Sumalatha: ಮಂಡ್ಯದಲ್ಲಿ ಒಬ್ಬೊಂಟಿಯಾದ ಸಂಸದೆ ಸುಮಲತಾ ಅಂಬರೀಷ್!
ಮಂಡ್ಯ, ಫೆಬ್ರವರಿ 29: ರಾಜ್ಯದಲ್ಲಿ ಮಂಡ್ಯ ರಾಜಕಾರಣ ಯಾವಾಗಲೂ ಕುತೂಹಲಕಾರಿಯೇ.... ಹಲವು ದಶಕಗಳ ಕಾಲ ಕಾಂಗ್ರೆಸ್ ನೆಲೆಯಾಗಿದ್ದ ಕ್ಷೇತ್ರವನ್ನು ಜೆಡಿಎಸ್ ಭದ್ರನೆಲೆ ಮಾಡಿಕೊಂಡಿತ್ತು. ಇದಾದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದು ಕಳೆದ ವರ್ಷವೇ.
ಅದು ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿದ ಕಾರಣ ನಟಿ ಸುಮಲತಾ ಅಂಬರೀಷ್ ಭರ್ಜರಿ ಗೆಲುವು ಸಾಧಿಸಿದ್ದರು. ಅದರೆ, ಈ ಬಾರಿ ಪರಿಸ್ಥಿತಿ ಮೊದಲಿನ ಹಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯದಲ್ಲಿ ಯಾರು ಚುನಾವಣೆಗೆ ನಿಲ್ಲುತ್ತಾರೆ ಎಂಬುದೇ ದೊಡ್ಡ ಕುತೂಹಲ ಹುಟ್ಟುಹಾಕಿದೆ. ಹಾಲಿ ಸಂಸದೆ ಸುಮಲತಾ ಅಂಬರೀಷ್ ಮತ್ತೆ ಕಣಕ್ಕೆ ಇಳಿಯುವುದಕ್ಕೆ ಹರಸಾಹಸ ಮಾಡುತ್ತಿದ್ದಾರೆ.

ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಿಲ್ಲುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಅದರ ಬೆನ್ನಲ್ಲೆ ದೆಹಲಿಗೆ ದೌಡಾಯಿಸಿದ್ದ ಸಂಸದೆ ಸುಮಲತಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು. ಇದಾದ ನಂತರ ಎಚ್ ಡಿ ಕುಮಾರಸ್ವಾಮಿ ಮತ್ತು ನಿಖಿಲ್ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಹೀಗಾಗಿ ಇಲ್ಲಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಮಂಡ್ಯ ಈ ಮೈತ್ರಿ ಪಕ್ಷಗಳಿಗೆ ತಲೆನೋವಾಗಿದೆ.
ಪಟ್ಟು ಬಿಡದ ಸುಮಲತಾ- ಜೊತೆಯಾಗದ ಜನತೆ!
ಸಂಸದೆ ಸುಮಲತಾ ಅಂಬರೀಷ್ ಈ ಬಾರಿಯು ಮಂಡ್ಯದಿಂದ ಕಣಕ್ಕಿಳಿಯಬೇಕು ಎಂದು ಪಣ ತೊಟ್ಟಂತಿದೆ. ಬಿಜೆಪಿಗೆ ಬೆಂಬಲ ಸೂಚಿಸಿರುವ ಅವರಿಗೆ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು ಎಂಬ ಹಠವಿದೆ. ಆದರೆ, ಕ್ಷೇತ್ರದ ಜನರಿಂದ ಅವರು ದೂರವಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಯಾವಾಗಲೂ ಬೆಂಗಳೂರಿನಲ್ಲಿಯೇ ಇರುವ ಅವರು ಕ್ಷೇತ್ರದ ಜನರಿಂದ ದೂರವಾಗಿದ್ದಾರೆ. ಹಾಗಾಗಿಯೇ ಅವರ ಕ್ಷೇತ್ರ ಉಳಿಸಿಕೊಳ್ಳುವ ಹಠಕ್ಕೆ ಯಾರು ಜೊತೆಯಾಗುತ್ತಿಲ್ಲ!.

