KRS Dam: ಕೆರೆಗಳನ್ನು ತುಂಬಿಸದ ಅಧಿಕಾರಿಗಳಿಗೆ ಕ್ಲಾಸ್; ಕೆರೆ ತುಂಬಿಸಲು ಅಧಿಕಾರಿಗಳಿಗೆ ಸೂಚನೆ
ದೀಪದ ಕೆಳಗೆ ಕತ್ತಲು ಎನ್ನುವಂತೆ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ, ತಮಿಳುನಾಡಿಗೆ ಲಕ್ಷಾಂತರ ಕ್ಯೂಸೆಕ್ಸ್ ನೀರು ಹರಿದು, ಕೊನೆಗೆ ಮೆಟ್ಟೂರು ಜಲಾಶಯ ಕೂಡ ಭರ್ತಿಯಾಗಿದೆ. ಆದರೆ ಕೆಆರ್ ಎಸ್ ಜಲಾಶಯದ ಅಕ್ಕ ಪಕ್ಕದಲ್ಲಿರುವ ಕೆರೆಗಳನ್ನು ತುಂಬಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು, ಶಾಸಕರು, ಸಚಿವರು ನೀರಾವರಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕೆಆರ್‌ಎಸ್ ಭರ್ತಿಯಾಗಿ ಹದಿನೈದು ದಿನಗಳಾದರೂ ವಿಶ್ವೇಶ್ವರಯ್ಯ ನಾಲಾ ಕೊನೆಯ ಭಾಗಕ್ಕೆ ನೀರು ತಲುಪದಿರುವುದು, ಕೆರೆಗಳನ್ನು ತುಂಬಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದರು.

ಮಳವಳ್ಳಿ ಭಾಗಕ್ಕೆ ಹೆಬ್ಬಕವಾಡಿ ಬಳಿ ಸುತ್ತುಕಟ್ಟೆಯಿಂದ ಹೆಚ್ಚು ನೀರು ಹರಿದುಬರುತ್ತದೆ. ಆ ನಾಲೆಯಲ್ಲಿ 1000 ಕ್ಯುಸೆಕ್ ನೀರು ಹರಿಯಬೇಕಿದ್ದು, ಅಲ್ಲಿ 750 ಕ್ಯುಸೆಕ್‌ನಿಂದ 850 ಕ್ಯುಸೆಕ್ ನೀರು ಹರಿಸುತ್ತಿದ್ದೀರಾ. ನೀರು ತಲುಪುವುದಕ್ಕೆ ಹೇಗೆ ಸಾಧ್ಯ ಎಂದು ಕೆಆರ್‌ಎಸ್ ಅಧಿಕ್ಷಕ ಇಂಜಿನಿಯರ್ ರಘುರಾಮ್ ಅವರನ್ನು ಪ್ರಶ್ನಿಸಿದರು.
ಹೋರಾಟ ಮಾಡ್ತೀನಿ ಎಂದ ಶಾಸಕ
ಇದೇ ನಿಮಗೆ ಕೊನೆಯ ವಾರ್ನಿಂಗ್, ನಾನು ಯಾರಿಗೂ ಕೇರ್ ಮಾಡಲ್ಲ, ರೂಲಿಂಗ್ ಪಾರ್ಟಿ ಎಂಎಲ್‌ಎ ಆಗಿದ್ದರೂ ರೈತರನ್ನು ನಾನೇ ಕರೆತಂದು ಹೋರಾಟ ಮಾಡಬೇಕಾಗುತ್ತೆ. ಅಣೆಕಟ್ಟು ಭರ್ತಿಯಾಗಿ ಎಷ್ಟು ದಿನವಾಯ್ತು. ಕೆರೆಗಳನ್ನು ತುಂಬಿಸೋಕೆ ತಡ ಮಾಡ್ತಿರೋದ್ಯಾಕೆ, ಸಚಿವರು ಅವಶ್ಯಕತೆ ಇಲ್ಲದ ಕಾನೂನು ಮಾಡಿಕೊಂಡು ಕುಳಿತಿದ್ದಾರೆ. ಅದನ್ನೆಲ್ಲಾ ಕೇಳಿಕೊಂಡು ಕೂರೋದಕ್ಕಲ್ಲ ನಾವು ಬರೋದು. ಹಿಂದಿನಿಂದಲೂ ಮೊದಲು ಒಣಪ್ರದೇಶಕ್ಕೆ ನೀರು ಕೊಡಿ ಅಂತಾನೇ ಹೇಳುತ್ತಿದ್ದೇವೆ. ಆದರೆ ನೀರು ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಮದ್ದೂರು, ಚಿಕ್ಕರಸಿನಕೆರೆ ಹೋಬಳಿಯಲ್ಲೂ ಇದೇ ಪರಿಸ್ಥಿತಿ ಇದೆ. ಇದುವರೆಗೂ ಒಂದು ಕೆರೆಯೂ ಭರ್ತಿಯಾಗಿಲ್ಲ. ಕೇವಲ ಮಂತ್ರಿಗಳ ಕ್ಷೇತ್ರದ ಕೆರೆಗಳನ್ನು ತುಂಬಿಸಿದ್ದೀರಿ. ನಾಲೆಯ ತೂಬುಗಳನ್ನು ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಹಲವೆಡೆ ಕೃಷಿ ಜಮೀನುಗಳಿಗೂ ನೀರು ತಲುಪಿಲ್ಲ ಎಂದರು.
ಮದ್ದೂರು ತಾಲೂಕಿನಲ್ಲಿ ಸಮರ್ಪಕ ಮಳೆಯಾಗಿಲ್ಲ. ಆದರೂ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದಾಗಿ ನೀಡಲಾಗಿದೆ. ಈ ಅಂಕಿ-ಅಂಶಗಳ ಬಗ್ಗೆಯೇ ನಮಗೆ ಅನುಮಾನವಿದೆ. ಮದ್ದೂರು ಭಾಗಕ್ಕೆ ನಿರಂತರವಾಗಿ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಚಿವ ಎನ್.ಚಲುವರಾಯಸ್ವಾಮಿ ಅವರು ಮಧ್ಯ ಪ್ರವೇಶಿಸಿ, ಅಚ್ಚುಕಟ್ಟು ಪ್ರದೇಶದಲ್ಲಿ ಕೆರೆ-ಕಟ್ಟೆ, ಹಳ್ಳ ತುಂಬುವಷ್ಟ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಕೆರೆಗಳು ತುಂಬುವುದಕ್ಕೆ ಮಳೆಯ ಸಹಕಾರವೂ ಬೇಕು. ನೀರಾವರಿ ಇಲಾಖೆ ಅಧಿಕಾರಿಗಳು ಸ್ವತಃ ಶಾಸಕರ ಜೊತೆ ಕುಳಿತು ಚರ್ಚಿಸಿ ನೀರು ಹರಿಸುವುದಕ್ಕೆ ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ತಿಳಿದು ಹತ್ತು ದಿನಗಳೊಳಗೆ ಸಮಸ್ಯೆ ಬಗೆಹರಿಸಬೇಕು. ಎಲ್ಲಾ ಕೆರೆಗಳನ್ನು ತುಂಬಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ಅನುದಾನದಡಿ ಕೈಗೊಂಡಿರುವ ಕಾಮಗಾರಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಸಚಿವ ಎನ್.ಚಲುವರಾಯಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದರು.












Click it and Unblock the Notifications