ಮಳೆಗಾಗಿ ಚಂದಮಾಮ ಮದುವೆ, ಹೀಗೆ ವಿಶೇಷ ಆಚರಣೆಗೆ ಸಾಕ್ಷಿಯಾದ ಮಂಡ್ಯ ಜಿಲ್ಲೆಯ "ಆ" ಗ್ರಾಮ
ಮಂಡ್ಯ, ಜೂನ್, 16: ರಾಜ್ಯಕ್ಕೆ ಈಗಾಗಲೇ ಮುಗಾರು ಪ್ರವೇಶ ಮಾಡಿ 2 ವಾರಗಳೇ ಕಳೆದಿವೆ. ಆದರೆ ಕೆಲವೆಡೆ ಮಾತ್ರ ಭಾರೀ ಮಳೆಯಾಗುತ್ತಿದ್ದು, ಇನ್ನು ಕೆಲವು ಕಡೆಗಳಲ್ಲಿ ಮಳೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆ ಮಳೆಗಾಗಿ ಹಲವು ಜಿಲ್ಲೆಗಳಲ್ಲಿ ವಿಶೇಷ ಪೂಜೆ, ಆಚರಣೆಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲ್ಲಿ ರೈತರು ಮಳೆ ಬರಲೆಂದು ವಿಶೇಷ ಆಚರಣೆವೊಂದನ್ನು ಮಾಡಿದ್ದಾರೆ.
ಮುಂಗಾರು ಮಳೆ ಬಾರದ ಹಿನ್ನೆಲೆ ಕೆ.ಆರ್. ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಗೂಡೆಹೊಸಹಳ್ಳಿ ಗ್ರಾಮದಲಿ ರೈತರು ತಿಂಗಳಮಾಮ (ಚಂದಮಾಮ) ಮದುವೆ ಆಚರಿಸಿ ವರುಣದೇವರನ್ನು ಪ್ರಾರ್ಥಿಸಿದರು. ಗ್ರಾಮದಲ್ಲಿನ ಮಕ್ಕಳನ್ನು ಒಂದೆಡೆ ಕಲೆ ಹಾಕಿ ಮದುವೆ ಶಾಸ್ತ್ರ ಮಾಡಲು ಹಿರಿಯರು ಜಾನಪದ ನಂಬುಗೆಯಂತೆ ಮುಂದಾದರು. ಮಕ್ಕಳನ್ನು ದೇವರಂತೆ ಪ್ರಾರ್ಥಿಸಿಕೊಂಡು ತಿಂಗಳ ಮಾಮನ ಮದುವೆ ನೆರವೇರಿಸಿದರೆ ಮಳೆ ತಪ್ಪದೆ ಬರಲಿದೆ ಎಂದು ಮದುವೆ ಶಾಸ್ತ್ರಕ್ಕೆ ಸಜ್ಜಾದರು.

ಮದುವೆಯಲ್ಲಿ ವರ ಹಾಗೂ ವಧುವಾಗಿ ಇಬ್ಬರು ಗಂಡು ಮಕ್ಕಳನ್ನೇ ಆಯ್ಕೆ ಮಾಡಲಾಯಿತು. ಮಧು ಮಗನಾದ ಸೂರ್ಯದೇವನ ವೇಷದಲ್ಲಿ ದರ್ಶನ್, ವರವಾಗಿ ಚಂದ್ರಮತಿಯಂತೆ ಲೋಕೇಶ್ ಮದುಮಗಳಾಗಿ ಸಜ್ಜಾದರು. ಲೋಕೇಶ್‌ಗೆ ಸೀರೆ ಕುಪ್ಪಸ, ಬಳೆ, ಒಡವೆ ತೊಡಿಸಿ ಶೃಂಗರಿಸಿದರು.
