ಪ್ರತಾಪ್ ಸಿಂಹನೇ ಅಡ್ಜಸ್ಟ್‌ಮೆಂಟ್ ರಾಜಕಾರಣಿ-ಕೃಷಿ ಸಚಿವ ಚಲುವರಾಯಸ್ವಾಮಿ
ಮಂಡ್ಯ, ಜೂನ್ 14: ಕಾಂಗ್ರೆಸ್ ಪಕ್ಷ ಎಂದಿಗೂ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡಿಲ್ಲ. ಪ್ರತಾಪ್ ಸಿಂಹ ಮೊದಲ ಅಡ್ಜೆಸ್ಟ್‌ಮೆಂಟ್ ರಾಜಕಾರಣಿ. ಕುಮಾರಸ್ವಾಮಿ ಮತ್ತು ನಮ್ಮ ನಡುವೆ ಹೊಂದಾಣಿಕೆ ಇದೆ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿರುಗೇಟು ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಎಲ್ಲರ ಜೊತೆನೂ ಹಾಗೆಯೇ ಹೇಳುತ್ತಾರೆ. ಅಡ್ಜಸ್ಟ್‌ಮೆಂಟ್ ರಾಜಕಾರಣದಲ್ಲಿ ಅವರೇ ಮೊದಲು. ನಮ್ಮ ಮತ್ತು ಕುಮಾರಸ್ವಾಮಿ ನಡುವೆ ಹೊಂದಾಣಿಕೆ ರಾಜಕಾರಣವಿದೆ ಅಂತ ಅವರೇ ಹೇಳಿಕೊಂಡಿರುವಾಗ ನಾವು ಹೊಂದಾಣಿಕೆ ರಾಜಕಾರಣ ಮಾಡಿರುವುದು ಹೇಗೆ ಬರುತ್ತದೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಯಾರ ಬೆಂಬಲವನ್ನೂ ಪಡೆಯದೆ ನೇರವಾಗಿ ಚುನಾವಣೆ ಎದುರಿಸಿದೆ. ಜನರು ಆಶೀರ್ವದಿಸಿದ್ದರಿಂದ 135 ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸಿದೆ. ಆಗೆಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲಿ ಎಂಬ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ತೇಜೋವಧೆಗೆ ಪ್ರಯತ್ನಿಸಿದರು. ಹತ್ತೇ ದಿನದಲ್ಲಿ ಗ್ಯಾರಂಟಿಗಳನ್ನು ಜಾರಿಗೊಳಿಸಿದ ಮೇಲೆ ಈಗ ಹೊಂದಾಣಿಕೆ ರಾಜಕಾರಣದ ಬಗ್ಗೆ ತನಿಖೆ ನಡೆಸಲಿ ಎನ್ನುತ್ತಿದ್ದಾರೆ. ಯಾವುದನ್ನೂ ಬಿಡೋದಿಲ್ಲ. ಎಲ್ಲವನ್ನೂ ತನಿಖೆ ಮಾಡುತ್ತೇವೆ. ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು ಎಂದರು.
ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ
ಇನ್ನು ಸಂಸದ ಪ್ರತಾಪ್ ಸಿಂಹ ಅಡ್ಜೆಸ್ಟ್‌ಮೆಂಟ್ ರಾಜಕಾರಣ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಂಸದ ಪ್ರತಾಪ್ ಸಿಂಹ ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ. ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.
ಪ್ರತಾಪ್ ಸಿಂಹ ಯಾರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳಬೇಕು. ಯಾರು ಎಂದು ಅವರಿಗೆ ಗೊತ್ತಿರ ಬೇಕಲ್ಲ ಮಾಹಿತಿ ಇದ್ದರೆ ಹೇಳಲಿ. ರಾಜ್ಯಪಾಲರಿಗೆ ದೂರು ಕೊಡುವುದಾದರೆ ಕೊಡಲಿ ಎಂದ ಮುಖ್ಯಮಂತ್ರಿಗಳು ಪೇ ಸಿಎಂ ಕುರಿತು ತನಿಖೆ ಮಾಡಿಸಲು ಹೇಳಿರಲಿಲ್ಲ. ತನಿಖೆಯನ್ನು ಯಾವಾಗ , ಯಾರಿಂದ ಎಷ್ಟು ಹೊತ್ತಿಗೆ ಮಾಡಿಸಬೇಕು ಎನ್ನುವುದು ನಮಗೆ ಸೇರಿದ್ದು ಎಂದರು.












Click it and Unblock the Notifications