Darshan Campaign: ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಪ್ರಚಾರ: ಡಿ ಬಾಸ್ ಹೇಳಿದ್ದೇನು?
ಮಂಡ್ಯ ಏಪ್ರಿಲ್ 18: ಮಂಡ್ಯದ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಹಲಗೂರಿನಲ್ಲಿ ಮತಭೇಟೆ ಆರಂಭಿಸಿದ್ದು, ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ.
ಈ ವೇಳೆ ಮಂಡ್ಯ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಡಿ ಬಾಸ್ ದರ್ಶನ್, 'ನಾನು ಅಂದು ಕೂಡ ಇಂದು ಕೂಡ ವ್ಯಕ್ತಿಯನ್ನು ನೋಡಿ ಪ್ರಚಾರಕ್ಕೆ ಬಂದಿದ್ದೇನೆ. ಪಕ್ಷವನ್ನು ನೋಡಿ ಅಲ್ಲ' ಎಂದು ಸ್ಪಷ್ಟಪಡಿಸಿದರು. ಇನ್ನೂ ಇದೇ ವೇಳೆ,'ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರ ನಿಂತಾದ್ದಾರೆ ನಿಮ್ಮ ಅಮೂಲ್ಯವಾದ ಮತ ಅವರಿಗೆ ನೀಡಿ' ಎಂದು ಮನವಿ ಮಾಡಿದರು.

ಈ ಬಾರಿ ಕಾಂಗ್ರೆಸ್ ವಿರುದ್ಧ ಜಯ ಸಾಧಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿವೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮರಸ್ವಾಮಿಗೆ ಟಿಕೆಟ್ ನೀಡಲಾಗಿದೆ. ಸಂಸದೆ ಸಮಲತಾ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲದೆ ಬಿಜೆಪಿಗೆ ಮತ ಹಾಕಿ ಅಂತಲೂ ಹೇಳಿದ್ದಾರೆ.
ಆದರೆ ಈವರೆಗೂ ಎಚ್‌ಡಿ ಕುಮಾರಸ್ವಾಮಿಯೊಂದಿಗೆ ಸುಮಲತಾ ಪ್ರಚಾರದಲ್ಲಿ ಭಾಗಿಯಾಗಿಲ್ಲ. ಇದರಿಂದಾಗಿ ಸುಮಲತಾ ಅಂಬರೀಷ್ ಅಭಿಮಾನಿಗಳ ಮತಗಳು ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರ ಕೈ ತಪ್ಪುವ ಸಾಧ್ಯತೆ ಇದೆ. ಆದರೆ ಇನ್ನೂ ಕೂಡ ಸಮಯವಿದೆ. ಮುಂದಿನ ದಿನದಲ್ಲಿ ಸುಮಲತಾ ಅವರು ಎಚ್‌ಡಿ ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ ಅವರು ಪ್ರಚಾರದಲ್ಲಿ ಭಾಗವಹಿಸುತ್ತಾರೋ ಇಲ್ವೋ ಎನ್ನುವುದೇ ಸ್ಪಷ್ಟವಾಗಿಲ್ಲ.
ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ದರ್ಶನ್ ಹಾಗೂ ಯಶ್ ಜೋಡೆತ್ತುಗಳ ಬೆಂಬಲದೊಂದಿಗೆ ಒಂಬೊಂಟಿಯಾಗಿ ನಿಂತು ಬಹುಮತದಿಂದ ಸ್ವಾಭಿಮಾನಿ ಸುಮಲತಾ ಅಂಬರೀಷ್ ಜಯಗಳಿಸಿದ್ದರು. ಆದರೆ ಇಂದು ಸುಮಲತಾ ಬಿಜೆಪಿಗೆ ಸೆರ್ಪಡೆಗೊಂಡರೆ, ದರ್ಶನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

ಸುಮಲತಾ ಹಾಗೂ ದರ್ಶನ್ ನಡುವಿನ ತಾಯಿ ಮಗನ ಸಂಬಂಧ ಮಾತ್ರ ಗಟ್ಟಿಯಾಗಿದೆ. ಆದರೆ ಬೆಂಬಲ ಮಾತ್ರ ವಿರುದ್ಧ ದಿಕ್ಕಿನಲ್ಲಿದೆ. ಸುಮಲತಾ ಬಿಜೆಪಿಗೆ ಸೇರಿದ್ದರೆ ದರ್ಶನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಕುತೂಹಲಕಾರಿ ವಿಷಯ ಅಂದರೆ ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ತೀವ್ರ ಪೈಪೋಟಿ ನೀಡಲು ಮುಂದಾಗಿದ್ದ ಆಗಿನ ಸಿಎಂ ಎಚ್‌ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದರು.
ಆಗ ಸುಮಲತಾ ವಿರುದ್ಧ ಸಾಕಷ್ಟು ಬಾರಿ ಮಾತನಾಡಿದ್ದ ಇಂದಿನ ಸ್ಪರ್ಧಿ ಎಚ್‌ಡಿ ಕುಮಾರಸ್ವಾಮಿ, ಸುಮಲತಾ ಮನೆಗೆ ತೆರಳಿ ಹೂಗುಚ್ಚ ನೀಡಿ ಬೆಂಬಲ ನೀಡುವಂತೆ ಕೋರಿ ಬಂದಿದ್ದಾರೆ. ಆದರೆ ಇಂದು ಸುಮಲತಾ ಅವರು ಬಿಜೆಪಿ ಸೇರಿದ್ದಾರೆ, ಆದರೆ ಎಚ್‌ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಾರೋ ಇಲ್ವೋ ಇನ್ನೂ ಕೂಡ ಸ್ಪಷ್ಟವಾಗಿಲ್ಲ.
ಯಾಕೆಂದರೆ ಕಳೆದ ಕೆಲ ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿದ್ದರು. ಬಿಜೆಪಿ ಪಕ್ಷ ಸೇರುವಾಗಲೂ ಸುಮಲತಾ ನರೇಂದ್ರ ಮೋದಿ ಅವರನ್ನು ಹೊಗಳಿ ಕೊಂಡಾಡಿದ್ದರು. ಮಂಡ್ಯದಲ್ಲಿ ಏನಾದರೂ ಕೆಲಸ ಮಾಡಿದ್ದರೆ ಮೋದಿ ಅವರಿಂದಲೇ ಎಂದು ಹೊಗಳಿದ್ದರು. ಹೀಗಾಗಿ ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿ ಸೇರುವ ವೇಳೆ ಸುಮಲತಾ ಅವರು ಪಕ್ಷಕ್ಕೆ ಬದ್ದಳಾಗಿರುತ್ತೇನೆ. ಪಕ್ಷ ಸೂಚಿಸಿದರೆ ನಾನು ಪ್ರಚಾರದಲ್ಲಿ ಭಾಗವಹಿಸುತ್ತೇನೆ ಎಂದೂ ಹೇಳಿದ್ದರು. ಆದರೆ ಈವರೆಗೂ ಎಚ್‌ಡಿ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳಿಯದೇ ಇರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಮಾತ್ರವಲ್ಲದೆ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವುದಕ್ಕೆ ಎಲ್ಲರ ಚಿತ್ತ ಮಂಡ್ಯದತ್ತ ನೆಟ್ಟಿದೆ.












Click it and Unblock the Notifications