Get Updates
Get notified of breaking news, exclusive insights, and must-see stories!

ಪಕ್ಷಕ್ಕೆ ನಿಮ್ಮ ಅಗತ್ಯತೆ ಇಲ್ಲ: ಸಚಿವ ನಾರಾಯಣ ಗೌಡ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಮುಖಂಡರು

ಕೆ.ಆರ್.ಪೇಟೆ ಬಿಜೆಪಿ ಶಾಸಕ ಡಾ.ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವ ವಿಚಾರಕ್ಕೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಸಿಡಿದೆದ್ದಿದ್ದಾರೆ. ಸ್ವತಃ ಅವರ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಮುಖಂಡರು ಸಿಡಿದೆದ್ದಿದ್ದು, ಅವರು ಪಕ್ಷಕ್ಕೆ ಬರದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ

ಮಂಡ್ಯ, ಮಾರ್ಚ್ 6: ಕೆ.ಆರ್.ಪೇಟೆ ಬಿಜೆಪಿ ಶಾಸಕ ಸದ್ಯ ಸಚಿವರಾಗಿರುವ ಡಾ.ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಅವರು ತಮಗೆ ಕಾಂಗ್ರೆಸ್‌ನಿಂದ ಬುಲಾವ್‌ ಬಂದಿರುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆದರೀಗ ಸ್ವತಃ ಅವರ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಮುಖಂಡರು ಸಿಡಿದೆದ್ದಿದ್ದು, ಅವರು ಪಕ್ಷಕ್ಕೆ ಬರದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ.

ಬಹಳಷ್ಟು ದಿನಗಳ ಮೇಲೆ ಮೌನಮುರಿದಿದ್ದ ನಾರಾಯಣಗೌಡರು ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇಲ್ಲ ಹೀಗಾಗಿ ಕಾಂಗ್ರೆಸ್ ಮುಖಂಡರು ತನಗೆ ಬುಲಾವು ನೀಡಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆ ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಮುಖಂಡರನ್ನು ಕೆರಳಿಸಿದೆ. ಹೀಗಾಗಿ ಮುಖಂಡರೆಲ್ಲರೂ ಒಟ್ಟಾಗಿ ಸೇರಿ ನಾರಾಯಣಗೌಡರ ವಿರುದ್ಧ ಮುಗಿಬಿದ್ದಿರುವುದಲ್ಲದೆ, ಯಾವುದೇ ಕಾರಣಕ್ಕೂ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಗೊಳಿಸದಂತೆ ಹಿರಿಯ ನಾಯಕರನ್ನು ಆಗ್ರಹಿಸಿದ್ದಾರೆ.

Mandya Congress Leaders Outrage Against KC Narayana Gowda

ಸದ್ಯದ ಬಿಜೆಪಿ ಪರಿಸ್ಥಿತಿ ನೆಟ್ಟಗಿಲ್ಲ. ಹೀಗಾಗಿ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ತಾವು ಅಧಿಕಾರ ಪಡೆಯಬಹುದು ಎಂಬ ಲೆಕ್ಕಚಾರದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವತ್ತ ಒಲವು ತೋರಿದ್ದರಲ್ಲದೆ, ಆ ಮೂಲಕ ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶವನ್ನು ನಾರಾಯಣಗೌಡರು ರವಾನಿಸಿದ್ದರು. ಆದರೆ ನಾರಾಯಣಗೌಡರ ತಂತ್ರ ಫಲಿಸದೆ ಕ್ಷೇತ್ರದ ಕಾಂಗ್ರೆಸ್ ಮುಖಂಡರೇ ತಿರುಗಿ ಬೀಳುವಂತಾಗಿದೆ.

ಈ ನಡುವೆ ಮನ್ಮುಲ್ ನಿರ್ದೆಶಕ ಡಾಲು ರವಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕತೆ ತೋರಿಸುತ್ತಿರುವ ಸಚಿವ ಕೆ.ಸಿ.ನಾರಾಯಣಗೌಡರ ನಡೆಯನ್ನು ಖಂಡಿಸಿದರಲ್ಲದೆ, ಪಕ್ಷದಿಂದ ಪಕ್ಷಕ್ಕೆ ಮಾರಾಟವಾಗುವ ನೀವು ಯಾವ ಸಿದ್ದಾಂತ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಿ..? ಮತದಾರರನ್ನು ಮಾರಾಟದ ವಸ್ತುಗಳು ಎಂದು ಭಾವಿಸಿದ್ದರೆ ಅದು ನಿಮ್ಮ ದೊಡ್ಡ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Mandya Congress Leaders Outrage Against KC Narayana Gowda

