ಮಂಡ್ಯ: ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಜಿಲ್ಲಾಧಿಕಾರಿ ಭರವಸೆ

ಮಂಡ್ಯ, ಅಕ್ಟೋಬರ್‌, 25: ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸಾರ್ವಜನಿಕ ಅಹವಾಲುಗಳನ್ನು ತಾಲ್ಲೂಕು ಮಟ್ಟದಲ್ಲಿಯೇ ಪರಿಹರಿಸಲು ಜಿಲ್ಲಾಡಾಳಿತ ಬದ್ಧವಾಗಿದೆ. ಪ್ರತಿ ವಾರದಲ್ಲಿ ಒಂದು ದಿನ ಒಂದು ತಾಲ್ಲೂಕಿಗೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಅದಕ್ಕೆ ಪ್ರತಿಯಾಗಿ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚಿಸಿ ಸ್ಥಳದಲ್ಲಿಯೇ ಸೂಕ್ತ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಭರವಸೆ ನೀಡಿದರು.

ಜಿಲ್ಲಾಡಳಿತ, ತಾಲೂಕು ಆಡಳಿತದ ವತಿಯಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಜನತಾ ದರ್ಶನ ಮತ್ತು ಅಹವಾಲು ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಸಾಧ್ಯವಾಗದಿದ್ದರೆ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಮುಂದಿನ ಹಂತಕ್ಕೆ ಅಹವಾಲುಗಳನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

Mandya Deputy commissioner promises to solve public problems on the spot

ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳು ಸಾರ್ವಜನಿಕರಿಂದ ಹೆಚ್ಚಾಗಿ ಕೇಳಿ ಬರುವುದರಿಂದ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಗ್ರಾಮ ಮಟ್ಟದಲ್ಲಿಯೇ ಪೌತಿ ಖಾತೆ ಆಂದೋಲನವನ್ನು ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪೌತಿ ಖಾತೆ ಕೆಲಸಗಳು ಇನ್ನು ಬೇಗನೆ ನಡೆಯಲಿವೆ. ಮೃತಪಟ್ಟ ರೈತರ ಹೆಸರಿನಲ್ಲೇ ಆರ್‌ಟಿಸಿಗಳಿದ್ದು, ಅವುಗಳ ಹೆಸರನ್ನು ಬದಲಿಸಲು ತಹಶೀಲ್ದಾರ್ ಅವರೇ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅವರ ಅರ್ಜಿಗಳನ್ನು ಸ್ವೀಕರಿಸಿ ಪೌತಿ ಖಾತೆ ಮಾಡಿಕೊಡುತ್ತಾರೆ ಎಂದು ಭರವಸೆ ನೀಡಿದರು.

ಅಹವಾಲುಗಳ ಮಹಾಪೂರ

ಆರ್‌ಟಿಸಿ ತಿದ್ದುಪಡಿ, ಹಲವು ತಿಂಗಳುಗಳಿಂದ ಉಳಿದ ತತ್ಕಾಲ್ ಪೋಡುಗಳು, ವರ್ಷಗಳೇ ಕಳೆದರೂ ಒತ್ತುವರಿ ತೆರವುಗೊಳಿಸುವ ಅರ್ಜಿಗೆ ಕ್ರಮ ವಹಿಸದಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ರೈತರು ಮತ್ತು ಹೋರಾಟಗಾರರಿಂದ ಜನತಾ ದರ್ಶನದಲ್ಲಿ ಅಹವಾಲುಗಳ ಮಹಾಪೂರವೇ ಹರಿದು ಬಂದಿತು.

ಸ್ಥಳದಲ್ಲೇ ಸಮಸ್ಯೆ ಇತ್ಯರ್ಥ

ರೈತರು ತಮ್ಮ ಸಮಸ್ಯೆಗಳನ್ನು ಅರ್ಜಿಗಳ ರೂಪದಲ್ಲಿ ಕೊಟ್ಟು ಅಳಲು ತೋಡಿಕೊಂಡರು. ಕೆಲವು ಅರ್ಜಿಗಳಿಗೆ ಜಿಲ್ಲಾಧಿಕಾರಿ ಅವರು ಸ್ಥಳದಲ್ಲಿಯೇ ಇತ್ಯರ್ಥಪಡಿಸುವ ಮೂಲಕ ಸಮಸ್ಯೆ ಹೇಳಿಕೊಂಡವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು. ಸ್ಥಳದಲ್ಲಿದ್ದ ಆರ್‌ಐ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ತಾಲ್ಲೂಕು ಆಡಳಿತದ ಅಧಿಕಾರಿಗಳಿಂದ ಅರ್ಜಿಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡರು.

