ಮಗ ತಪ್ಪು ಮಾಡಿದ್ರೆ ಅಪ್ಪ ಯಾಕೆ ರಾಜೀನಾಮೆ ನೀಡ್ಬೇಕು: ಕಾನೂನು ಸಚಿವ ಮಾಧುಸ್ವಾಮಿ ಪ್ರಶ್ನೆ
'ಶಾಸಕರ ಮಗ ಲಂಚ ತೆಗೆದುಕೊಂಡಿದ್ದಾರೆ ಹೀಗಾಗಿ ಮುಂದಿನ ಪರಿಣಾಮ ಅವರೇ ಎದುರಿಸುತ್ತಾರೆ. ಆದರೆ, ಈ ವಿಷಯದಲ್ಲಿ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು..?'
ಮಂಡ್ಯ, ಮಾರ್ಚ್ 03: ಶಾಸಕ ವಿರೂಪಾಕ್ಷಪ್ಪ ಪುತ್ರ, ಬಿಡಬ್ಲೂಎಸ್‌ಎಸ್‌ಬಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆ ಇಲ್ಲದ 6 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಪ್ರಶಾಂತ್ ಮಾಡಾಳ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಗ ಮಾಡಿರುವ ತಪ್ಪಿಗೆ ತಂದೆಗೆ ಯಾಕೆ ಶಿಕ್ಷೆ ನೀಡಬೇಕು. ಅವರೇಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿ ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳ್‌ರನ್ನು ಬಂಧಿಸಿದ್ದರು. ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ಸಹ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ದಾಖಲೆ ಇಲ್ಲದ 6 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದರು.

ಮಂಡ್ಯದ ಹುಲಿಕೆರೆಯಲ್ಲಿ ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ, "ನಾವು ಈ ವಿಷಯದ ಬಗ್ಗೆ ಹೇಳಿಕೆ ನೀಡಲು ಆಗುವುದಿಲ್ಲ. ಶಾಸಕರ ಮಗ ಮಗ ಸರ್ಕಾರಿ ಅಧಿಕಾರಿಯಾಗಿದ್ದಾರೆ. ಅವರ ಮಗ ಲಂಚ ತೆಗೆದುಕೊಂಡಿದ್ದಾರೆ ಹೀಗಾಗಿ ಮುಂದಿನ ಪರಿಣಾಮ ಅವರೇ ಎದುರಿಸುತ್ತಾನೆ. ಆದರೆ, ಈ ವಿಷಯದಲ್ಲಿ ಶಾಸಕರು ಯಾಕೆ ರಾಜೀನಾಮೆ ಕೊಡಬೇಕು..? ಎಂದು ಪ್ರಶ್ನೆ ಮಾಡಿದ್ದಾರೆ.
ವಿರೂಪಾಕ್ಷಪ್ಪನ ಮಗ ಲಂಚ ತೆಗೆದುಕೊಂಡರೆ ವಿರೂಪಾಕ್ಷಪ್ಪ ಏನು ಮಾಡ್ತಾರೆ. ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಯಾಕೆ ಬರೆ ಹಾಕಬೇಕು. ಶಾಸಕರ ಮಗ ಮಾಡಿರುವ ತಪ್ಪಿಗೆ ಮುಖ್ಯಮಂತ್ರಿಗಳು ಯಾಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಮೇಲೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, ಕಾಂಗ್ರೆಸ್ ಮಾಡಿರುವ 40% ಕಮಿಷನ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, "40% ದಂಧೆ ಮಾಡುವುದಕ್ಕೆ ಅವರು ಯಾರೂ ಮಂತ್ರಿಯಲ್ಲ. ಒಬ್ಬ ಸರ್ಕಾರಿ ಅಧಿಕಾರಿ, ಎಸಿಬಿಯಲ್ಲಿ ಇದ್ದವರು. ಶಾಸಕರಿಗೂ ಮುಖ್ಯಮಂತ್ರಿಗಳಿಗೂ ಇದರಲ್ಲಿ ಸಂಬಂಧವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಏನಾದ್ರು ಸಿಕ್ಕಿದರೆ ಅದನ್ನೇ ದೊಡ್ಡದು ಮಾಡಿಕೊಂಡು ಹೋಗ್ತಾರೆ. ದುಡ್ಡು ಸಿಕ್ಕ ತಕ್ಷಣ ಭ್ರಷ್ಟಾಚಾರ ಎನ್ನಲು ಆಗುವಿದಿಲ್ಲ. ದಾಖಲೆಗಳು ಸರಿಯಾಗಿ ಇಲ್ಲ ಎಂದರೆ ಅದು ಭ್ರಷ್ಟಾಚಾರ ಆಗುತ್ತದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಲಂಚ ಪ್ರಕರಣದಕ್ಕೆ ಕಿಡಿ ಕಾರಿದ್ದ ಕಾಂಗ್ರೆಸ್, "ಈ ಹಣ ಪೇಸಿಎಂಗೆ ತಲುಪಿಸುವುದಕ್ಕಾ ಅಥವಾ ಪೇಪಿಎಂಗೆ ತಲುಪಿಸುವುದಕ್ಕಾ..? ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ..? ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ..?" ಎಂದು ಸರಣಿ ಪ್ರಶ್ನೆಗಳ ಮೂಲಕ ಬಿಜೆಪಿ ನಾಯಕರ ಕಾಲೆಳೆಯುತ್ತಿದೆ.
ಗುರುವಾರ ಲೋಕಾಯುಕ್ತರು ಪೊಲೀಸರು ಬಂಧಿಸಿದ್ದ ಸರ್ಕಾರಿ ಅಧಿಕಾರಿ ಪ್ರಶಾಂತ್ ಮಾಡಾಳ್ ಮತ್ತು ಇತರ ನಾಲ್ವರನ್ನು ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.












Click it and Unblock the Notifications