ಕೊನೆಗೂ ಜೆಡಿಎಸ್ ಗೆ ಗುಡ್ ಬೈ ಹೇಳಿದ ಬಂಡಾಯ ಶಾಸಕರು
Recommended Video

ಮಂಡ್ಯ, ಮಾರ್ಚ್ 23 : ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಮೇಶ್ ಬಂಡಿಸಿದ್ದೇಗೌಡ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.
ಜೆಡಿಎಸ್ ಬಂಡಾಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಬಂಡಿಸಿದ್ದೇಗೌಡ ಅವರು ಶುಕ್ರವಾರ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ರಾಜೀನಾಮೆ ಸಲ್ಲಿಸಿದರು.
2016ರ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದ ರಮೇಶ್ ಬಂಡಿಸಿದ್ದೇಗೌಡ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು.

ಇಂದು ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯಿತು. ವಿಧಾನಸೌಧದಲ್ಲಿ ಮತದಾನ ಮಾಡಿದ ಬಳಿಕ ರಮೇಶ್ ಬಂಡಿಸಿದ್ದೇಗೌಡ ಅವರು ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ನಿವಾಸಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದರು. ಸ್ಫೀಕರ್ ರಾಜೀನಾಮೆಯನ್ನು ಅಂಗೀಕರಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಬೃಹತ್ ಸಮಾವೇಶ ಉದ್ದೇಶಿಸಿ ಅವರು ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿಯೇ ರಮೇಶ್ ಬಂಡಿಸಿದ್ದೇಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆ.
2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 55,204 ಮತಗಳನ್ನು ಪಡೆದು ಜಯಗಳಿಸಿದ್ದರು.
ಕಾಂಗ್ರೆಸ್ ಪಕ್ಷ ಸೇರಲಿರುವ ಅವರು ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 2018ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ಪಕ್ಷ ಕ್ಷೇತ್ರಕ್ಕೆ ರವೀಂದ್ರ ಶ್ರೀಕಂಠಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.












Click it and Unblock the Notifications