ಜನವರಿಯಲ್ಲಿ ಸಿದ್ದರಾಮಯ್ಯ ಜೈಲು ಸೇರುತ್ತಾರೆ: ನಳೀನ್‌ಕುಮಾರ್ ಕಟೀಲ್
ಮಂಡ್ಯ, ನವೆಂಬರ್, 05: ಗಾಂಧಿ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಶಾಪವಿದೆ. ಈ ಶಾಪ ಕಳೆದುಕೊಳ್ಳಲು ಕನಿಷ್ಠ ರಾಮರಾಜ್ಯವನ್ನಾದರೂ ಮಾಡಲಿಲ್ಲ. ಕಾಂಗ್ರೆಸ್ ಒಂದು ಲಂಚದ ಪಾರ್ಟಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಮಂಡ್ಯದಲ್ಲಿ ಟೀಕಿಸಿದರು.
ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧಿ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಗಾಂಧಿ ಕನಸಿನ ರಾಮರಾಜ್ಯ ಮಾಡಲಿಲ್ಲ. ಬದಲಿಗೆ ಗಾಂಧಿ ಹೆಸರಿನಲ್ಲಿ ಜನರಿಗೆ ಟೋಪಿ ಹಾಕಿದರು ಎಂದು ವ್ಯಂಗ್ಯವಾಡಿದರು. ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್. ಅದೊಂದು ಲಂಚದ ಪಾರ್ಟಿ ಆಗಿದೆ. ಲಾಲ್‌ಬಹದ್ದೂರ್ ಶಾಸ್ತ್ರಿ ಹೊರತಾಗಿ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್‌ವರೆಗೆ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಪಂಚಭೂತಗಳಲ್ಲೂ ಹಗರಣಗಳನ್ನು ಮಾಡಿ ಜೈಲಿಗೆ ಹೋದ ಕೀರ್ತಿ ಕಾಂಗ್ರೆಸ್ ನಾಯಕರದ್ದಾಗಿದೆ. ಸೋನಿಯಾ ಗಾಂಧಿ ಮೇಡಂ ಮತ್ತು ರಾಹುಲ್‌ಗಾಂಧಿ ಇಬ್ಬರೂ ಬೇಲ್ ಮೇಲೆ ಹೊರಗಿದ್ದಾರೆ. ಅಷ್ಟೇ ಏಕೆ ಕಾಂಗ್ರೆಸ್ ರಾಜ್ಯಾಧ್ಯಕ್ಷರು ತಿಹಾರ್ ಜೈಲಿಗೆ ಹೋಗಿ ಬಂದಿದ್ದಾದರು ಏಕೆ? ಎಂದು ಪ್ರಶ್ನಿಸಿದರು.
ಚೆಕ್‌ನಲ್ಲಿ 1.20 ಕೋಟಿ ರೂಪಾಯಿ ಲಂಚ ಸ್ವೀಕರಿಸಿರುವ ಸಿದ್ದರಾಮಯ್ಯ ಮುಂದಿನ ಜನವರಿ ತಿಂಗಳಿನೊಳಗೆ ಜೈಲಿಗೆ ಹೋಗುತ್ತಾರೆ. ಚುನಾವಣೆ ಹೊತ್ತಿಗೆ ಜಾಮೀನಿನ ಮೇಲೆ ಹೊರ ಬರುತ್ತಾರೆ. ಚುನಾವಣೆ ನಂತರ ನಿರುದ್ಯೋಗಿ ಆಗುತ್ತಾರೆ. ಹಾಸ್ಟೆಲ್ ದಿಂಬು, ಬೆಡ್‌ಶೀಟ್ ಖರೀದಿಯಲ್ಲೂ ಹಗರಣ ಮಾಡಿದ ಸಿದ್ದರಾಮಯ್ಯ ಕಡೆಗೆ ಮಕ್ಕಳ ಮೊಟ್ಟೆಯನ್ನೂ ತಿಂದರು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಕಾಲದಲ್ಲಿ ಮೂವರ ಹತ್ಯೆ
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಹೆಸರಿನಲ್ಲಿ ಮೂವರ ಹತ್ಯೆ ಆಯಿತು. ತನ್ವೀರ್ ಸೇಠ್‌ಗೆ ಚಾಕು ಇರಿದ ವ್ಯಕ್ತಿಯನ್ನು ಜೈಲಿಗೆ ಹಾಕಲಿಲ್ಲ. ತನ್ನದೇ ಕಾರ್ಯಕರ್ತರ ಸಾವಿಗೆ ಕಾಂಗ್ರೆಸ್ ನ್ಯಾಯ ದೊರಕಿಸಿ ಕೊಟ್ಟಿಲ್ಲ. ದೌರ್ಜನ್ಯ ಮೆರೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ರೈತರು, ಹಿಂದುಗಳಿಗೆ ಯಾವುದೇ ರೀತಿಯಲ್ಲೂ ನ್ಯಾಯ ಸಿಕ್ಕಿಲ್ಲ. ಆದರೆ ಕೋಮು ಸಂಘರ್ಷದಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ನಮ್ಮ ಬಿಜೆಪಿ ಸರ್ಕಾರ ಪರಿಹಾರ ನೀಡಿದೆ. ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ಕಾರ್ಯಕರ್ತರ ಸಾವಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಿದೆ ಎಂದು ಕಟೀಲ್ ತಿಳಿಸಿದರು.

