ಕೆರಗೋಡು ಧ್ವಜಸ್ಥಂಭ ವಿವಾದ: ಮತ್ತೊಂದು ಎಡವಟ್ಟು ಮಾಡಿದ ಜಿಲ್ಲಾಡಳಿತ; ಜನರಲ್ಲಿ ಗೊಂದಲ
ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ರಂಗಮಂದಿರ ಮುಂಭಾಗದಲ್ಲಿರುವ ಧ್ವಜಸ್ತಂಭ ವಿವಾದಕ್ಕೆ ಸಂಬಂಧಿಸಿದಂತೆ ತಪ್ಪನ್ನು ಮುಚ್ಚಿಡಲು ಜಿಲ್ಲಾಡಳಿತ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಧ್ವಜಸ್ತಂಭ ತೆರವುಗೊಳಿಸುವಂತೆ ಯಾವುದೇ ಆದೇಶ ಹೊರಡಿಸಿಲ್ಲವೆಂದು ಹೇಳಿದರೆ, ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಅವರು ಧ್ವಜಸ್ತಂಭ ತೆರವುಗೊಳಿಸುವ ಆದೇಶವನ್ನು ಮೊದಲು ಹೊರಡಿಸಿ ನಂತರ ತಿದ್ದುಪಡಿ ಮಾಡಿ ಆದೇಶ ಹೊರಡಿಸಿದ್ದಾರೆ. ಇಬ್ಬರು ಅಧಿಕಾರಿಗಳ ವಿಭಿನ್ನ ಹೇಳಿಕೆಗಳು ಸಾರ್ವಜನಿಕವಾಗಿ ಗೊಂದಲ ಮೂಡಿಸಿವೆ.

ಜ.25ರಂದು ವಿವಾದಿತ ಸ್ಥಳದಲ್ಲಿ ಧ್ವಜಸ್ತಂಭ ತೆರವುಗೊಳಿಸುವಂತೆ ಆದೇಶ ಹೊರಡಿಸಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ಬಹಿರಂಗಗೊಂಡ ನಂತರದಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಶೇಖ್ ತನ್ವೀರ್ ಆಸಿಫ್ ಅವರು ಧ್ವಜಸ್ತಂಭ ತೆರವುಗೊಳಿಸುವ ಸಂಬಂಧ ಯಾವುದೇ ಆದೇಶ ನೀಡಿಲ್ಲವೆಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು.
ಧ್ವಜ ಸ್ತಂಭ ಗ್ರಾಪಂ ಸುಪರ್ದಿಗೆ
ಇದಾದ ಕೆಲ ಗಂಟೆಗಳಲ್ಲೇ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ.ಬಾಬು ಅವರು, ಜ.25ರ ಆದೇಶದಲ್ಲಿ ಸ್ಥಳದಲ್ಲಿರುವ ಧ್ವಜಸ್ತಂಭವನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿ ಆಸ್ತಿಯನ್ನು ಸುಪರ್ದಿಗೆ ಪಡೆದು ಯಥಾಸ್ಥಿತಿ ಕಾಪಾಡಲು ಕ್ರಮ ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿತ್ತು. ಆನಂತರದಲ್ಲಿ ತಿದ್ದುಪಡಿ ಆದೇಶ ಹೊರಡಿಸಿದ್ದು, ಗ್ರಾಮ ಪಂಚಾಯಿತಿ ಆಸ್ತಿಯಾದ ರಂಗಮಂದಿರದ ಮುಂಭಾಗದಲ್ಲಿರುವ ಧ್ವಜ ಸ್ತಂಭವನ್ನು ಗ್ರಾಪಂ ಸುಪರ್ದಿಗೆ ಪಡೆದುಕೊಳ್ಳಲು ಕ್ರಮ ವಹಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಜಿಪಂ ಸಿಇಒ ಅವರು ಧ್ವಜಸ್ತಂಭ ತೆರವುಗೊಳಿಸುವ ಯಾವುದೇ ಆದೇಶವಿರಲಿಲ್ಲವೆಂದಾದ ಮೇಲೆ ತಿದ್ದುಪಡಿ ಆದೇಶಕ್ಕೆ ಅವಕಾಶ ಸಿಕ್ಕಿದ್ದು ಹೇಗೆ? ಸಿಇಒ ಹಾಗೂ ತಾಪಂ ಆಡಳಿತಾಧಿಕಾರಿ ಬಿಡುಗಡೆ ಮಾಡಿರುವ ಗೊಂದಲದ ಆದೇಶಪತ್ರಗಳು ಹೊಸ ಚರ್ಚೆಗೆ ಕಾರಣವಾಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆದೇಶಪತ್ರ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತಲೆಕೆಡಿಸಿಕೊಂಡಿರುವ ಜಿಲ್ಲಾಡಳಿತ ಅದನ್ನು ಮುಚ್ಚಿಹಾಕುವ ಪ್ರಯತ್ನವಾಗಿ ಕಸರತ್ತು ನಡೆಸುತ್ತಾ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಲೇ ಇದೆ ಎನ್ನಲಾಗಿದೆ.












Click it and Unblock the Notifications