ಹಾಲಿಗೆ ನೀರು ಮಿಶ್ರಣ ಪ್ರಕರಣ: ಪೊಲೀಸರ ಕ್ರಮ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾ
ಮಂಡ್ಯ, ನವೆಂಬರ್28 : ಮದ್ದೂರು ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಹಾಲಿಗೆ ನೀರು ಮಿಶ್ರಣದಲ್ಲಿ ಪ್ರಕರಣ ದಾಖಲಿಸಿರುವ ಮದ್ದೂರು ಪೊಲೀಸರ ಕ್ರಮ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಮುಖ್ಯ ಆರೋಪಿಯಾಗಿರುವ ಬೆಂಗಳೂರು ಜ್ಞಾನ ಜ್ಯೋತಿ ನಗರದ ನಿವಾಸಿ ದೊಡ್ಡ ರಾಜು ಕಲಬೆರಕೆ ಹಾಲಿನ ಹಗರಣದಲ್ಲಿ ತಮ್ಮ ಮೇಲೆ ದಾಖಲಿಸಿರುವ ಕ್ರಿಮಿನಲ್ ಮೊಕದ್ದಮೆ ರದ್ದು ಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ 'ಪೊಲೀಸರು ತನಿಖೆ ಸಮಯದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ದೋಷಾರೋಪಣಾ ಪಟ್ಟಿಯಲ್ಲಿ ಸೇರಿಸುವುದು ಕಡ್ಡಾಯವಾಗಿದೆ. ಅಲ್ಲದೆ, ಹಾಲಿಗೆ ಕಲಬೆರೆಕೆ ಮಾಡುವುದರಿಂದ ಪೌಷ್ಟಿಕಾಂಶದ ಮೌಲ್ಯವು ಕಳೆದುಕೊಳ್ಳುತ್ತದೆ. ಈ ವೇಳೆ ಅರ್ಜಿದಾರರು ಮತ್ತು ಇತರೆ ಆರೋಪಿಗಳು ಹಾಲಿಗೆ ಮಾಲ್ಟೋಡೆಕ್ಸ್ಟ್ರಿನ್ ರಾಸಾಯನಿಕವನ್ನು ಸೇರಿಸಿರುವುದು ಅಪರಾಧವಾಗಿದೆ' ಎಂದು ನ್ಯಾಯಮೂರ್ತಿಗಳು ಆಕ್ಷೇಪಿಸಿ ಪ್ರಕರಣ ರದ್ದು ಕೋರಿ ಆರೋಪಿ ದೊಡ್ಡರಾಜು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.

ಗೆಜ್ಜಲಗೆರೆಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳಾದ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿ, ಚಿಕ್ಕೋನಹಳ್ಳಿ, ಮರಳಿಗ ಮತ್ತು ಕೆರೆಮೇಗಳದೊಡ್ಡಿ ಗ್ರಾಮಗಳ ಹಾಲು ಉತ್ಪಾದಕರ ಸಂಘಗಳ ಬಿಎಂಸಿ ಕೇಂದ್ರಗಳಿಂದ ಸಂಗ್ರಹಿಸಿದ ಹಾಲನ್ನು ಗುತ್ತಿಗೆ ಪಡೆದ ಟ್ಯಾಂಕರ್‌ಗಳ ಮೂಲಕ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಲು ಗುತ್ತಿಗೆ ನೀಡಲಾಗಿತ್ತು.
ಗುತ್ತಿಗೆದಾರರು ಹಾಲನ್ನು ಖಾಸಗಿ ಹಾಲಿನ ಡೈರಿಗೆ ಮಾರಾಟ ಮಾಡುವ ಉದ್ದೇಶದಿಂದ ಸೋಮನಹಳ್ಳಿಯಲ್ಲಿರುವ ಖಾಸಗಿ ಹಾಲಿನ ಡೈರಿಗೆ ಮಾರಾಟ ಮಾಡುತ್ತಿದ್ದರು. ನಂತರ ಹಾಲಿನ ಟ್ಯಾಂಕರ್‌ಗಳಲ್ಲಿ ರಹಸ್ಯವಾಗಿ ನೀರು ಮಿಶ್ರಣ ಮಾಡುವ ರಹಸ್ಯ ಕೋಣೆಗಳನ್ನು ನಿರ್ಮಿಸಿಕೊಂಡು ಟ್ಯಾಂಕರ್‌ಗಳು ಕಾರ್ಯ ನಿರ್ವಹಿಸುವಾಗ ನೀರು ಹಾಲು ಇರುವ ಟ್ಯಾಂಕರ್ ಪ್ರವೇಶ ಮಾಡಿ ಹಾಲು ಕಲಬೆರೆಕೆ ಆಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಹೆಚ್.ವೆಂಕಟೇಶ್ ನೀಡಿದ ಮಾಹಿತಿ ಮೇರೆಗೆ ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕರು ದಾಳಿ ನಡೆಸಿ ಕಲಬೆರಕೆ ಹಾಲಿನ ಸಂಪೂರ್ಣ ಪ್ರಕರಣವನ್ನು ಬಯಲಿಗೆ ತಂದಿದ್ದರು.
ಆನಂತರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಐಪಿಸಿ ಆಹಾರ ಕಲಬೆರೆಕೆ ತಡೆ ಕಾಯ್ದೆ ಅನ್ವಯ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಮುಖ ಆರೋಪಿ ದೊಡ್ಡರಾಜು ಮತ್ತು ಇತರೆ ಒಡೆತನದಲ್ಲಿದ್ದ ಗುತ್ತಿಗೆ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡ ನಂತರ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಹಾಲಿನ ಕಲಬೆರಕೆ ಗಂಭೀರ ಪ್ರಕರಣವಾಗಿದ್ದು, ಹೀಗಾಗಿ ಆರೋಪಿ ಮೇಲಿನ ಪ್ರಕರಣವನ್ನು ರದ್ದು ಪಡಿಸುವುದು ಸೂಕ್ತವಲ್ಲ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಆರೋಪಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ.












Click it and Unblock the Notifications