ಇದು ನನ್ನ ಗೆಲುವಲ್ಲ, ಮಂಡ್ಯ ಸ್ವಾಭಿಮಾನದ ಗೆಲುವು: ಸುಮಲತಾ
ಬೆಂಗಳೂರು/ಮಂಡ್ಯ, ಮೇ 23: ಮಂಡ್ಯದ ಜನತೆ ಪ್ರಜಾಪ್ರಭುತ್ವದ ಕಿರೀಟವನ್ನು ಎತ್ತಿ ಹಿಡಿದಿದ್ದಾರೆ. ಹಣಬಲ ತೋಳ್ಬಲ ಎಲ್ಲವನ್ನೂ ಮೀರಿ ಆಮಿಷಗಳನ್ನು ಮೀರಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿದ್ದಾರೆ ಕೋಟಿ ಕೋಟಿ ಅನಂತ ಅನಂತ ಅಭಿನಂದನೆಗಳು ಎಂದು ಮಂಡ್ಯದ ಜನತೆಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಶುಭಕೋರಿದ್ದಾರೆ.
'ಇದು ನನ್ನ ಗೆಲುವಲ್ಲ, ಅಂಬರೀಷ್ ಗೆಲುವು, ಮಂಡ್ಯ ಜನರ ಸ್ವಾಭಿಮಾನದ ಗೆಲುವು' ಎಂದು ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡರು.
'ನನಗೆ ಆತ್ಮವಿಶ್ವಾಸ ಇತ್ತು, ನಂಬಿಕೆ ಇತ್ತು, ನನ್ನ ಜೊತೆಗಿದ್ದ ಹಿತೈಶಿಗಳು, ಬೆಂಬಲಿಗರು ಕೂಡಾ ಸರ್ಕಾರ ಎದುರು ಹಾಕಿಕೊಂಡು ಧೈರ್ಯವಾಗಿ ನಿಂತಿದ್ದರು. ನಾನು ಪ್ರತಿಯೊಬ್ಬರಿಗೆ ಧನ್ಯವಾದ ಅರ್ಪಿಸಬೇಕಿದೆ. ಈ ಬಗ್ಗೆ ನಾಳೆ ಸುದ್ದಿಗೋಷ್ಠಿಯಲ್ಲಿ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ' ಎಂದರು.

ಮಾಧ್ಯಮದವರು ನಿಷ್ಪಕ್ಷಪಾತವಾಗಿ ಸುದ್ದಿ ಪ್ರಸಾರ ಮಾಡಿ, ಚುನಾವಣಾ ಪ್ರಕ್ರಿಯೆ, ಪ್ರಜಾಪ್ರಭುತ್ವವನ್ನು ಉಳಿಸಿದ್ದೀರಿ ಎಂದು ಮಾಧ್ಯಮಕ್ಕೆ ಧನ್ಯವಾದ ಅರ್ಪಿಸಿದರು.
ಚುನಾವಣಾಪೂರ್ವ ಸಮೀಕ್ಷೆ, ಎಕ್ಸಿಟ್ ಪೋಲ್ ಗಳಲ್ಲಿ ಸುಮಲತಾಗೆ ಸುಲಭ ಜಯ ಕಷ್ಟ ಎಂದೇ ಹೇಳಲಾಗಿತ್ತು. ಆದರೆ, ಎಲ್ಲಾ ನಿರೀಕ್ಷೆಗೂ ಮೀರಿ ಅಂತಿಮ ಫಲಿತಾಂಶದಲ್ಲಿ ಸುಮಲತಾ ಅವರು 1 ಲಕ್ಷ 13 ಸಾವಿರಕ್ಕೂ ಅಧಿಕ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸೂಚನೆ: ಅಧಿಕೃತ ಪ್ರಕಟಣೆ ನಂತರ ಮತಗಳ ಅಂತರದಲ್ಲಿ ವ್ಯತ್ಯಾಸವಾಗಬಹುದು.












Click it and Unblock the Notifications