Sumalatha: ಕೈ ತಪ್ಪಿದ ಮಂಡ್ಯ; ಸುಮಲತಾ ಮುಂದಿನ ನಡೆ ಏನು?

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿದ್ದು ಮಂಡ್ಯ ಲೋಕಸಭಾ ಕ್ಷೇತ್ರ. ಬಿಜೆಪಿಯಿಂದ ಸ್ಪರ್ಧೆ ಮಾಡುವ ಕನಸು ಕಂಡಿದ್ದ ಸುಮಲತಾ, ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದಿದ್ದರು. ಆದರೆ ಈಗ ಅಧಿಕೃತವಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಸುಮಲತಾಗೆ ಬಿಜೆಪಿ ಶಾಕ್ ನೀಡಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದು ಬೀಗಿದ್ದ ಸುಮಲತಾ ಅವರಿಗೆ ಈ ಬಾರಿ ಬಿಜೆಪಿ ನಂಬಿದ್ದೇ ದೊಡ್ಡ ತಪ್ಪಾಯಿತು ಎನ್ನುವಂತ ಪರಿಸ್ಥಿತಿ ಬಂದಿದೆ.

Major Setback for Sumalatha as She Misses BJP Ticket for Mandya in Lok Sabha Election 2024

ಕೊನೆಯ ಕ್ಷಣದವರೆಗೂ ಮಂಡ್ಯದಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದ ಸುಮಲತಾ ಅವರಿಗೆ ತೀವ್ರ ನಿರಾಸೆಯಾಗಿದೆ. ಜೆಡಿಎಸ್ ಅಭ್ಯರ್ಥಿ ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದು, ಬಿಜೆಪಿ ಬೆಂಬಲ ನೀಡಲಿದೆ. ಇದೀಗ ಸುಮಲತಾ ಅವರ ಮುಂದಿನ ರಾಜಕೀಯ ನಡೆಯನ್ನು ಕುತೂಹಲದಿಂದ ನೋಡುವಂತಾಗಿದೆ.

ವರಿಷ್ಠರನ್ನು ಭೇಟಿ ಮಾಡಿದರೂ ಪ್ರಯೋಜನವಿಲ್ಲ

ನಾನು ಸ್ಪರ್ಧಿಸುವುದಾದರೆ ಅದು ಮಂಡ್ಯದಲ್ಲಿ ಮಾತ್ರ. ಮಂಡ್ಯ ಬಿಟ್ಟು ಬೇರೆ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ ಎಂಬ ನಿಲುವಿಗೆ ಸುಮಲತಾ ಬದ್ಧರಾಗಿದ್ದರು. ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರದ ಟಿಕೆಟ್‌ನ್ನು ನನಗೇ ನೀಡಲಿದೆ ಎಂಬ ಖಚಿತ ವಿಶ್ವಾಸದಲ್ಲಿದ್ದರು. ಆದರೆ, ಸುಮಲತಾ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ. ಮಂಡ್ಯ, ಹಾಸನ, ಕೋಲಾರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಬಿಜೆಪಿ ಅಧಿಕೃತ ಘೋಷಣೆ ಮಾಡಿರುವುದು ಸುಮಲತಾ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಕಟ್ಟಿದ್ದ ಆಶಾಗೋಪುರ ಕುಸಿದು ಬಿದ್ದಿದೆ.

ಮಾ.17ರಂದು ಸಂಸದೆ ಸುಮಲತಾ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿ ವಾಪಸಾದ ಬಳಿಕ ಮಂಡ್ಯ ಕಡೆ ಮುಖ ಮಾಡಿರಲಿಲ್ಲ. ಸ್ಪರ್ಧೆ ಕುರಿತು ಯಾವುದೇ ಮಾತನಾಡದೆ ವೌನಕ್ಕೆ ಜಾರಿದ್ದರು. ಆಗಲೇ ಮಂಡ್ಯ ಕ್ಷೇತ್ರ ತಮ್ಮ ಕೈತಪ್ಪಿ ಹೋಗಿರುವ ಸುಳಿವು ಅವರಿಗೆ ದೊರಕಿತ್ತು. ಆದರೂ ಬಹಿರಂಗವಾಗಿ ಅದನ್ನು ವ್ಯಕ್ತಪಡಿಸದೆ ಕಾದುನೋಡುವ ತಂತ್ರ ಅನುಸರಿಸುತ್ತಿದ್ದರು. ಈಗ ಮಂಡ್ಯ ಕ್ಷೇತ್ರದ ಬಗ್ಗೆ ಇದ್ದ ಕುತೂಹಲಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ.

