ರೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 55.6 ಲಕ್ಷ ರೂ. ಅನುದಾನ ಬಿಡುಗಡೆಗೆ ಸರಕಾರ ಅನುಮೋದನೆ ನೀಡಿದೆ. ಪ್ರತಿ ಶಾಲೆಗಳನ್ನು ಎರಡರಿಂದ ಮೂರು ಹೆಚ್ಚುವರಿ ಕೊಠಡಿ, ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ನಿರ್ಧರಿಸಲಾಗಿದ್ದು, ಶೌಚಾಲಯ ನಿರ್ಮಾಣಕ್ಕೆ 2.10 ಕೋಟಿ ರೂ ಹಾಗೂ ಕೊಠಡಿಗಳ ನಿರ್ಮಾಣಕ್ಕೆ 3 ರಿಂದ 4 ಕೋಟಿ ರೂ ಬಿಡುಗಡೆ ಮಾಡಲಾಗುವುದು ಎಂದರು.












Click it and Unblock the Notifications