ಸಿದ್ದರಾಮಯ್ಯ ಮೇಲೆ ಖರ್ಗೆಗೆ ಕೋಪ
ಸಿದ್ದರಾಮಯ್ಯ ಅವರು ಸ್ವಾರ್ಥಕ್ಕಾಗಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಿದರು. ದಲಿತ ವ್ಯಕ್ತಿ ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಅವರೊಬ್ಬ ದಲಿತ ದ್ರೋಹಿ ಆಗಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಖರ್ಗೆಗೆ ಕೋಪವಿದೆ. ಆ ಕೋಪ ಈಗ ಸ್ಫೋಟಗೊಳ್ಳಲಿದೆ. ಬಂಡೆ ಒಡೆಯಲಿದೆ, ಸದ್ಯ ಹುಲಿ ಕಾಡಿಗೆ ಹೋಗಲಿದೆ. ಅಂಬೇಡ್ಕರ್ ಹೆಸರಿನಲ್ಲಿ ಪಂಚಶೀಲ ತೀರ್ಥಗಳನ್ನು ಸ್ಥಾಪಿಸಿದ್ದು ಪ್ರಧಾನಿ ನರೇಂದ್ರ ಮೋದಿ. ರಾಹುಲ್‌ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಆದರೆ ಭಾರತವನ್ನು ಅವರು ಜೋಡಿಸಿಲ್ಲ. ಈ ಹಿಂದೆಯೇ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಉದ್ದಗಲಕ್ಕೂ ಚತುಷ್ಪಥ ರಸ್ತೆಗಳನ್ನು ನಿರ್ಮಿಸಿದರು. ಈಗ ಆ ಕೆಲಸವನ್ನು ಪ್ರಧಾನಿ ಮೋದಿ ಅವರು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಜಗತ್ತೇ ಭಾರತವನ್ನು ತಿರುಗಿ ನೋಡುತ್ತಿದೆ. ಸಾಂಸ್ಕೃತಿಕ ಭಾರತ ಎದ್ದು ನಿಂತಿದೆ. ರಾಮನ ಪಾದ ಮೇಲಾಣೆ, ರಾಮಮಂದಿರ ಮಾಡಿಯೇ ತೀರುತ್ತೇವೆ ಎಂದು ಶಪಥ ಮಾಡಿದ್ದ ಜಾಗದಲ್ಲೇ ಈಗ ರಾಮಮಂದಿರವನ್ನು ಬಿಜೆಪಿ ನಿರ್ಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಉಜ್ಜಯಿನಿಯಲ್ಲಿ ಕಾಶಿ ಕಾರಿಡಾರ್ ಮಾಡಿದ್ದಾರೆ. ಕಾಶ್ಮೀರದಲ್ಲಿ ಶಾರದಾ ಪೀಠ ಸ್ಥಾಪಿಸಿದ್ದಾರೆ. ದೇಶದ ಅಭ್ಯುದಯಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದು ತಿಳಿಸಿದರು.