ತದನಂತರ ಯಾವುದೇ ಅರ್ಜಿಯೂ ಉಳಿದುಕೊಳ್ಳಬಾರದು ಎಂದು ವೇದಿಕೆಯ ಪಕ್ಕದಲ್ಲಿಯೇ ಕಂಪ್ಯೂಟರ್‌ಗಳನ್ನಿಟ್ಟುಕೊಂಡು ಆಯಾ ಸಿಬ್ಬಂದಿಯ ಮೂಲಕ ಅರ್ಜಿಯ ನಂಬರ್ ಕೋಡ್‌ಗಳ ನೊಂದಣಿ ಮಾಡಿಕೊಳ್ಳಲಾಗುತ್ತಿತ್ತು. ಅಗತ್ಯ ದಾಖಲೆಗಳು ಸಿಗದಿದ್ದರೆ ತದನಂತರ ಬಗೆಹರಿಸಿಕೊಡಲು ದಿನಾಂಕವನ್ನು ನಿಗದಿ ಮಾಡಿ ಕಳುಹಿಸಿಕೊಡಲಾಗುತ್ತಿತ್ತು.

ಮೂರು ವರ್ಷಗಳಿಂದಾಗದ ಕೆಲಸ ಒಂದೇ ದಿನದಲ್ಲಿ

ಉಪ್ಪರಕನಹಳ್ಳಿ ಗ್ರಾಮದ ರೈತರಾದ ಸರಸ್ವತಮ್ಮ ಅವರ ಜಮೀನಿನ ಆರ್‌ಟಿಸಿ ಹತ್ತು ಗುಂಟೆ ಇರುವುದು ಕೇವಲ ನಾಲ್ಕುಗುಂಟೆ ಮಾತ್ರ ಬರುತ್ತಿದೆ. ಈ ಬಗ್ಗೆ ಅರ್ಜಿ ಕೊಟ್ಟು ಮೂರು ವರ್ಷವೇ ಕಳೆದಿದೆ ಆದರೂ ಸಮಸ್ಯೆ ಬಗೆಹರಿಸಿಕೊಟ್ಟಿರಲಿಲ್ಲ. ಜನತಾ ದರ್ಶನದ ಮೂಲಕ ಸ್ಥಳದಲ್ಲಿದ್ದ ಆರ್‌ಐ ಮತ್ತು ಗ್ರಾಮ ಲೆಕ್ಕಾಧಿಕಾರಿಗೆ ಸೂಚನೆ ನೀಡುವ ಮೂಲಕ ಮೂರು ದಿನದಲ್ಲಿಯೇ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಅವರು ಆದೇಶ ನೀಡಿದರು.

ಮತ್ತೋವರ್ವ ರೈತ ಸಂಪಹಳ್ಳಿ ಗ್ರಾಮದ ಶಿವಶಂಕರ್ ಅವರು ತತ್ಕಾಲ್ ಪೋಡ್ ಅರ್ಜಿ ಹಾಕಿ ಮೂರು ವರ್ಷ, ಆರ್‌ಟಿಸಿ ಇಂಡೀಕರಣ ಮಾಡಲು ಅರ್ಜಿ ನೀಡಿ ಏಳು ವರ್ಷ ಕಳೆದಿರುವುದು ಸೇರಿದಂತೆ ತನ್ನ ಇಡುವಳಿ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಲಕ್ಷಾಂತರ ಬೆಲೆ ಬಾಳುವ ಮರಗಳನ್ನು ಕಡಿದಿರುವುದರ ಬಗ್ಗೆ ಪರಿಹಾರಕ್ಕೆ ಅರ್ಜಿ ಕೊಟ್ಟಿರುವುದು ಸೇರಿದಂತೆ ಒಟ್ಟು ಆರ್ಜಿಗಳನ್ನು ನೀಡಿರುವುದರ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಇದನ್ನು ಆಲಿಸಿದ ಕುಮಾರ ಅವರು ತಕ್ಷಣವೇ ಅಧಿಕಾರಿಗಳಿಗೆ ಸೂಚನೆ ನೀಡಿ, ಈ ಎಲ್ಲಾ ಅರ್ಜಿಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ಇತ್ಯರ್ಥಗೊಳಿಸುವಂತೆ ತಿಳಿಸಿದರು.

