ಮಂಡ್ಯ: ಫ್ಲೆಕ್ಸ್ ಮೇಲೆ ಎಸೆದ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ನಿರ್ಮಾಣ; ಶಾಸಕ ರವಿಕುಮಾರ್
ಮಂಡ್ಯ : ಕೆರಗೋಡು ಗಲಭೆಗೆ ಸಂಬಂಧಿಸಿದಂತೆ ನಗರದಲ್ಲಿ ನಡೆದ ಪಾದಯಾತ್ರೆ ವೇಳೆ ಕಿಡಿಗೇಡಿಗಳು ಕನಕ ಭವನ ಮತ್ತು ಕನಕದಾಸರ ಫ್ಲೆಕ್ಸ್ ಮೇಲೆ ಕಲ್ಲು ತೂರಿದ್ದನ್ನು ವಿರೋಧಿಸಿ ಅದೇ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ಮಾಡುತ್ತೇವೆ ಎಂದು ಶಾಸಕ ರವಿಕುಮಾರ್ ಗಣಿಗ ಸವಾಲು ಹಾಕಿದರು.
ಕನಕ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಷ್ಣುವಿನ ಅವತಾರ ಕೃಷ್ಣ ಹಾಗೂ ರಾಮ. ಉಡುಪಿಯಲ್ಲಿ ಕೃಷ್ಣ, ಕನಕದಾಸರಿಗೆ ದರ್ಶನ ಕೊಟ್ಟಿದ್ದಾನೆ. ಅಂತಹ ಕನಕದಾಸರ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದಾರೆ. ಆ ಕಲ್ಲುಗಳಿಂದಲೇ ಕನಕದಾಸರ ಪ್ರತಿಮೆ ಮಾಡುತ್ತೇವೆ. ಈ ಸಂಬಂಧ ಕುರುಬ ಸಂಘಕ್ಕೆ ಜಾಗ ನೀಡಿ ಎಂದು ಕೇಳಿದ್ದೇನೆ. ಅವರು ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕನಕದಾಸರ ಫ್ಲೆಕ್ಸ್‌ಗೆ ಕಲ್ಲು ಹೊಡೆದು ಪಾಪ ಕೃತ್ಯ ಮಾಡಿದ್ದಾರೆ. ಅಂದು ಹೊಡೆದ ಕಲ್ಲುಗಳನ್ನು ಸಂಗ್ರಹಿಸಿದ್ದಾರೆ. ಪ್ರತಿಮೆಯನ್ನು ಸಿಎಂ ಅವರಿಂದಲೇ ಉದ್ಘಾಟನೆ ಮಾಡಿಸುತ್ತೇವೆ. ಪ್ರತಿದಿನ ಪ್ರತಿಮೆಗೆ ಪೂಜೆ ಮಾಡುತ್ತೇವೆ. ಹಾಸ್ಟೆಲ್‌ನಲ್ಲಿ ಎಲ್ಲ ಧರ್ಮ, ಜಾತಿಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕಲ್ಲು ಎಸೆದಿರುವುದರಿಂದ ಕಿಟಕಿಗಳು ಹೊಡೆದು ಹೋಗಿವೆ. ಆಗ ವಿದ್ಯಾರ್ಥಿಗಳಿಗೆ ಪರೀಕ್ಷೆ ಇತ್ತು. ಕಲ್ಲು ಬೀರಿದ್ದರಿಂದ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ ಎಂದು ತಿಳಿಸಿದರು.