ನಾಯಕರಿಲ್ಲ ಎಂಬ ಹೇಳಿಕೆಗೆ ತಿರುಗೇಟು

ನಿಮ್ಮನ್ನು ಮಂತ್ರಿ ಮಾಡಿರುವ ಪಕ್ಷಕ್ಕೆ ದ್ರೋಹ ಬಗೆಯುವುದು ಸರಿಯಲ್ಲ ಎಂದಿರುವ ಮನ್ಮುಲ್ ನಿರ್ದೆಶಕ ಡಾಲು ರವಿ ಅವರು, ಸಚಿವರೇ, ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಕೊಡುಗೆಯೇನು?. ನಿಮ್ಮ ಅಗತ್ಯತೆ ಇಲ್ಲಿ ಯಾರಿಗೂ ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸದೃಡವಾಗಿದೆ. ರಾಜ್ಯಸಭೆಯ ಮಾಜಿ ಉಪಸಭಾಪತಿ ಕೆ.ರೆಹಮಾನ್‌ಖಾನ್, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್ ಅವರಂತಹ ಘಟಾನುಘಟಿ ನಾಯಕರು ಕ್ಷೇತ್ರದಲ್ಲಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್‌ನಲ್ಲಿ ನಾಯಕರಿಲ್ಲ ಎಂಬ ನಾರಾಯಣಗೌಡರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಪಕ್ಷದ ಟಿಕೆಟ್ ಬಯಸಿ ಕೆ.ಆರ್.ಪೇಟೆ ಕ್ಷೇತ್ರದಿಂದ 6 ಜನ ಅರ್ಜಿ ಹಾಕಿದ್ದು ಅವರೆಲ್ಲರೂ ಇಲ್ಲಿ ಸಮರ್ಥ ನಾಯಕರಾಗಿದ್ದಾರೆ. ಜೆಡಿಎಸ್ ಪಕ್ಷದಿಂದ ವಲಸೆ ಬಂದ ನಿಮ್ಮನ್ನು ಬಿಜೆಪಿ ಪಕ್ಷ ಸಚಿವರನ್ನಾಗಿ ಮಾಡಿದೆ. ಕ್ಷೇತ್ರದಲ್ಲಿ ನೀವು ಕಾಂಗ್ರೆಸ್ ಕಟ್ಟುವುದು ಬೇಡ. ಬದಲಾಗಿ ನಿಮ್ಮನ್ನು ಮಂತ್ರಿ ಮಾಡಿರುವ ಬಿಜೆಪಿ ಪಕ್ಷವನ್ನು ಸದೃಡವಾಗಿ ಕಟ್ಟಿ ತೋರಿಸಿ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ನಿಂತು ಗೆದ್ದು ನಿಮ್ಮ ಗಂಡಸುತನ ಪ್ರದರ್ಶಿಸಿ. ನೀವು ಬಿಜೆಪಿಯಿಂದ ನಿಂತು ಗೆದ್ದು ಬಂದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಚಂದಾ ಎತ್ತಿ ನಿಮಗೆ ಒಂದು ಕೋಟಿ ರೂ ನೀಡುತ್ತೇವೆ ಎಂದು ಪಂಥಾಹ್ವಾನ ನೀಡಿದ್ದಾರೆ.

ನಿಮ್ಮ ಅಗತ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ

ಬಿಜೆಪಿ ಪಕ್ಷ ನಿಮಗೆ ನೀಡಿದ ಅಧಿಕಾರ ಬಳಸಿ ಕ್ಷೇತ್ರದ ಅಭಿವೃದ್ದಿ ಮಾಡುವಲ್ಲಿ ನೀವು ವಿಫಲರಾಗಿದ್ದೀರಿ. ನೀವು ಎಂದೂ ಯಾವುದೇ ರಾಜಕೀಯ ಪಕ್ಷವನ್ನು ಕಟ್ಟಿ ಬೆಳೆಸಿ ರಾಜಕಾರಣ ಮಾಡಿದವರಲ್ಲ. ತಟ್ಟೆಲೋಟ ಹಂಚಿಕೊಂಡು ರಾಜಕಾರಣಕ್ಕೆ ಬಂದ ಸ್ವಯಂ ಘೋಷಿತ ಸಮಾಜ ಸೇವಕರು ನೀವು. ವಾಮಮಾರ್ಗದಿಂದ ಜೆಡಿಎಸ್, ಆ ನಂತರ ಬಿಜೆಪಿ ಸೇರಿ ಅಧಿಕಾರ ಅನುಭವಿಸಿದ್ದೀರಿ. ಈಗ ಅದೇ ತಂತ್ರವನ್ನು ಅನುಸರಿಸಿ ಅಧಿಕಾರಕ್ಕಾಗಿ ಕಾಂಗ್ರೆಸ್ ಪಕ್ಷದ ಬಾಗಿಲು ಬಡಿಯುತ್ತಿದ್ದೀರಿ.

