Get Updates
Get notified of breaking news, exclusive insights, and must-see stories!

ವಿಶ್ಲೇಷಣೆ : ಮಂಡ್ಯದಲ್ಲಿ ಮೈತ್ರಿಕೂಟದ ಆಟ ನಡೆಯೋದು ಬಲು ಕಷ್ಟ!

Recommended Video

      Mandya Lok Sabha Elections 2019 : ಮಂಡ್ಯದಲ್ಲಿ ಮೈತ್ರಿ ಸರ್ಕಾರದ ಆಟ ಸೂತ್ರಗಳು ಯಾವುದು ನಡೆಯೋದಿಲ್ಲ

      ಮಂಡ್ಯ, ಮಾರ್ಚ್ 16 : ಇಡೀ ರಾಜ್ಯ ಕುತೂಹಲದಿಂದ ಎದುರು ನೋಡುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಅಚ್ಚರಿಯನ್ನು ಹುಟ್ಟುಹಾಕುವುದರೊಂದಿಗೆ ಮೈತ್ರಿ ಆಟ ಇಲ್ಲಿ ನಡೆಯಲ್ಲ ಎಂಬ ಸಂದೇಶವನ್ನು ರಾಜ್ಯದ ಜನತೆಗೆ ರವಾನಿಸುತ್ತಿದೆ.

      ಇಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕೀಯ ಪಕ್ಷಗಳ ನಾಯಕರ ನಡೆಗಳು ಕೂಡ ಅನುಮಾನವನ್ನು ಹುಟ್ಟುಹಾಕುತ್ತಿದ್ದು, ಕೊನೆ ಘಳಿಗೆಯಲ್ಲಿ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದೇ ನಿಗೂಢವಾಗಿ ಉಳಿದು ಹೋಗಿದೆ.

      ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಅವರು ಕಣಕ್ಕೆ ಇಳಿದು ಜಿಲ್ಲೆಯಾದ್ಯಂತ ಸಂಚಾರ ನಡೆಸುವ ಮೂಲಕ ಸಂಚಲನವನ್ನು ಹುಟ್ಟು ಹಾಕಿದ್ದರೆ, ಇತ್ತ ಜೆಡಿಎಸ್‌ನ ನಿಷ್ಠಾವಂತ ನಾಯಕರು ನಿಖಿಲ್ ಕುಮಾರ ಸ್ವಾಮಿ ಅವರನ್ನು ಗೆಲ್ಲಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಅವರ ಗೆಲುವಿಗಾಗಿ ಹೊಸ ತಂತ್ರಗಳನ್ನು ಹುಡುಕತೊಡಗಿದ್ದಾರೆ.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಪುತ್ರನನ್ನು ಕಣಕ್ಕಿಳಿಸಿದ ಬಳಿಕ ಈ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದು, ಶತಾಯಗತಾಯ ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ ತನ್ನ ಸಚಿವ ಸಂಪುಟದ ಸಹದ್ಯೋಗಿಗಳಿಗೂ ಈ ಸಂಬಂಧ ಕಟ್ಟಪ್ಪಣೆಯನ್ನು ನೀಡಿದ್ದಾರೆ. ಹೀಗಾಗಿ ಸ್ವಾಮಿ ನಿಷ್ಠೆ ತೋರಿಸಲೇ ಬೇಕಾದ ಪರಿಸ್ಥಿತಿಯಲ್ಲಿರುವ ಜೆಡಿಎಸ್ ಮುಖಂಡರು ಹಗಲು ರಾತ್ರಿ ಎನ್ನದೆ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಲಸ ಮಾಡುತ್ತಿದ್ದಾರೆ.

      ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ದೇವೇಗೌಡರ ಕುಟುಂಬದ ಬಗ್ಗೆ, ನಿಖಿಲ್ ಕುಮಾರಸ್ವಾಮಿ ಅವರ ಬಗ್ಗೆ ವಿರುದ್ಧವಾದ ಸಂದೇಶಗಳು, ಜೋಕ್‌ಗಳು ಹರಿದು ಬರುತ್ತಿದ್ದು ಅದು ತ್ವರಿತಗತಿಯಲ್ಲಿ ಟ್ರೋಲ್ ಆಗುತ್ತಿರುವುದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

       ಎಲ್ಲರನ್ನೂ ಭೇಟಿ ಮಾಡುತ್ತಿರುವ ಸುಮಲತಾ

      ಎಲ್ಲರನ್ನೂ ಭೇಟಿ ಮಾಡುತ್ತಿರುವ ಸುಮಲತಾ

      ಅಭಿಮಾನಿಗಳ ಆಗ್ರಹದ ಮೇರೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿರುವ ಸುಮಲತಾ ಅಂಬರೀಶ್ ಅವರು ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದು, ಕಾಂಗ್ರೆಸ್ ಮುಖಂಡರು, ರೈತ ನಾಯಕರು, ಮಹಿಳಾ ನಾಯಕಿಯರು, ಕಾರ್ಯಕರ್ತರು, ರೈತ ಸಂಘದ ಕಾರ್ಯಕರ್ತರು ಹೀಗೆ ಎಲ್ಲರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಅಷ್ಟೇ ಅಲ್ಲದೆ, ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಮುಖಂಡರೂ ಆಗಿರುವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರಿರುವುದು ಜೆಡಿಎಸ್‌ ಪಾಳಯದಲ್ಲಿ ಆತಂಕ ತಂದಿದೆ.

      ಸುಮಲತಾ ನಡೆ ಇನ್ನೂ ನಿಗೂಢ

      ಸುಮಲತಾ ನಡೆ ಇನ್ನೂ ನಿಗೂಢ

      ಸದ್ಯದ ಮಟ್ಟಿಗೆ ಸುಮಲತಾ ಅಂಬರೀಶ್ ಅವರ ನಡೆ ಕೂಡ ಇನ್ನೂ ನಿಗೂಢವಾಗಿಯೇ ಇದೆ. ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಾರೋ ಅಥವಾ ಕೊನೆಗಳಿಗೆಯಲ್ಲಿ ಬಿಜೆಪಿಯತ್ತ ಒಲವು ತೋರುತ್ತಾರೋ ಎಂಬುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ. ಕಾಂಗ್ರೆಸ್‌ನಿಂದ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಹೀಗಾಗಿ ಅವರು ಪರ್ಯಾಯ ಮಾರ್ಗ ಕಂಡು ಕೊಳ್ಳುವುದು ಅನಿವಾರ್ಯವಾಗಿದೆ. ಅವರ ಆ ನಡೆ ಹೇಗಿರಲಿದೆ ಎಂಬುದೇ ಇದೀಗ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಇದೆಲ್ಲದರ ಜೊತೆ ಕೆಲ ಕನ್ನಡ ಸಿನೆಮಾ ಸ್ಟಾರ್ ಗಳು ಕೂಡ ಸುಮಲತಾ ಅವರಿಗೆ ಬೆಂಬಲವಾಗಿ ಪ್ರಚಾರ ನಡೆಸಲು ನಿರ್ಧರಿಸಿರುವುದು ಜೆಡಿಎಸ್ಸಿಗೆ ತಲೆನೋವು ತಂದಿದೆ.

      ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರು

      ಸುಮಲತಾ ಜೊತೆ ಕಾಂಗ್ರೆಸ್ ಮುಖಂಡರು

      ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆಯನ್ನು ಎದುರಿಸುವುದಾಗಿ ಹೇಳುತ್ತಿದ್ದರೂ, ಮಂಡ್ಯದಲ್ಲಿ ಮಾತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಬದ್ಧ ವೈರಿಯಾಗಿಯೇ ಇರುವುದು ಕಂಡು ಬರುತ್ತಿದೆ. ಇಲ್ಲಿ ಒಂದಷ್ಟು ರೈತ ಸಂಘದ ಪ್ರಭಾವವೂ ಇದೆ. ರೈತ ಸಂಘ ಈ ಹಿಂದೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಈಗಿನ ಸ್ಥಿತಿಯನ್ನು ಗಮನಿಸಿದರೆ ಸುಮಲತಾ ಅವರೊಂದಿಗೆ ಕಾಂಗ್ರೆಸ್‌ನ ಮುಖಂಡರು, ರೈತ ಸಂಘದ ಮುಖಂಡರು ಕಾಣಿಸಿಕೊಳ್ಳುತ್ತಿರುವುದು ಜೆಡಿಎಸ್‌ಗೆ ಇನ್ನಷ್ಟು ಭಯ ಹುಟ್ಟಿಸಿದೆ.

      ಜೆಡಿಎಸ್ ನಿಂದ ಬ್ಲಾಕ್ ಮೇಲ್ ತಂತ್ರ

      ಜೆಡಿಎಸ್ ನಿಂದ ಬ್ಲಾಕ್ ಮೇಲ್ ತಂತ್ರ

      ಏನೇ ಆದರೂ ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಬೆಂಬಲ ನೀಡುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಜೆಡಿಎಸ್ ಕಡೆಯಿಂದ ಬ್ಲಾಕ್ ಮೇಲ್ ತಂತ್ರ ಹೊರ ಬರತೊಡಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಮಂಡ್ಯದಲ್ಲಿ ಜೆಡಿಎಸ್‌ ಅನ್ನು ಬೆಂಬಲಿಸದೆ ಹೋದರೆ ಮೈಸೂರು ಕ್ಷೇತ್ರದಲ್ಲಿ ನಾವು ಕೂಡ ಅದೇ ರೀತಿಯ ತೀರ್ಮಾನ ಕೈಗೊಳ್ಳುವುದಾಗಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅವಕಾಶ ನೀಡಲಾಗಿದೆ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಕೆಲಸ ಮಾಡಿದರೆ ಮೈಸೂರಿನಲ್ಲಿ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಕೆಲಸ ಮಾಡುತ್ತದೆ ಎಂಬ ಎಚ್ಚರಿಕೆಯ ಸಂದೇಶ ಅದಾಗಿದೆ.

      ಸುಮಲತಾ ಬೆನ್ನಿಗೆ ನಿಂತ ರೈತ ಸಂಘ

      ಸುಮಲತಾ ಬೆನ್ನಿಗೆ ನಿಂತ ರೈತ ಸಂಘ

      ಮಂಡ್ಯ ಕ್ಷೇತ್ರದ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ರೈತ ಸಂಘ ಒಂದಷ್ಟು ಪ್ರಾಬಲ್ಯ ಹೊಂದಿದೆ. ಇದು ರೈತ ನಾಯಕ ದಿ. ಪುಟ್ಟಣ್ಣಯ್ಯ ಅವರ ಕ್ಷೇತ್ರ. ಅವರು ಬದುಕಿದ್ದಾಗಲೂ ಜೆಡಿಎಸ್‌ನೊಂದಿಗೆ ಸಖ್ಯವಿರಲಿಲ್ಲ. ಅಲ್ಲಿ ಜೆಡಿಎಸ್ ಮತ್ತು ರೈತ ಸಂಘದ ಕಾರ್ಯಕರ್ತರ ನಡುವೆ ಆಗಾಗ್ಗೆ ಜಟಾಪಟಿಗಳು ನಡೆಯುತ್ತಲೇ ಇದ್ದವು. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರೈತ ಸಂಘಕ್ಕೆ ಬೆಂಬಲ ನೀಡಿತ್ತು. ಇದೀಗ ಸುಮಲತಾ ಅವರ ಬೆನ್ನಿಗೆ ರೈತ ಸಂಘ ನಿಂತಿದೆ. ಜತೆ ಜತೆಗೆ ಕಾಂಗ್ರೆಸ್ ಮುಖಂಡರು ಸುಮಲತಾ ಅವರು ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೈತಸಂಘದ ಕಾರ್ಯಕರ್ತರು ಸುಮಲತಾ ಅವರಿಗೆ ಹಸಿರು ಟವಲ್ ಹಾಕಿ ಅಭಿನಂದಿಸುತ್ತಿದ್ದಾರೆ. ಜತೆಗೆ ಹಸಿರು ಟವಲ್ ಹಿಡಿದು ಹಾರಾಡಿಸುತ್ತಾ ರೈತ ಸಂಘದ ನಾಯಕ ದಿ.ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಜೈಕಾರ ಕೂಗುತ್ತಿದ್ದಾರೆ.

      ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಿದ್ದು ಹೇಳಿಕೆ

      ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಸಿದ್ದು ಹೇಳಿಕೆ

      ಕಾಂಗ್ರೆಸ್ ಮುಖಂಡರು ಬೆಂಬಲ ನೀಡುವುದನ್ನು ನೋಡಿದ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಅವರು ಸುಮಲತಾ ಅಂಬರೀಶ್ ಕಾಂಗ್ರೆಸ್ ಪಕ್ಷದವರೇ, ಆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿಲ್ಲ ಎಂಬ ಅಡ್ಡಗೋಡೆಯ ಮೇಲೆ ದೀಪವಿಟ್ಟಂತ ಹೇಳಿಕೆ ನೀಡುತ್ತಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಅವರ ಅಣತಿಯ ಮೇರೆಗೆ ಡಿಕೆ ಶಿವಕುಮಾರ್ ಅವರು ಮಂಡ್ಯದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಬೇಕು ಎಂದು ಹೇಳಿ ಬಂದಾಗಿದೆ. ಆದರೂ, ಕೆಲವೊಬ್ಬರು ಕಾಂಗ್ರೆಸ್ ನಾಯಕರು ಈ ಆದೇಶಕ್ಕೆ ಕ್ಯಾರೆ ಅನ್ನದೆ ಸುಮಲತಾ ಅವರನ್ನೇ ಬೆಂಬಲಿಸುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದ ಮೇಲೆ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಆಟ ನಡೆಯಲ್ಲ ಎಂಬುದಂತು ಸತ್ಯ.

      ಕೆಳೆದ ಉಪ ಚುನಾವಣೆಯಲ್ಲಿ ಏನಾಗಿತ್ತು?

      ಕೆಳೆದ ಉಪ ಚುನಾವಣೆಯಲ್ಲಿ ಏನಾಗಿತ್ತು?

      ಮಂಡ್ಯದ ಸಂಸದರಾಗಿದ್ದ ಸಿಎಸ್ ಪುಟ್ಟರಾಜು ಅವರು ಮೇಲುಕೋಟೆಯಿಂದ ವಿಧಾನಸಭೆಗೆ ಆಯ್ಕೆಯಾದ ನಂತರ ಅವರು ರಾಜೀನಾಮೆ ನೀಡಿದ್ದರು. ಈ ಕಾರಣದಿಂದಾಗಿ ನಡೆದಿದ್ದ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ನ ಶಿವರಾಮೇಗೌಡ ಅವರು ಬಿಜೆಪಿಯ ಡಾ. ಸಿದ್ದರಾಮಯ್ಯ ಅವರನ್ನು 3 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದರು. ಇದೀಗ ಶಿವರಾಮೇಗೌಡ ಅವರ ಬದಲಾಗಿ ಎಚ್ ಡಿ ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಏಪ್ರಿಲ್ 18ರಂದು ಮೊದಲ ಹಂತದ ಚುನಾವಣೆಯಲ್ಲಿ ಮಂಡ್ಯದಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+