ಮಂಡ್ಯ ಉಪ ಚುನಾವಣೆ : ಕಾಂಗ್ರೆಸ್‌ಗೆ ಬಿಸಿತುಪ್ಪವಾದ ರಮ್ಯಾ ಅಭಿಮಾನಿಗಳು!
Recommended Video

ಮಂಡ್ಯ, ಅಕ್ಟೋಬರ್ 22 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಮಂಡ್ಯದ ರಮ್ಯಾ ಅಭಿಮಾನಿಗಳು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರಿಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಅವರು ಕಣದಲ್ಲಿದ್ದಾರೆ.
ಆದರೆ, ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರ ಅಭಿಮಾನಿಗಳು ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರನ್ನು ಬೆಂಬಲಿಸುವುದಿಲ್ಲ. ಅವರನ್ನು ಸೋಲಿಸಲು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಎಲ್.ಆರ್.ಶಿವರಾಮೇಗೌಡ ಅವರ ವಿರುದ್ಧ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಇರುವ ಕಾರಣ ಅವರನ್ನು ಸಮಾಧಾನಪಡಿಸಲು ಅಕ್ಟೋಬರ್ 23ರಂದು ಕನಕ ಭವನದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ....

ಎಲ್.ಆರ್.ಶಿವರಾಮೇಗೌಡ ವಿರುದ್ಧ ಆಕ್ರೋಶ
'ಶಿವರಾಮೇಗೌಡರು ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ರಮ್ಯಾ ಮೇಡಂಗೆ ಅನ್ಯಾಯ ಮಾಡಿದ್ದಾರೆ. ಅವರು ಮಂಡ್ಯಕ್ಕೆ ಬಾರದಂತೆ ಮಾಡಿದ್ದಾರೆ. ಆದ್ದರಿಂದ, ಅವರ ವಿರುದ್ಧ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಮಗೆ ಈಗ ಇರುವ ಆಯ್ಕೆ ಬಿಜೆಪಿ ಮಾತ್ರ' ಎಂದು ರಮ್ಯಾ ಅಭಿಮಾನಿ ಮತ್ತು ಕಾಂಗ್ರೆಸ್ ಕಾರ್ಯಕರ್ತ ಗುಣಶೇಖರ್ ಹೇಳಿದ್ದಾರೆ.

ರಮ್ಯಾ ಸೋಲಿಗೆ ನಾನೇ ಕಾರಣ ಎಂದಿದ್ದರು
2014ರ ಲೋಕಸಭೆ ಚುನಾವಣೆ ಸಮಯದಲ್ಲಿ ಎಲ್.ಆರ್.ಶಿವರಾಮೇಗೌಡ ಅವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಜೆಡಿಎಸ್ ಸೇರಿದ ನಂತರ ರಮ್ಯಾ ಸೋಲಿಗೆ ತಾನೇ ಕಾರಣ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಅಲ್ಲದೇ ರಮ್ಯಾ ಅವರನ್ನು ಫ್ಲಾಯಿಂಗ್ ಸ್ಟಾರ್ ಎಂದು ಕರೆದಿದ್ದರು. ಆದ್ದರಿಂದ, ಉಪ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಬಿಜೆಪಿಗೆ ನಮ್ಮ ಬೆಂಬಲ
ನವೆಂಬರ್ 3ರಂದು ನಡೆಯುವ ಉಪ ಚುನಾವಣೆಯಲ್ಲಿ ಎಲ್.ಆರ್.ಶಿವರಾಮೇಗೌಡ ಅವರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ರಮ್ಯಾ ಅವರು ಗೆದ್ದಿದ್ದರೆ ಈ ಉಪ ಚುನಾವಣೆ ಬರುತ್ತಲೇ ಇರಲಿಲ್ಲ. ರಮ್ಯಾ ವಿರುದ್ಧವಾಗಿ ಕೆಲಸ ಮಾಡಿರುವ ಶಿವರಾಮೇಗೌಡರಿಗೆ ನಮ್ಮ ಬೆಂಬಲ ಇಲ್ಲ. ಅವರ ವಿರುದ್ಧ ಕೆಲಸ ಮಾಡುತ್ತೇವೆ ಎಂದು ರಮ್ಯಾ ಅಭಿಮಾನಿಗಳು ಹೇಳಿದ್ದಾರೆ.

ಡಾ.ಸಿದ್ದರಾಮಯ್ಯ ಅಭ್ಯರ್ಥಿ
ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ. ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ. ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ರಮ್ಯಾ ಅಭಿಮಾನಗಳ ಘೋಷಣೆ ಕಾಂಗ್ರೆಸ್ ಪಕ್ಷಕ್ಕೆ ಬಿಸಿತುಪ್ಪವಾಗಿದೆ.

ಕಾರ್ಯಕರ್ತರ ಸಭೆ
ಮಂಡ್ಯ ಉಪ ಚುನಾವಣೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈಗಾಗಲೇ ಜಿಲ್ಲೆಯ ನಾಯಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಈಗ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಆದ್ದರಿಂದ, ಅಕ್ಟೋಬರ್ 23ರಂದು ಕನಕ ಭವನದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ಕರೆಯಲಾಗಿದೆ.












Click it and Unblock the Notifications