ಒತ್ತುವರಿ ತೆರವಿಗೆ ಸೂಚನೆ

ತಾಲ್ಲೂಕಿನ ಹೊನಗಾನಹಳ್ಳಿ ಗ್ರಾಮದ ಸ.ನ.63 ರಲ್ಲಿ 3.27 ಎಕರೆ ಜಮೀನು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸವಂತೆ ಕೊಮ್ಮೇರಹಳ್ಳಿ ಗ್ರಾಮದ ಹೋರಾಟಗಾರ ಆನಂದ್‌ ಕುಮಾರ್ ಮತ್ತು ವಕೀಲ ಯೋಗಾನಂದ ಅವರು ಅರ್ಜಿನೀಡಿದ್ದರು. ಈ ಅರ್ಜಿ ನೀಡಿ ಹತ್ತು ವರ್ಷವೇ ಕಳೆದಿದೆ. ಜನತಾ ದರ್ಶನದಲ್ಲಿ ಒತ್ತುವರಿ ಜಾಗ ತೆರವುಗೊಳಿಸುವಂತೆ ಮನವಿ ಮಾಡಿದಾಗ, ಇನ್ನೆರಡು ದಿನದಲ್ಲಿ ಸಂಬಂಧಪಟ್ಟ ಸರ್ವೇಯರ್ ಮೂಲಕ ಸ್ಥಳ ಮಹಜರು ಮಾಡಿಸಿ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿ ಅವರು ಕ್ರಮವಹಿಸುವ ಭರವಸೆ ನೀಡಿದರು.

ತಾಲ್ಲೂಕಿನ ಬೇಲೂರು ಗ್ರಾಮದ ಸ.ನ.183/21ರ ಜಮೀನು ಖಾತೆ ಮಾಡಿಕೊಡುವಂತೆ ಅರ್ಜಿ ನೀಡಿ ಎರಡು ತಿಂಗಳು ಆಗಿತ್ತು. ಅದನ್ನು ಖಾತೆ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಜಿಲ್ಲಾಧಿಕಾರಿ ತಿಳಿಸಿದರು. ಜನತಾ ದರ್ಶನದಲ್ಲಿ ನನ್ನ ಕೆಲಸವಾಗಿರುವುದು ಸಂತೋಷ ತರಿಸಿದೆ. ಇಂತಹ ಜನತಾ ದರ್ಶನ ಕಾರ್ಯಕ್ರಮವನ್ನು ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಮಾಡಬೇಕು ಎಂದು ಎಂದು ರೈತ ಬಿ.ಯರಹಳ್ಳಿ ಬಿ.ಬೊಮ್ಮೇಗೌಡ ಮನವಿ ಮಾಡಿದರು.

ಜನತಾ ದರ್ಶನದಲ್ಲಿ 191ಕ್ಕೂ ಹೆಚ್ಚು ಅಹವಾಲು

ತಾಲ್ಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಜನತಾ ದರ್ಶನದ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3 ಗಂಟೆಯ ತನಕ 180ಕ್ಕೂ ಹೆಚ್ಚು ಅಹವಾಲುಗಳು ರೈತರು ಮತ್ತು ಫಲಾನುಭವಿಗಳಿಂದ ಬಂದಿದ್ದವು. ಅವುಗಳಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ರಕ್ಷಣೆ, ಪಿಂಚಣಿ ಮರು ಮಂಜೂರಾತಿ, ಗೋಮಾಳ ಜಮೀನಿನ ದುರಸ್ತಿ, ರೇಷನ್ ಕಾರ್ಡ್ ತಿದ್ದುಪಡಿ, ನಗರಸಭೆಗೆ ಸಂಬಂಧಪಟ್ಟ ಅರ್ಜಿಗಳು, ರಸ್ತೆ ಒತ್ತವರಿ ಅರ್ಜಿಗಳು ಸೇರಿದಂತೆ ಆರ್‌ಟಿಸಿ ತಿದ್ದುಪಡಿ ಅರ್ಜಿಗಳೇ ಹೆಚ್ಚಾಗಿ ಬಂದಿರುವುದು ವಿಶೇಷ ಎನಿಸಿದ್ದವು.

ಅಧಿಕಾರಿಗಳು ಎಲ್ಲರ ಮನವಿಯನ್ನು ಸ್ವೀಕರಿಸಿ ಅವರಿಗೆ ಸಮಾಧಾನಚಿತ್ತದಿಂದ ಉತ್ತರ ನೀಡುತ್ತಿದ್ದರು. ಜೊತೆಗೆ ಬಂದ ಅರ್ಜಿಗಳನ್ನೆಲ್ಲಾ ಒಂದು ಕಡೆ ನಂಬರ್ ಮಾಡಿ ಇಟ್ಟುಕೊಂಡು, ತುರ್ತಾಗಿ ಸಮಸ್ಯೆ ಪರಿಹರಿಸಿಕೊಡುವ ಭರವಸೆ ನೀಡಿ ಅರ್ಜಿದಾರರನ್ನು ಕಳುಹಿಸುತ್ತಿದ್ದರು. ಈ ವೇಳೆ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ, ಜಿ.ಪಂ.ಉಪ ಕಾರ್ಯದರ್ಶಿ (ಆಡಳಿತ) ಎಂ.ಬಾಬು, ಡಿಎಸ್2 ಆನಂದ್ ಕುಮಾರ್‌, ತಹಶೀಲ್ದಾರ್ ಶಿವಕುಮಾರ ಬಿರಾದಾರ್‌, ನಗರಸಭೆ ಪೌರಯುಕ್ತ ಮಂಜುನಾಥ್ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+