ಮೇಲುಕೋಟೆಯಲ್ಲಿ ವೈಭವದ ಮಹಾರಥೋತ್ಸವ
ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಅಂಗವಾಗಿ ಭಾನುವಾರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿ ರಥೋತ್ಸವ ಅದ್ಧೂರಿಯಾಗಿ ನಡೆದಿದೆ. ಅಪಾರ ಸಂಖ್ಯೆ ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು
ಮೇಲುಕೋಟೆ, ಮೇ 1: ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಅಂಗವಾಗಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಭಾನುವಾರ ಮಹಾರಥೋತ್ಸವ ವೈಭವದಿಂದ ನೆರವೇರಿತು.
ಸುಡು ಬಿಸಿಲನ್ನೂ ಲೆಕ್ಕಿಸದ ಭಕ್ತರು ರಾಮಾನುಜ ಯತಿರಾಜ ಎಂಬ ಜಯಘೋಷದಿಂದ ಮಹಾರಥವನ್ನು ಎಳೆದರು. ಬೆಳಗ್ಗೆ 10ರ ವೇಳೆಗೆ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಯಾತ್ರಾದಾನವಾದ ನಂತರ ಗೋವಿಂದ ರಾಜಮುಡಿ ಕಿರೀಟ ಧರಿಸಿದ ರಾಮಾನುಜರ ಉತ್ಸವ ರಥದ ಮಂಟಪಕ್ಕೆ ತಲುಪಿತು. ಅಲ್ಲಿ ಜೋಯಿಸರಿಂದ ಮುಹೂರ್ತ ಪಠಣೆ ನಂತರ ರಥಾರೋಹಣ ನಡೆಯಿತು.
ಮದ್ಯಾಹ್ನ 12ಕ್ಕೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮಹಾರಥ, 3.30ಕ್ಕೆ ಮಂಟಪಕ್ಕೆ ಮರಳಿತು. ಸರ್ವಾಲಂಕಾರ ಭೂಷಿತನಾದ ಗಜರಾಜ ಮತ್ತು ಕೇರಳದ ಚಂಡೆವಾದನ ರಥೋತ್ಸವಕ್ಕೆ ಮೆರುಗು ನೀಡಿತು.[ಮೇಲುಕೋಟೆ ಬಳಿ ರಾಮಾನುಜಾಚಾರ್ಯ ಪ್ರತಿಮೆ ಅನಾವರಣ]

ರಾತ್ರಿ ಮಂಟಪವಾಹನೋತ್ಸವ ಸಹ ಅದ್ಧೂರಿಯಾಗಿ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಅಧಿಕ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಚೆಲುವನಾರಾಯಣನ ದರ್ಶನ ಪಡೆದರು.
ವಿದ್ವಾನ್ ಆನಂದಾಳ್ವಾರ್, ರಾಮಾನುಜ ಸಹಸ್ರಮಾನೋತ್ಸವ ಸೇವಾದ ಅಧ್ಯಕ್ಷ ಸ್ಥಾನೀಕಂ ಸಂಪತ್ ಕುಮಾರನ್ ಸೇರಿದಂತೆ ಹಲವು ಗಣ್ಯರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಮೇಲುಕೋಟೆ ಎಸ್ ಐ ಮೋಹನ್ ಬಿ. ಪಾಟೀಲ್ ಪೊಲೀಸ್ ಭದ್ರತೆ ಒದಗಿಸಿದ್ದರು.[ಮೇಲುಕೋಟೆ ವೈರಮುಡಿ ಜಾತ್ರೆಯ ವೇಳೆ ನಡೆಯಿತೊಂದು ಪವಾಡ!]
ರಾಮಾನುಜರು ಇಲ್ಲಿನ ಸ್ಥಾನೀಕರಿಂದ ಭಿಕ್ಷೆ ಸ್ವೀಕರಿಸಿದ ಅಂಗವಾಗಿ ನಡೆಯುವ ಪ್ರಮುಖ ನೇಮಿಸೇವೆ ಕಾರ್ಯಕ್ರಮ ರಾತ್ರಿ ನೆರವೇರಿತು. ನಾಲ್ಕನೇ ಸ್ಥಾನೀಕ ಶ್ರೀನಿವಾಸನರಸಿಂಹನ್ ಗುರೂಜಿ ಕುಟುಂಬ ಭಿಕ್ಷಾ ಕೈಂಕರ್ಯ ಸೇವೆ ನಡೆಸಿದರು.
ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆದ ರಾಮಾನುಜರ ಸಹಸ್ರಮಾನೋತ್ಸವಕ್ಕೆ ಸರಕಾರ ಯಾವುದೇ ಅನುದಾನ ನೀಡದಿದ್ದರೂ ಮೇಲುಕೋಟೆಯಲ್ಲಿ ರಾಮಾನಜರ ಸಹಸ್ರಮಾನೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ವೈಭವಕ್ಕೂ ಕಡಿಮೆಯಾಗದಂತೆ ಉತ್ಸವಗಳು ನೆರವೇರಿದವು.

ಪ್ರತಿ ಉತ್ಸವಗಳಲ್ಲೂ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಆಕರ್ಷಕ ದೀಪಾಲಂಕಾರ, ಪುಷ್ಪ ಸೇವೆಗಳು, ಪ್ರಸಾದ ವಿನಿಯೋಗ, ಶುಚಿತ್ವ ಮತ್ತು ಭಕ್ತರಿಗೆ ಕುಡಿಯುವ ನೀರಿನ ಪೂರೈಕೆ ಹಾಗೂ ಇತರ ಮೂಲಸೌಕರ್ಯದ ವ್ಯವಸ್ಥೆಯಲ್ಲಿ ಯಾವುದೇ ಲೋಪ ಇಲ್ಲದಂತೆ ನೋಡಿಕೊಳ್ಳಲಾಗಿತ್ತು.[ಸಂತಾನಪ್ರಾಪ್ತಿಯ ಐತಿಹ್ಯವಿರುವ 'ಯಶಸ್ವೀ' ತೊಟ್ಟಿಲಮಡು ಹರಕೆ]
ರಾಮಾನುಜ ಸಹಸ್ರಮಾನೋತ್ಸವ ಸೇವಾದ ಜೊತೆಗೆ ಸ್ಥಾನೀಕರು, ಕೈಂಕರ್ಯಪರರು ಕೈಜೋಡಿಸಿ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ರಾಮಾನುಜರ ಉತ್ಸವದ ಕೈಂಕರ್ಯ ಯಶಸ್ವಿಯಾಗಿ ನಡೆಯಲು ಕಾರಣರಾದರು.












Click it and Unblock the Notifications