ಮನೆ ಮನೆಗಳಲ್ಲಿ ಮಕ್ಕಳು ರೊಟ್ಟಿ ಹಂಚನ್ನು ತಂದು ಒಂದೆಡೆ ಸೇರಿಸಿ ರೊಟ್ಟಿ ತಯಾರಿಸಿದರು. ನಂತರ ರೊಟ್ಟಿಯ ಮೇಲೆ ಚಂದಿರನ ಚಿತ್ತಾರ ಬಿಡಿಸಿ ಗಂನ ಸೆಳೆದರು.
ನಂತರ ಅಲ್ಲಿದ್ದ ಮಕ್ಕಳೆಲ್ಲ ಪರಸ್ಪರ ರೊಟ್ಟಿ ಕಸಿಯಲು ಯತ್ನಿಸಿದರು. ಅಂತಿಮವಾಗಿ ಒಂದೆಡೆ ಕಲೆತು ಮಳೆರಾಯನ ಕುರಿತು ಹಾಡಿದರು. ನೃತ್ಯ ಮಾಡಿ ಈಗಲೇ ಬಾರೋ ಮಳೆರಾಯ ಎಂದು ಕರೆದಿದ್ದು, ಇದಕ್ಕೆ ಊರಿನ ಗ್ರಾಮಸ್ಥರು ಸಾಥ್ ನೀಡಿದರು. 5 ದಿನಗಳ ಕಾಲ ನಿತ್ಯ ಸಂಜೆ ಮದುವೆ ಶಾಸ್ತ್ರ, ತಿಂಗಳ ಮಾಮನ ಪೂಜೆ, ರೊಟ್ಟಿ ತಯಾರಿಸಿ ಅದನ್ನು ಪ್ರಸಾದ ರೂಪದಲ್ಲಿ ತರಿಸುವುದು ನಡೆಯಿತು. ಗ್ರಾಮದ ಪ್ರವೇಶದ್ವಾರದ ಮಾರಮ್ಮನ ಗುಡಿ ಬಳಿ ರೊಟ್ಟಿ ತಯಾರಿಸಿದವರಿಗೆ ಮಡಿಸ್ನಾನವನ್ನು ಮಾಡಿಸಲಾಯಿತು.
ಬಳಿಕ ಗುಡಿಯ ಕರಿಕಲ್ಲು ಬಳಿ ದೇಗುಲ ಪ್ರದಕ್ಷಿಣೆ ಹಾಕಿ ನಿತ್ಯದೇವರನ್ನು ಮಳೆರಾಯನಿಗೆ ಪ್ರಾರ್ಥಿಸಲಾಯಿತು. ಈ ವೇಳೆ ಗ್ರಾಮದಲ್ಲಿ ಮದುವೆ ಸಮಾರಂಭದಂತೆ ಸಂತೋಷದಿಂದ ತಾಳಿ ಶಾಸ್ತ್ರ ನೆರವೇರಿಸಿ, ವಧು, ವರರಿಗೆ ತಿಂಗಳಮಾಮ (ಚಂದ್ರ)ನನ್ನು ತೋರಿಸಲಾಯಿತು.
ಇನ್ನು ಇದೇ ವೇಳೆ ರಾಜು, ಹೇಮಂತ್, ಮುರುಳಿ ತಂಡ ಸೇರಿಕೊಂಡು ಕೋಲಾಟ, ಕಳಸ ಶಾಸ್ತ್ರವನ್ನು ಮಾಡಿದರು. ಬಳಿಕ ಆಂಜನೇಯ ದೇಗುಲದಿಂದ ವೆಂಕಟೇಶ್ವರ ದೇಗುಲದವರಿಗೆ ಮೆರವಣಿಗೆ ಮಾಡಲಾಯಿತು.
