ಮಂಡ್ಯದ ಹೋಂ ಸ್ಟೇಗಳಿಗೆ ಡಿಢೀರ್ ಖಡಕ್ ಸೂಚನೆ: ಯಾಕೆ?
ಮಂಡ್ಯ, ಏಪ್ರಿಲ್ 18: ಮಂಡ್ಯ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಕೆಲಸ ನಡೆಯುತ್ತಿದ್ದು, ಈಗಾಗಲೇ ಹತ್ತು ಹಲವು ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಹೋಂ ಸ್ಟೇ ಜನಪ್ರಿಯವಾಗುತ್ತಿವೆ. ಹೀಗಾಗಿ ಪ್ರವಾಸೋದ್ಯಮದ ವ್ಯಾಪ್ತಿಗೆ ಬರುವ ಹೋಂ ಸ್ಟೇಗಳಲ್ಲಿ ಸುರಕ್ಷತಾ ಮತ್ತು ರಕ್ಷಣೆಯ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಸೂಚಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಸಿರುವ ಅವರು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿರುವ 4 ಹೊಸ ಹೋಂಸ್ಟೇಗಳಿಗೆ ಪರವಾನಿಗೆ ನೀಡುವ ಮೊದಲು ಹೋಂ ಸ್ಟೇ ಮಾಲೀಕರು ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಪಡೆದು ಹೋಂ ಸ್ಟೇ ನಡೆಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ನಿಯಮಗಳು ಪಾಲಿಸಬೇಕು, ಗುಣಮಟ್ಟದ ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆ ಒಳಗೊಂಡಂತೆ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಲಾಗುತ್ತಿದೆಯೇ ಎಂದು ಪರೀಕ್ಷಿಸಬೇಕು ಎಂದು ಸೂಚಿಸಿದರು.
ಹೊಸದಾಗಿ ಪರವಾನಿಗೆ ನೀಡುವ ಸಂದರ್ಭದಲ್ಲಿ ಪರೀಶೀಲನೆಗೆ ಸಂಬಂಧ ಪಟ್ಟ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ, ಅಗ್ನಿಶಾಮಕ ದಳದ ಉಪನಿರ್ದೇಶಕರು, ತಾಲ್ಲೂಕು ಆರೋಗ್ಯಾಧಿಕಾರಿ, ಸ್ಥಳೀಯ ಆರಕ್ಷಕ ನಿರೀಕ್ಷಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರನ್ನು ಒಳಗೊಂಡ ಒಂದು ವಿಶೇಷ ತಂಡ ರಚಿಸಿಕೊಂಡು ಪರೀಶೀಲನೆ ನಡೆಸಬೇಕು ಎಂದು ಇದೇ ವೇಳೆ ತಿಳಿಸಿದರು.
ಇನ್ನು ಮುಖ್ಯಮಂತ್ರಿಗಳು 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ತಿಳಿಸಿದಂತೆ, ರಾಜ್ಯದ ಜಲಾಶಯಗಳ ಹಿನ್ನೀರಿನಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಜಲ ಕ್ರೀಡೆ ಮತ್ತು ಜಲಸಾಹಸ ಕ್ರೀಡೆಗಳನ್ನು ಯೋಜಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿರುವ ಹಿನ್ನೆಲೆ ಜಿಲ್ಲೆಯಲ್ಲಿ 5 ಜಲಕ್ರೀಡೆಗೆ ಅನುಕೂಲಕರ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದೆ. ನುರಿತ ತಜ್ಞರ ತಂಡವನ್ನು ರಚಿಸಿ ಜಲ ಸಾಹಸ ಮತ್ತು ಜಲ ಕ್ರೀಡೆಗಳಿಗೆ ಗುರುತಿಸಲಾಗಿರುವ ಜಾಗಗಳು ಸೂಕ್ತವಾಗಿ ಇದೆಯೇ ಮತ್ತು ಎಲ್ಲಾ ರೀತಿಯಿಂದ ಸುರಕ್ಷಿತವಾದ ಕ್ರಮಗಳನ್ನು ಕೈಗೊಳ್ಳಲು ಯೋಗ್ಯವಾದ ಸ್ಥಳವಾಗಿದೆಯೇ ಎಂದು ಪರೀಶೀಲನೆ ನಡೆಸಿ ಇ- ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ನಾಗಮಂಗಲ ತಾಲೂಕಿನ ಮುಳುಕಟ್ಟೆ ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ ಕಟ್ಟಡಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಲು ಇ- ಟೆಂಡರ್ ಕರೆದು, ಯಾತ್ರಿಕರು ತಂಗಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ ಮಾತನಾಡಿ, ಸರ್ಕಾರದ ಆದೇಶದಂತೆ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ನೂತನ ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಗುರುತಿಸಿರುವ ಎಲ್ಲಾ ತಾಣಗಳು ತನ್ನದೇ ಆದ ವಿಶೇಷ, ವಿಶಿಷ್ಟತೆ, ಮಹತ್ವವನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಮಂಡ್ಯ- 12, ಮಳವಳ್ಳಿ- 11, ಮದ್ದೂರು- 18, ಶ್ರೀರಂಗಪಟ್ಟಣ - 24, ಪಾಂಡವಪುರ -13, ನಾಗಮಂಗಲ -10, ಕೆ ಆರ್ ಪೇಟೆ -18 ಸೇರಿದಂತೆ ಒಟ್ಟು -106 ನೂತನ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.












Click it and Unblock the Notifications