ಮೇಲುಕೋಟೆಯಲ್ಲಿ ಕಾರ್ತಿಕ ಮಾಸದ ಜಾತ್ರಾ ಮಹೋತ್ಸವ: ನ.22ರಂದು ‘ತೊಟ್ಟಿಲಮಡುಜಾತ್ರೆ’
ಮಂಡ್ಯ, ನವೆಂಬರ್ 18 : ದಂಪತಿಗಳ ಅಪೇಕ್ಷೆಯಂತೆ ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿಯ 'ತೊಟ್ಟಿಲಮಡು ಜಾತ್ರೆ' ಎಂದೇ ಪ್ರಖ್ಯಾತವಾದ ಮೇಲುಕೋಟೆ ಅಷ್ಠತೀರ್ಥೋತ್ಸವ ನವೆಂಬರ್ 22ರ ಬುಧವಾರ ನಡೆಯಲಿದೆ.
ಮದುವೆಯಾಗಿ ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂಪತಿಗಳು ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ. ವೈದ್ಯರೂ ಕೈಚೆಲ್ಲಿದ ಎಷ್ಟೋ ಪ್ರಕರಣಗಳ ದಂಪತಿಗೆ ತೊಟ್ಟಿಲಭಾಗ್ಯ ದೊರೆತಿರುವ ಕಾರಣ ಮಹೋತ್ಸವದಲ್ಲಿ ಹರಕೆಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ.

ಹರಕೆ ಸಲ್ಲಿಸಲು ಬರುವ ದಂಪತಿಗಳು ಮಡಿಲುತುಂಬಿ ಚೆಲುವನಾರಾಯಣಸ್ವಾಮಿಯ ಪಾದುಕೆಯ ಪಲ್ಲಕ್ಕಿಯೋಡನೆ ಸಾಗಿ ಗಿರಿಶಿಖರಗಳ ಮಧ್ಯೆ ಇರುವ ಔಷದೀಯ ಗುಣವಿರುವ ತೀರ್ಥಗಳಲ್ಲಿ ಸ್ನಾನ ಮಾಡಬೇಕು. ಇಷ್ಟೆಲ್ಲಾ ನಡೆಯಲು ಸಾಧ್ಯವಾಗದ ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠಗಂಗೆಯಲ್ಲಿ ಹರಕೆಯ ಸ್ನಾನಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಠಾರ್ಥ ಸಿದ್ಧಿಯಾಗುತ್ತದೆ.
ಅನುರೂಪ ಕಂಕಣಭಾಗ್ಯ ಅಪೇಕ್ಷಿಸುವವರು ಸಹ ಉತ್ಸವದಲ್ಲಿ ಪಾಲ್ಗೊಂಡರೆ ಶೀಘ್ರ ಇಷ್ಠಾರ್ಥದಂತೆ ಕಂಕಣಬಲ ಕೂಡಿಬರಲಿದೆ ಎಂಬ ನಂಬಿಕೆ ಅನೂಚಾನವಾಗಿ ರೂಡಿಯಲ್ಲಿದೆ. ಅಷ್ಠತೀರ್ಥೋತ್ಸವ ನವೆಂಬರ್ 22ರಂದು ಬೆಳಗ್ಗೆ 8-30ಕ್ಕೆ ಕಲ್ಯಾಣಿಯಲ್ಲಿ ಪವಿತ್ರಸ್ನಾನದೊಂದಿಗೆ ಆರಂಭವಾಗಿ ಸಂಜೆ 5 ಗಂಟೆಗೆ ಕಣಿವೆ ಬಳಿಯಿರುವ ವೈಕುಂಠಗಂಟೆ ತೊಟ್ಟಿಲಮಡು ಬಳಿ ಮುಕ್ತಾಯವಾಗುತ್ತದೆ.