ದೆಹಲಿ - ಬಿಜೆಪಿ ಎಂದು ಓಡಾಡುವ ಸಂಸದೆ ಸುಮಲತಾ ತಮ್ಮದೇ ಕ್ಷೇತ್ರದ ಜನರೊಂದಿಗೆ ಸಂಪರ್ಕ ಸಾಧಿಸುವಲ್ಲಿ ವಿಫಲತಾಗಿದ್ದಾರೆ. ಸ್ವಾಭಿಮಾನದ ಹೆಸರಲ್ಲಿ ಕಳೆದ ಬಾರಿ ಚುನಾವಣೆ ಎದುರಿಸಿದ ಅವರು ಒಂದು ಕಾರ್ಯಕರ್ತರ ಪಡೆಯನ್ನು ಕಟ್ಟಿಕೊಂಡಿಲ್ಲ. ಜೊತೆಗೆ ಸ್ಥಳೀಯರೊಂದಿಗೆ ಉತ್ತಮ ಒಡನಾಟವನ್ನು ಕೂಡ ಇಟ್ಟುಕೊಂಡಿಲ್ಲ. ಒಂದು ಸುದ್ದಿಗೋಷ್ಠಿ ಮಾಡುವಾಗ ಕೂಡ ಮಂಡ್ಯದ ಜನತೆ ಅವರೊಂದಿಗೆ ಇರುವುದಿಲ್ಲ. ಒಂಟಿಯಾಗಿಯೇ ನಡೆಸುತ್ತಾರೆ ಎಂಬುದು ಸ್ಥಳೀಯರ ಆರೋಪ.
ಸುಮಲತಾಗೆ ಸಾಥ್ ಕೊಡುತ್ತಿಲ್ಲ ಅಂಬರೀಷ್ ಅಭಿಮಾನಿಗಳು!
ಇನ್ನು, ನಟ, ಮಾಜಿ ಸಚಿವ ಅಂಬರೀಷ್ ಅವರ ನಿಧನದ ನಂತರ ಸುಮಲತಾ ಅವರ ಜೊತೆಗಿದ್ದ ಎಷ್ಟೊಂದು ಅಂಬರೀಷ್ ಅಭಿಮಾನಿಗಳು ಈಗ ಸಂಸದೆ ಜೊತೆಗಿಲ್ಲ. ಅಭಿಮಾನಿಗಳಿರಲಿ ಅಂಬರೀಷ್ ಅವರ ಜೊತೆಗೆ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದರಲ್ಲಿ ಅನೇಕರು ಈಗ ಸುಮಲತಾ ಜೊತೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಟ ದರ್ಶನ್, ಯಶ್, ರಾಕ್‌ಲೈನ್ ವೆಂಕಟೇಶ್ ಮಾತ್ರ ಆಗ್ಗಾಗೆ ಅವರ ಜೊತೆಗೆ ಇರುತ್ತಾರೆ. ಈ ಬಾರಿಯ ಚುನಾವಣೆಗೆ ನಿಂತರೆ ಅವರು ಪ್ರಚಾರಕ್ಕೆ ಬರುವುದು ಕೂಡ ಅನುಮಾನ ಎನ್ನಲಾಗುತ್ತಿದೆ.
ಮಂಡ್ಯದಲ್ಲಿ ನೆಲೆಸದ, ಅವರ ಜೊತೆಗೆ ಬರೀ ಸಂದರ್ಶನಗಳನ್ನಷ್ಟೆ ಮಾಡಿ ಸುಮ್ಮನಾಗುತ್ತಿದ್ದ ಸುಮಲತಾ ಅವರಿಗೆ ಟಿಕೆಟ್ ನೀಡಲೇ ಬೇಕು ಎಂದು ಪಟ್ಟು ಹಿಡಿದು ಕೂರುವ ಅಭಿಮಾನಿ ಅಥವಾ ಕಾರ್ಯಕರ್ತರ ಬಳಗವಿಲ್ಲ. ಹೀಗಾಗಿ ಅವರು ಕೂಡ ಗಟ್ಟಿ ದನಿಯಲ್ಲಿ ಬಿಜೆಪಿ ಬಳಿ ಟಿಕೆಟ್ ಕೇಳುತ್ತಿಲ್ಲ. ಇದೆಲ್ಲವನ್ನು ನೋಡಿದರೇ ಈ ಲೋಕ ಸಭಾ ಚುನಾವಣಾ ಸಮರದಲ್ಲಿ ಸುಮಲತಾ ಅವರು ಒಬ್ಬೊಂಟಿಯಾಗಿರುವುದು ಮಾತ್ರ ಸತ್ಯ.












Click it and Unblock the Notifications