ಶೀಘ್ರದಲ್ಲೇ ಕಾಂಗ್ರೆಸ್, ಜೆಡಿಎಸ್ ಮನೆ ಖಾಲಿ
ಕಾಂಗ್ರೆಸ್ ಪಕ್ಷದಲ್ಲಿ ತಮ್ಮವರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಜನವರಿ-ಫೆಬ್ರವರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮನೆ ಖಾಲಿ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಂಡ್ಯದಲ್ಲಿ ಭವಿಷ್ಯ ನುಡಿದರು. ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಭ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇರೆ ಪಕ್ಷಗಳ ಮುಖಂಡರನ್ನು ಆಹ್ವಾನಿಸುತ್ತಿದ್ದಾರೆ. ಮೊದಲು ತಮ್ಮ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲಿ, ನಂತರ ಬೇರೆಯವರನ್ನು ಆಹ್ವಾನಿಸಲಿ. ಕಾಂಗ್ರೆಸ್ ಮೇಲೆ ಅವರ ಶಾಸಕರಿಗೆ ವಿಶ್ವಾಸ ಇಲ್ಲ, ಒಬ್ಬ ಮಾಜಿ ಸಿಎಂಗೆ ಚುನಾವಣೆಯಲ್ಲಿ ನಿಲ್ಲಲು ಕ್ಷೇತ್ರವಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರ ಇಲ್ಲದಿರುವಾಗ ಪಕ್ಷದ ಶಾಸಕರಿಗೆ ನೆಲೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಪಕ್ಷ ಬಿಡಲು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.

ಡಿಕೆಶಿ ವಿರುದ್ದ ಕಟೀಲ್ ಆಕ್ರೋಶ
ಜಗತ್ತೇ ಬುಡಮೇಲಾದರೂ ಪಕ್ಷದಿಂದ ಹೊರ ಹೋದವರನ್ನು ಮತ್ತೆ ವಾಪಸ್ಸು ಕರೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಪಕ್ಷ ಅತಂತ್ರ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತೆ. ಹೊರ ಹೋದವರನ್ನು ಕರೆಯುವುದಿಲ್ಲ ಎಂದು ಹೇಳಿದ್ದವರು ಮತ್ತೆ ಈಗ ವಾಪಸ್ಸು ಕರೆಯುತ್ತಿದ್ದಾರೆ ಎಂದರೆ, ಕಾಂಗ್ರೆಸ್‌ನವರ ಪರಿಸ್ಥಿತಿ ಹೇಗಿರಬೇಕು ಎಂಬುದು ತಿಳಿಯುತ್ತದೆ. ಮಂಡ್ಯ ಜಿಲ್ಲೆಯಲ್ಲೂ ಸಂಘಟನೆ ಭದ್ರವಾಗಿದೆ. ಸಂಘಟನಾ ಕಾರ್ಯ ಕಾಣುವಂತೆ ಮಾಡುವುದಿಲ್ಲ. ನಾವು ಬೇರೆಯವರ ರೀತಿ ಬಂಡೆ, ಹುಲಿಯಾ ಎಂದು ರಾಜಕಾರಣ ಮಾಡುವುದಿಲ್ಲ. ಸಂಘಟನಾ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅದರಲ್ಲಿ ಯಾವುದೇ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಅನೇಕ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಲು ಬೇರೆ ಬೇರೆ ಹಂತಗಳಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎಂದರು.

ಬೊಮ್ಮಾಯಿ ಅವರಿಂದ ಉತ್ತಮ ಆಡಳಿತ
ಹಳೇ ಮೈಸೂರು ಭಾಗದಲ್ಲಿ ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಕಳೆಗುಂದಿತ್ತು. ಅದರಲ್ಲೂ ವಿಶೇಷವಾಗಿ ಮಂಡ್ಯದಲ್ಲಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶಾಸಕರು ಆಯ್ಕೆಯಾಗುವ ಮೂಲಕ ಶಕ್ತಿ ದೊರೆತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಮೂರ್ನಾಲ್ಕು ಜನ ಶಾಸಕರು ಆಯ್ಕೆ ಆಗುತ್ತಾರೆ. ಕಾಂಗ್ರೆಸ್ ಬಗ್ಗೆ ಜನರಿಗೆ ನಿರಾಸೆ ಉಂಟಾಗಿದೆ. ಜೆಡಿಎಸ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಎರಡೂ ಪಕ್ಷಗಳನ್ನು ತೊರೆದು ಜನ ನಮ್ಮ ಪಕ್ಷದತ್ತ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ ಉತ್ತಮ ಆಡಳಿತವನ್ನು ನೀಡುತ್ತಿದೆ. ಯೋಜನೆ, ಅನುಷ್ಠಾನ ಅಭಿವೃದ್ಧಿ ಕಾರ್ಯಗಳು ಜನಮನ ಸೆಳೆಯುತ್ತಿದೆ. ರಾಜ್ಯದಲ್ಲೂ ಸಹ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಜನ ನಮ್ಮ ಪಕ್ಷದ ಪರವಾಗಿ ಇದ್ದಾರೆ ಎಂದು ಹೇಳಿದರು.












Click it and Unblock the Notifications