ಋಷಿಮುನಿಗಳು ಭಗವಂತನನ್ನು ದ್ಯಾನಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿ ಸ್ವಾಮಿಯ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಠತೀರ್ಥೋತ್ಸವವಾಗಿದ್ದು, ರಾಜಮುಡಿ ಕಿರೀಟಧಾರಣೆಯೊಂದಿಗೆ ಉತ್ಸವ ಆರಂಭದ ವೇಳೆ ಕಲ್ಯಾಣಿಯಲ್ಲಿ ಪಾದುಕೆಗೆ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠಗಂಟೆಯಲ್ಲಿ ಸಮಾರೋಪ ಅಭಿಷೇಕ ನಡೆಯುತ್ತದೆ.
ನಂತರ ಯೋಗಾ ನರಸಿಂಹಸ್ವಾಮಿಯ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಠತೀರ್ಥೋತ್ಸವ ಮುಕ್ತಾಯವಾಗಲಿದೆ. ಮಕ್ಕಳ ಭಾಗ್ಯದ ಹರಕೆಕಟ್ಟಿಕೊಂಡ ದಂಪತಿಗಳು, ಭಕ್ತರು ಕಂಕಣಭಾಗ್ಯ ಅಪೇಕ್ಷಿತರು ಎಲ್ಲಾ ತೀರ್ಥಗಳಲ್ಲಿ ನಡೆಯುವ ಅಭಿಷೇಕದ ನಂತರ ಪವಿತ್ರಸ್ನಾನಮಾಡುವ ಸಂಪ್ರದಾಯವಿದೆ.
ನ. 20ರಂದು ರಾತ್ರಿ ರಾಜಮುಡಿ ಉತ್ಸವ ಪ್ರಖ್ಯಾತ ರಾಜಮುಡಿ ಉತ್ಸವ ನವೆಂಬರ್ 20ರ ಸೋಮವಾರ ರಾತ್ರಿ 7ಗಂಟೆಗೆ ನಡೆಯಲಿದೆ. ರಾಜಒಡೆಯರ್ ಸಮರ್ಪಿಸಿರುವ ವಜ್ರಖಚಿತ ರಾಜಮುಡಿಕಿರೀಟ, ಗಂಡುಬೇರುಂಡಪದಕ, ಹಾಗೂ ಇತರ ಅಮೂಲ್ಯ ಆಭರಣಗಳನ್ನು ಚೆಲುವನಾರಾಯಣನಿಗೆ ತೊಡಿಸಿ ರಾಜಮುಡಿ ಉತ್ಸವ ನೆರವೇರಿಸಲಾಗುತ್ತದೆ.
ಕಾರ್ತಿಕ ಮಾಸದ ರಾಜಮುಡಿ ಜಾತ್ರಾಮಹೋತ್ಸವ ನವೆಂಬರ್ 17ರಿಂದ ಆರಂಭವಾಗಿ 25ರವರೆಗೆ ಹತ್ತು ದಿನಗಳಕಾಲ ನಡೆಯಲಿದೆ ಇದೇ ಬ್ರಹ್ಮೋತ್ಸವದ 6ನೇ ದಿನದ ದಶಮಿ ತಿಥಿಯಂದು ಪ್ರಖ್ಯಾತ ಅಷ್ಠತೀರ್ಥೋತ್ಸವ ನೆರವೇರಲಿದೆ. ವೈರಮುಡಿ ಮತ್ತು ಕೃಷ್ಣರಾಜಮುಡಿ ಜಾತ್ರೆಯಂತೆ ಈ ಬ್ರಹ್ಮೋತ್ಸವದಲ್ಲಿ ಕಲ್ಯಾಣೋತ್ಸವ ಮತ್ತು ಮಹಾಭಿಷೇಕ ಇರುವುದಿಲ್ಲವಾದರೂ ಇತರ ಉತ್ಸವಗಳು ಸಾಂಕೇತಿಕವಾಗಿ ನಡೆಯುತ್ತಾ ಬಂದಿದೆ.












Click it and Unblock the Notifications