ಸಚಿವರಾಗಿ ನಿಮ್ಮ ಅಭಿವೃದ್ದಿ ಕ್ಷೇತ್ರದ ಜನರಿಗೆ ಗೊತ್ತಿದೆ. ಕೇವಲ ಗುದ್ದಲಿ ಪೂಜೆ ಸಚಿವರಾಗಿರುವ ನಿಮಗೆ ಸೋಲಿನ ಭೀತಿ ಕಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಸೇರುವ ಸಂಚು ನಡೆಸುತ್ತಿದ್ದೀರಿ. ನಿಮ್ಮ ಅಗತ್ಯತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಲೇವಡಿ ಮಾಡಿದ್ದಾರೆ.

ನೀವು ಸಿದ್ಧಾಂತವಿಲ್ಲದ ರಾಜಕಾರಣಿ

ಸಚಿವ ಕೆ.ಸಿ.ನಾರಾಯಣಗೌಡ ಸಿದ್ದಾಂತವಿಲ್ಲದ ರಾಜಕಾರಣಿ. ಮೊದಲು ಮಾಯಾವತಿ ಅಕ್ಕ ಎಂದು ಹೇಳುತ್ತಾ ಬಿ.ಎಸ್.ಪಿ, ಆ ನಂತರ ದೇವೇಗೌಡ ಅಪ್ಪಾಜಿ ಎನ್ನುತ್ತಾ ಜೆಡಿಎಸ್ ಪಕ್ಷದಲ್ಲಿ ಶಾಸಕರಾದರು. ಬಳಿಕ ಯಡಿಯೂರಪ್ಪ ಅಪ್ಪಾಜಿ ಎನ್ನುತ್ತಾ ಬಿಜೆಪಿಯಲ್ಲಿ ಸಚಿವಗಿರಿ ಅನುಭವಿಸುತ್ತೀದ್ದೀರಿ. ಇದೀಗ ಕಾಂಗ್ರೆಸ್ ಪಕ್ಷ ಸೇರಲು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಹೊಗಳುತ್ತಿದ್ದೀರಿ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಹಳ್ಳಿ ಹಳ್ಳಿಗಳಲ್ಲೂ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ.

ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕಳೆದ ಒಂದು ದಶಕದಿಂದ ನಿಮ್ಮನ್ನು ವಿರೋಧಿಸಿಯೇ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಹಣಕ್ಕಾಗಿ ಮಾರಾಟವಾದವರು ನೀವು. ಮತದಾರರನ್ನು ಮಾರಾಟದ ವಸ್ತು ಎಂದು ಭಾವಿಸಿಕೊಂಡಿದ್ದೀರಿ. ಹಣದಿಂದ ಮತದಾರರನ್ನು ಕೊಂಡುಕೊಳ್ಳುವ ನಿಮ್ಮ ರಾಜಕಾರಣ ಇನ್ನು ಮುಂದೆ ನಡೆಯುವುದಿಲ್ಲ. ನೀವು ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಇಲ್ಲಿ ಯಾರೂ ಆರತಿ ತಟ್ಟೆ ಹಿಡಿದು ನಿಂತಿಲ್ಲ. ನಿಮ್ಮ ತಾಕತ್ತನ್ನು ಬಿಜೆಪಿ ಕಟ್ಟುವುದರಲ್ಲಿ ತೋರಿಸಿ ಎಂದು ಸವಾಲ್ ಹಾಕಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರು ಸಿಡಿದೆದ್ದಿರುವುದರಿಂದ ಸಚಿವ ನಾರಾಯಣಗೌಡ ಅವರು ಬೆಚ್ಚಿ ಬೀಳುವಂತಾಗಿದೆ. ಹಿರಿಯ ಕಾಂಗ್ರೆಸ್ ಮುಖಂಡರ ಬೆಂಬಲದಿಂದ ಒಂದು ವೇಳೆ ಅವರು ಕಾಂಗ್ರೆಸ್ ಸೇರಿದರೂ ಕ್ಷೇತ್ರದಲ್ಲಿ ಎದ್ದಿರುವ ವಿರೋಧಿ ಅಲೆಯನ್ನು ಎದುರಿಸುವುದು ಕಷ್ಟವಾಗಲಿದೆ. ಹೀಗಾಗಿ ಅತ್ತ ಬಿಜೆಪಿಯೂ ಅವರನ್ನು ಅನುಮಾನದಿಂದ ನೋಡುವಂತಾಗಿದೆ.

ಒಟ್ಟಾರೆ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ನಾರಾಯಣಗೌಡರು ಕ್ಷೇತ್ರದ ಮುಖಂಡರನ್ನು ಎದುರು ಹಾಕಿಕೊಂಡು ಕಾಂಗ್ರೆಸ್ ಸೇರುತ್ತಾರಾ..? ಅಥವಾ ಬಿಜೆಪಿಯಲ್ಲಿಯೇ ಇದ್ದು ಬಿಡುತ್ತಾರಾ? ಎನ್ನುವುದನ್ನು ಕಾದು ನೋಡಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+