ಮೇಲುಕೋಟೆ ಬಾಹುಬಲಿ ಖ್ಯಾತಿಯ ರಾಮಸ್ವಾಮಿ ಅಯ್ಯಂಗಾರ್ ನಿಧನ
ಮಂಡ್ಯ, ಜೂನ್ 14 : ಮೇಲುಕೋಟೆಯ ಬಾಹುಬಲಿ ಎಂದೇ ಪ್ರಸಿದ್ಧರಾಗಿದ್ದ ಯೋಗ ನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ಅಡಿಗೆಮನೆ ಕೈಂಕರ್ಯ ಮಾಡುತ್ತಾ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಕಾಳಮೇಘಂ ರಾಮಸ್ವಾಮಿ ಅಯ್ಯಂಗಾರ್ (75) ಸೋಮವಾರ ನಿಧನರಾಗಿದ್ದಾರೆ.
ಕಳೆದ ಮೂರುದಿನಗಳಿಂದ ಜ್ವರದಿಂದ ಬಳಲುತ್ತಿದ್ದ ರಾಮಸ್ವಾಮಿ ಬೆಂಗಳೂರಿನಲ್ಲಿ ನಿಧನಹೊಂದಿದ್ದಾರೆ. ಭಾರೀ ಗಾತ್ರದ ಪಾತ್ರೆಯಲ್ಲಿ ಬೆಟ್ಟದ ಮಧ್ಯಭಾಗದ ಬಾವಿಯಿಂದ ನೀರು ತೆಗೆದುಕೊಂಡು ಯಾವುದೇ ಪ್ರಯಾಸವಿಲ್ಲದೆ ನೂರಾರು ಕಡಿದಾದ ಮೆಟ್ಟಿಲುಗಳನ್ನು ಹತ್ತುತ್ತಿದ್ದರು. ನರಸಿಂಹನ ಅಭಿಷೇಕ ಮತ್ತು ಪ್ರಸಾದಗಳಿಗೆ 6 ದಶಕಗಳ ಕಾಲ ನೀರು ತಂದು ಅರ್ಚಕರಿಗೆ ನೀಡುತ್ತಿದ್ದರು.
ದಿನಕ್ಕೆ ನಾಲ್ಕರಿಂದ ಐದು ಬಾರಿ ದಣಿವಿಲ್ಲದೆ ನೀರನ್ನು ತರುತ್ತಿದ್ದ ಅವರೂ ಒಂದೂ ದಿನವೂ ಅವರೂ ಧಣಿವಾಗಿದೆ ಎಂದೂ ಹೇಳಿಕೊಂಡಿರಲಿಲ್ಲ. ದೇವಾಲಯಕ್ಕೆ ಬರುವ ಭಕ್ತಾದಿಗಳೇ ಮೆಟ್ಟಿಲು ಮಧ್ಯೆ ಇರುವ ಸಲಾಕೆ ಹಿಡಿದು ಹತ್ತುತ್ತಿದ್ದರೆ, ಇವರೂ ಮಾತ್ರ ಇಳಿವಯಸ್ಸಿನಲ್ಲೂ ಭಾರಹೊತ್ತು ಸಲೀಸಾಗಿ 300ಕ್ಕೂ ಹೆಚ್ಚು ಮೆಟ್ಟಿಲೇರುತ್ತಿದ್ದರು. ಅವರ ಜೀವನಶೈಲಿ ಮೇಲುಕೋಟೆ ಜನತೆ ಮತ್ತು ಭಕ್ತರಿಗೆ ಮಾದರಿಯಾಗಿತ್ತು.

ಇದರ ಜೊತೆಗೆ ರಾಮಸ್ವಾಮಿ ಗೋವುಗಳ ಒಡನಾಟವನ್ನೂ ಬೆಳೆಸಿಕೊಂಡಿದ್ದ ರಾಮಸ್ವಾಮಿ, ನಾಟಿ ಹಸುಗಳನ್ನು ಸಹಾ ಸಾಕುತ್ತಿದ್ದರು. ಇತ್ತೀಚೆಗೆ ನಡೆದ ರಾಜಗೋಪುರ ಕಳಸ ಪ್ರತಿಷ್ಠಾಪನೆ ಮಹೋತ್ಸವದಲ್ಲೂ ಲವಲವಿಕೆಯಿಂದ ಪಾಲ್ಗೊಂಡಿದ್ದ ಅವರು ಎಂದೂ ಅನಾರೋಗ್ಯದಿಂದ ಹಾಸಿಗೆಯಲ್ಲಿ ಮಲಗಿರಲಿಲ್ಲ.
ಆದರೆ 3 ದಿನಗಳ ಹಿಂದೆ ಅನಾರೋಗ್ಯ ಪೀಡಿತಾಗಿದ್ದರು. ವಿಶೇಷವೆಂದರೆ ಸೌರಮಾನ ನರಸಿಂಹ ಜಯಂತಿಯಂದೇ ಅವರು ಕೊನೆಯುಸಿರೆಳೆದಿದ್ದಾರೆ. ರಾಮಸ್ವಾಮಿ ನಿಧನಕ್ಕೆ ಮೇಲುಕೋಟೆ ಶಾಸಕ ಸಿ. ಎಸ್. ಪುಟ್ಟರಾಜು ಮತ್ತು ನಾಗರಿಕರು ಕೈಂಕರ್ಯಪರರು ಕಂಬನಿ ಮಿಡಿದಿದ್ದಾರೆ.
ದೇವರ ಅಭಿಷೇಕ ಮತ್ತು ಪ್ರಸಾದ ತಯಾರಿಕೆಗೆ ಬೆಟ್ಟದ ಕೆಳಗಿನ ಕಲ್ಯಾಣಿಯಿಂದ ಅರವತ್ತಕ್ಕೂ ಹೆಚ್ಚು ವರ್ಷಗಳ ಕಾಲ ನೀರು ಸರಬರಾಜು ಮಾಡುವ ಪುಣ್ಯ ಕೆಲಸ ಮಾಡಿದ್ದಕ್ಕೆ , ಅವರ ಶಕ್ತಿ-ಸಾಮರ್ಥ್ಯವನ್ನು ಕಂಡು ಮೇಲುಕೋಟೆ ಬಾಹುಬಲಿ ಎಂದು ಹೆಸರು ನೀಡಿದ್ದರು.












Click it and Unblock the Notifications