ಕೆರಗೋಡು ಗ್ರಾಮಕ್ಕೆ ಭೇಟಿ ನೀಡದ ಬಗ್ಗೆ ಸ್ಪಷ್ಟನೆ
ಕೆರಗೋಡು ಗ್ರಾಮದಲ್ಲಿ ಶಾಂತಿ ಕದಡುವುದು ಬೇಡವೆಂದು ನಾನು ಹೋಗಿಲ್ಲ ಅಷ್ಟೇ. ನನಗೆ ಗ್ರಾಮಕ್ಕೆ ಹೋಗಲು ಭಯವಿಲ್ಲ. ಈಗ ಹೋದರೆ ಕೆಲವರು ಪ್ರಚೋದನೆ ಮಾಡುತ್ತಾರೆ. ಆಗ ಮತ್ತೆ ಶಾಂತಿ ಕದಡುವ ರೀತಿಯಾಗುತ್ತದೆ. ಕೆಲವು ದಿನದ ಬಳಿಕ ಹೋಗುತ್ತೇನೆ. ಜನರ ಸಮಸ್ಯೆ ಏನಿದೆ, ಅದನ್ನು ಬಗೆ ಹರಿಸುತ್ತೇನೆ. ನಮ್ಮ ಮಂಡ್ಯ ಜನರಿಗೆ ಬಾವುಟ, ಧ್ವಜ ಹೋರಾಟ ಇದ್ಯಾವುದು ಗೊತ್ತಿಲ್ಲ. ಕಾವೇರಿ ಹೋರಾಟವಷ್ಟೆ ಗೊತ್ತಿರುವುದು. ಆದರೆ ಕೆಲವರು ಪ್ರಚೋದನೆ ನೀಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯವರಿಗೆ ಈ ಘಟನೆ ದೊಡ್ಡದು ಆಗುತ್ತಿಲ್ಲವೆಂದು ಕಾಡುತ್ತಿದೆ. ಅದಕ್ಕೆ ಅವರು ಧ್ವಜ ಅಭಿಯಾನ ಮಾಡುತ್ತಿದ್ದಾರೆ. ಅವರು ಧ್ವಜ ಕೊಡಲಿ ಎಲ್ಲರೂ ಮನೆ ಮೇಲೆ ಹಾರಿಸಲಿ. ನಾನು ಸಹ ನಮ್ಮ ಮನೆಯ ಮೇಲೂ ಧ್ವಜ ಹಾರಿಸುತ್ತೇನೆ. ನಾನು ಸಹ ದೇವರ ಭಕ್ತ, ಪೂಜೆಯನ್ನು ಮಾಡುತ್ತೇನೆ. ನಾನು ಮಾಡುವಷ್ಟು ಪೂಜೆಯನ್ನು ಅವರು ಮಾಡಲ್ಲ. ಭಾನುವಾರದಿಂದ ಇಡೀ ವಾರ ದೇವರ ಪೂಜೆ ಮಾಡುತ್ತೇನೆ ಎಂದರು.
ಮೂರ್ನಾಲ್ಕು ಜನರಷ್ಟೇ ಈ ವಿಚಾರದಲ್ಲಿ ತುಪ್ಪ ಸುರಿಯುತ್ತಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೂ ದಾರಿ ತಪ್ಪಿಸಿದ್ದಾರೆ. ಎಚ್‌ಡಿಕೆ ಅವರಿಗೆ ಇದೆಲ್ಲ ಇಷ್ಟವಿಲ್ಲ. ರೈತರು ಹಣ ಹಾಕಿ ಕಟ್ಟಿರುವುದು ಸ್ತಂಭವೆಂದು ಹೇಳಿರುವುದಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಎಂದ ಅವರು, ಫೆ.7ರ ಬಂದ್ ಕೈ ಬಿಟ್ಟಿರುವುದು ಸ್ವಾಗತ. ಫೆ.9ರಂದು ಬಂದ್ ಮಾಡುವವರನ್ನು ಸಹ ಕೇಳುತ್ತೇನೆ. ಅವರು ಸಹ ಬಂದ್ ಕೈ ಬಿಡಲಿ, ಎಲ್ಲರೂ ಶಾಂತಿಯಿಂದ ಅಭಿವೃದ್ಧಿ ಕಡೆ ಗಮನ ಹರಿಸೋಣ ಎಂದು ಮನವಿ ಮಾಡಿದರು.












Click it and Unblock the Notifications