ಮಳೆಗಾಗಿ ಕಪ್ಪೆಗಳಿಗೆ ಮದುವೆ
ಇನ್ನು ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪದಲ್ಲಿ ಕಪ್ಪೆಗಳಿಗೆ ಮದುವೆ ಮಾಡಿದ ಘಟನೆಯೂ ಇತ್ತೀಚೆಗಷ್ಟೇ ನಡೆದಿತ್ತು. ಜೂನ್ ತಿಂಗಳು ಬಂದರೆ ಸಾಕು ರೈತರು ಮಳೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ ಇದೀಗ ಒಂದು ವಾರ ಕಳೆದರೂ ಮಳೆ ಮಾತ್ರ ಇನ್ನು ಪ್ರವೇಶ ಮಾಡಿಲ್ಲ. ಆದ್ದರಿಂದ ಹಲವೆಡೆ ರೈತರು ದೇವರ ಮೊರೆಹೋಗಿ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿ ಕಲಘಟಗಿಯಲ್ಲಿ ರೈತರು ಮಳೆ ಬರಲಿ ಅಂತಾ ಕೈ ಮುಗಿದು ಕಪ್ಪೆಗಳಿಗೆ ಮದುವೆ ಮಾಡಿದ್ದು, ಇದು ವಿಶೇಷ ಆಚರಣೆಗೆ ಸಾಕ್ಷಿಯಾಗಿದೆ.
ಮಳೆ ಆಗಿಲ್ಲ ಅಂದರೆ ನಮ್ಮ ಪೂರ್ವಜರು ಕಪ್ಪೆಗಳು, ಕೋತಿಗಳು, ಕೋಳಿಗಳಿಗೂ ಮದುವೆ ಮಾಡುತ್ತಿದ್ದರು. ಇದೇ ನಂಬಿಕೆಯಲ್ಲಿ ಕಲಘಟಗಿ ತಾಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಜನರು ಅರಿಶಿನಶಾಸ್ತ್ರ, ಹಂದರ ಶಾಸ್ತ್ರ, ವಿವಿಧ ವಾದ್ಯ ಮೇಳಗಳೊಂದಿಗೆ ಕಪ್ಪೆಗಳನ್ನು ಮೆರವಣಿಗೆ ಮಾಡುವ ಮೂಲಕ ವಿಶಿಷ್ಟ ಆಚರಣೆಗೆ ಸಾಕ್ಷಿಯಾಗಿದ್ದಾರೆ.
ಶುಕ್ರವಾರ (ಜೂನ್ 10) ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮುತ್ತೈದೆಯರೆಲ್ಲರೂ ಉಡಿ ತುಂಬಿಕೊಂಡು ಕಪ್ಪೆಗಳಿಗೆ ಅರಿಶಿನ ಹಚ್ಚಿ, ಸುರಗಿ ನೀರೇರೆದು, ಹಾಸಕ್ಕಿ ಹಾಕಿ, ತಾಳಿ ಕಟ್ಟಿಸಿ ಮದುವೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಬಂದ ಭಕ್ತರಿಗೆ ಅನ್ನ ಪ್ರಸಾದವನ್ನು ಏರ್ಪಡಿಸಿ ಮಳೆರಾಯ ಬೇಗ ಬಾ ಅಂತಾ ವಿಶೇಷ ನಮನ ಸಲ್ಲಿಸಿದರು.
ಪ್ರತಿ ವರ್ಷ ಮೇ ತಿಂಗಳ ಕೊನೆ ವಾರ ಬಂದರೆ ಸಾಕು ರೈತರು ತಮ್ಮ ಹೊಲಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿರುತ್ತಿದ್ದರು. ಆದರೆ ಈ ವರ್ಷ ಜೂನ್ ತಿಂಗಳ ಹೊಸ್ತಿಲಲ್ಲಿ ಮೃಗಶಿರ ಮಳೆ ಆರಂಭ ಆದರೂ, ಮಳೆರಾಯ ಬಾರದೆ ಇರುವುದರಿಂದ ಕಂಗಲಾದ ರೈತರು ಮೋಡದತ್ತ ಮುಖ ಮಾಡಿ ಕುಳಿತಿದ್ದಾರೆ.












Click it and Unblock the Notifications