ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ನೋಂದಣಿ ಆರಂಭ, ಶುಲ್ಕ ಮಾಹಿತಿ
ಮಂಡ್ಯ, ನವೆಂಬರ್ 18: ಸಕ್ಕರೆ ನಾಡು ಮಂಡ್ಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ತಯಾರಿಯನ್ನು ನಡೆಸುತ್ತಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಕನ್ನಡ ಜಾತ್ರೆಗೆ ಪ್ರತಿನಿಧಿಗಳ ನೋಂದಣಿ ಆರಂಭವಾಗಿದೆ. ಆನ್‌ಲೈನ್ ಮೂಲಕ ನೋಂದಣಿ ನಡೆಯಲಿದ್ದು, ಶುಲ್ಕವನ್ನು ನಿಗದಿ ಮಾಡಲಾಗಿದೆ. ಡಿಸೆಂಬರ್ 20, 21 ಮತ್ತು 22ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದಾರೆ. ಪ್ರತಿನಿಧಿಗಳ ನೋಂದಣಿಗೆ 600 ರೂ. ಶುಲ್ಕವನ್ನು ನಿಗದಿ ಮಾಡಲಾಗಿದ್ದು, 20 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, "ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ನೋಂದಣಿಯಾಗಿ ಭಾಗವಹಿಸಲು 600 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದಿರುವವರು ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು" ಎಂದರು.
ನೋಂದಣಿ ಮಾಹಿತಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಣಿ ಮಾಡಿಕೊಳ್ಳುವವರಿಗೆ ಆನ್‌ಲೈನ್ ಮೂಲಕವೇ ಶುಲ್ಕವನ್ನು ಪಾವತಿ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೋಂದಣಿಯಾಗುವವರಿಗೆ ವಸತಿಯ ಸ್ಥಳ, ವಿಳಾಸ, ನೋಡಲ್ ಅಧಿಕಾರಿಗಳ ಮೊಬೈಲ್ ಸಂಖ್ಯೆ ಮತ್ತು ಗುರುತಿನ ಚೀಟಿಯನ್ನು ಆನ್‌ಲೈನ್ ಮೂಲಕವೇ ನೀಡಲಾಗುತ್ತದೆ.
ಮಂಡ್ಯ ಜಿಲ್ಲಾಡಳಿತ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಯಾರಿಯನ್ನು ಆರಂಭಿಸಿದೆ. ಜಿಲ್ಲಾಧಿಕಾರಿ ಡಾ. ಕುಮಾರ ಸಮ್ಮೇಳನ ನಡೆಯಲಿರುವ ಸ್ಯಾಂಜೋ ಆಸ್ಪತ್ರೆ ಹಿಂಭಾಗವಿರುವ ಮೈದಾನಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದರು. ಅಧಿಕಾರಿಗಳಿಗೆ ಸೂಚನೆಗಳನ್ನು ಕೊಟ್ಟರು.
ಈ ಬಾರಿ ಮುಂಗಾರು ಮಳೆ ಉತ್ತಮವಾಗಿ ಸುರಿದು ಕೆಆರ್‌ಎಸ್ ಜಲಾಶಯ ಭರ್ತಿಯಾಗಿರುವ ಕಾರಣ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದೆ.
ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ಕಾರ್ಯಕ್ರಮಗಳಲ್ಲಿ ಶೇ 50ರಷ್ಟು ಮಂಡ್ಯ, ರಾಮನಗರ, ಮೈಸೂರು ಭಾಗದ ಕಲಾವಿದರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 31 ಜಿಲ್ಲೆಗಳ ಕಲಾ ತಂಡಗಳಿಗೂ ಸಹ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗದಿಯಾಗಿದ್ದರೂ ಸಹ ಇನ್ನೂ ಅಧ್ಯಕ್ಷರು ಯಾರು? ಎಂದು ತೀರ್ಮಾನವಾಗಿಲ್ಲ. ಮಹಿಳೆಯರಿಗೆ ಸಮ್ಮೇಳನಾಧ್ಯಕ್ಷರ ಪಟ್ಟ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶೀಘ್ರವೇ ಸಭೆ ನಡೆಸಿ ಅಧ್ಯಕ್ಷರನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಮುಸ್ಲಿಂ ಸಮುದಾಯದ ಸಾಧಕರನ್ನು, ಮಹಿಳೆಯನ್ನು ಸಮ್ಮೇಳನಾಧ್ಯಕ್ಷ ಹುದ್ದೆಗೆ ಪರಿಗಣಿಸಬೇಕು ಎಂಬ ಬೇಡಿಕೆ ಇದೆ. ಇದನ್ನು ಸಹ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಲೋಕ ದಿಗ್ಗಜರೇ ಅಧ್ಯಕ್ಷರಾಗಬೇಕು. ಸಾಹಿತ್ಯೇತರ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಬಾರದು ಎಂದು ಒತ್ತಾಯಿಸಲಾಗುತ್ತಿದೆ. ಅಧ್ಯಕ್ಷರ ಆಯ್ಕೆ ಕುರಿತು ಶೀಘ್ರವೇ ಸಭೆ ನಡೆಯುವ ನಿರೀಕ್ಷೆ ಇದೆ.












Click it and Unblock the Notifications