ಬಿಜೆಪಿ ನಂಬಿ ಅತಂತ್ರವಾದ ಸುಮಲತಾ

ಬಿಜೆಪಿಯಿಂದ ಟಿಕೆಟ್ ಸಿಗದೇ ಇರುವುದು ಸುಮಲತಾ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೂ, ಅವರು ಗೆಲ್ಲುವ ವಾತಾವರಣ ಮಂಡ್ಯದಲ್ಲಿ ಇಲ್ಲ ಎನ್ನುವುದು ಅವರಿಗೆ ಖಚಿತವಾಗಿದೆ.

ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪರೋಕ್ಷವಾಗಿ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಬಿಜೆಪಿ ಅಭ್ಯರ್ಥಿಯನ್ನೇ ಹಾಕದೆ ಬಹಿರಂಗ ಬೆಂಬಲ ಘೋಷಿಸಿತ್ತು. ರೈತಸಂಘ, ಜೆಡಿಎಸ್‌ನೊಳಗಿದ್ದ ಒಂದು ಗುಂಪು, ಅಂಬರೀಶ್ ಅಭಿಮಾನಿಗಳು ಎಲ್ಲರೂ ಸುಮಲತಾಗೆ ಬೆಂಬಲ ನೀಡುವ ಮೂಲಕ ಗೆಲುವಿಗೆ ಕಾರಣವಾಗಿದ್ದರು.

ಆದರೆ ಈಗ ಜಿಲ್ಲೆಯೊಳಗಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಪಕ್ಷೇತರವಾಗಿ ಸುಮಲತಾ ಕಣಕ್ಕಿಳಿದರೂ ರಾಜಕೀಯ ವಾತಾವರಣ ಅವರ ಪರವಾಗಿಲ್ಲ. ಇದು ಸುಮಲತಾ ಅವರಿಗೂ ಗೊತ್ತಿರುವುದರಿಂದಲೇ ವೌನ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನಲ್ಲೂ ವಿರೋಧ

ಕಾಂಗ್ರೆಸ್ ಪಕ್ಷ ಕೂಡ ಮಂಡ್ಯ ಲೋಕಸಭಾ ಅಭ್ಯರ್ಥಿಯನ್ನಾಗಿ ವೆಂಕಟರಮಣೇಗೌಡ ಅವರನ್ನು ಘೋಷಿಸಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಗಳೂ ಇಲ್ಲ. ಒಮ್ಮೆ ಸೇರಿದರೂ ಮಂಡ್ಯ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಸಾಧ್ಯತೆಯಂತೂ ಇಲ್ಲವೇ ಇಲ್ಲ. ಸುಮಲತಾ ಸೇರ್ಪಡೆಗೆ ಕಾಂಗ್ರೆಸ್‌ನೊಳಗೂ ವಿರೋಧವಿದೆ ಎನ್ನಲಾಗಿದೆ.

ಮುನಿಸು ಮರೆತು ಜೆಡಿಎಸ್‌ಗೆ ಬೆಂಬಲ

ಮಂಡ್ಯ ಜೆಡಿಎಸ್ ಪಾಲಾಗಿರುವುದರಿಂದ ಸುಮಲತಾ ದಳಪತಿಗಳೊಂದಿಗೆ ಹೊಂದಿದ್ದ ಹಳೆಯ ವಿರಸವನ್ನು ಮರೆತು ಲೋಕಸಭಾ ಚುನಾವಣೆಯಲ್ಲಿ ಮೈತ್ರಿಧರ್ಮ ಪಾಲಿಸುತ್ತಾರಾ ನೋಡಬೇಕಿದೆ.

ಬಿಜೆಪಿ ವರಿಷ್ಠರನ್ನು ಭೇಟಿಯಾದ ಸಮಯದಲ್ಲಿ ಪರ್ಯಾಯ ರಾಜಕೀಯ ಅವಕಾಶಗಳನ್ನು ದೊರಕಿಸುವ ಭರವಸೆ ಸುಮಲತಾ ಅವರಿಗೆ ಸಿಕ್ಕಿರಬಹುದು. ಅದೇ ಕಾರಣಕ್ಕೆ ಅವರು ಮೌನವಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಸೇರ್ಪಡೆಯಾಗುವ ತೀರ್ಮಾನ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಅವರಿಗೆ ಉತ್ತಮ ಅವಕಾಶಗಳು ಸಿಗಬಹುದು. ಬಂಡಾಯವೇಳುವುದರಿಂದ ಸುಮಲತಾ ಅವರಿಗೆ ರಾಜಕೀಯವಾಗಿ ನಷ್ಟವೇ ಹೊರತು ಲಾಭವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+