ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ: ಜೆಡಿಎಸ್ ಗೆಲುವಿಗೆ ಲಾಭ?
ಮಂಡ್ಯ, ಏಪ್ರಿಲ್ 18: ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದ ಮೇಲೂ ಕಾಂಗ್ರೆಸ್ ನಲ್ಲಿ ಬಂಡಾಯದ ಬೆಂಕಿ ಕಾಣಿಸಿಕೊಂಡಿದ್ದು ಇದರಿಂದಾಗಿ ಜೆಡಿಎಸ್‌ಗೆ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರು ತಮ್ಮ ಹಾದಿ ಸುಗಮವಾದ ಖುಷಿಯಲ್ಲಿದ್ದು, ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿರುವುದು ಎದ್ದು ಕಾಣಿಸುತ್ತಿದೆ.
ಮದ್ದೂರು ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿ ಜೆಡಿಎಸ್‌ಅನ್ನು ಪ್ರತಿನಿಧಿಸುತ್ತಿರುವ ಡಿ.ಸಿ.ತಮ್ಮಣ್ಣ ಅವರು ಗೆಲ್ಲುತ್ತಲೇ ಬರುತ್ತಿದ್ದಾರೆ. ಈ ಬಾರಿಯ ಚುನಾವಣೆ ಅವರಿಗೆ ಕೊನೆಯ ಚುನಾವಣೆ ಎನ್ನಲಾಗುತ್ತಿದೆ. ಹೀಗಾಗಿ ಕೊನೆಯ ಚುನಾವಣೆಯಲ್ಲಿ ಗೆಲುವಿನೊಂದಿಗೆ ವಿದಾಯ ಹೇಳುವ ಆಲೋಚನೆ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕ್ಷೇತ್ರದಲ್ಲಿ ಜೆಡಿಎಸ್‌ಗೆ ಪ್ರಬಲ ಸ್ಪರ್ಧಿ ಕಾಂಗ್ರೆಸ್ ಆಗಿದ್ದು, ಈ ಬಾರಿ ಕ್ಷೇತ್ರದಲ್ಲಿ ಯಾವುದೇ ಪೈಪೋಟಿಯಿಲ್ಲದೆ ಒಮ್ಮತದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದ್ದರೆ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣನವರು ದೊಡ್ಡಮಟ್ಟದ ಪೈಪೋಟಿಯನ್ನು ಎದುರಿಸಬೇಕಾಗಿತ್ತು. ಆದರೆ ಇದೀಗ ಕಾಂಗ್ರೆಸ್ ನಲ್ಲಿ ಟಿಕೆಟ್ ವಿಚಾರದಲ್ಲಿ ಬಂಡಾಯ ಎದ್ದಿದ್ದು, ಕ್ಷೇತ್ರದಲ್ಲಿ ಮೂಲ ಮತ್ತು ವಲಸಿಗ ಎಂಬ ಭಿನ್ನಾಭಿಪ್ರಾಯಗಳು ಮುನ್ನಲೆಗೆ ಬಂದಿದೆ.
ಕಾಂಗ್ರೆಸ್‌ನಲ್ಲಿ ಬಂಡಾಯದ ಬೆಂಕಿ
ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ವಲಸೆ ಬಂದಿರುವ ನಾಯಕರಿಗೆ ಮಣೆ ಹಾಕಲಾಗುತ್ತಿದೆ ಆರೋಪ ಜೋರಾಗಿದೆ. ಇಂತಹ ಆರೋಪದ ಬೆಂಕಿಗೆ ತುಪ್ಪ ಸುರಿದಂತೆ ಕಾಂಗ್ರೆಸ್ ಕ್ಷೇತ್ರದಲ್ಲಿ ಮೂಲಕ ಕಾಂಗ್ರೆಸ್ಸಿಗ ಗುರುಚರಣ್ ಅವರನ್ನು ಬದಿಗೆ ಸರಿಸಿ ವಲಸೆ ಬಂದಿರುವ ಕದಲೂರು ಉದಯ್ ಎಂಬುವರಿಗೆ ಟಿಕೆಟ್ ನೀಡಿದೆ. ಪರಿಣಾಮ ಬಂಡಾಯದ ಬೆಂಕಿ ಹೊತ್ತಿ ಉರಿಯುತ್ತಿದೆ. ಈಗಾಗಲೇ ಗುರುಚರಣ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಒಡಕು ಉಂಟಾದಷ್ಟು ಅದರ ಲಾಭ ಡಿ.ಸಿ.ತಮ್ಮಣ್ಣರಿಗೆ ಆಗಲಿದೆ.
ಡಿ.ಸಿ.ತಮ್ಮಣ್ಣರವರು 2013 ಮತ್ತು 2018ರ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದಿದ್ದಾರೆ. ಈ ಬಾರಿ ಬಿಜೆಪಿಯಿಂದ ಮನ್ಮುಲ್ ನಿರ್ದೇಶಕರಾದ ಎಸ್.ಪಿ.ಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ. ಎಸ್.ಪಿ.ಸ್ವಾಮಿ ಅವರ ಬಗ್ಗೆ ಹೇಳಬೇಕೆಂದರೆ ಅವರು ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದರು. ನಂತರ ದಿನಗಳಲ್ಲಿ ಜಿಲ್ಲಾ ಹಾಲು ಒಕ್ಕೂಟಕ್ಕೂ ಸ್ಪರ್ಧಿಸಿ ಜೆಡಿಎಸ್ ಬಂಡಾಯವಾಗಿ ಆಯ್ಕೆಯಾದರು. ಕಾಲಕ್ರಮೇಣ ಬಿಜೆಪಿಗೆ ಸೇರ್ಪಡೆಯಾಗಿ ಬಿಜೆಪಿಯಲ್ಲೇ ಸಕ್ರೀಯ ರಾಜಕಾರಣ ಮಾಡುತ್ತಾ ಬಂದಿದ್ದರು.
ಜೆಡಿಎಸ್‌ಗೆ ಲಾಭ ತಂದು ಕೊಡಬಹುದಾ?
ಕಳೆದ 15ವರ್ಷಗಳಿಂದ ಎಸ್.ಪಿ.ಸ್ವಾಮಿ ಅವರು ತಮ್ಮ ಪುತ್ರ ಶ್ರೀನಿಧಿಗೌಡ ಅವರ ಹೆಸರಿನಲ್ಲಿ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಹೀಗಾಗಿ ಜನರ ಒಡನಾಟದಲ್ಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವಿಲ್ಲದಿದ್ದರೂ ಒಂದಷ್ಟು ಮತಗಳನ್ನು ಸೆಳೆಯುವ ಸಾಧ್ಯತೆಯಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆ ಇಲ್ಲದಿಲ್ಲ. ಆದರೆ ಪ್ರಬಲ ಸ್ಪರ್ಧಿಯಾಗಿರುವ ಕಾಂಗ್ರೆಸ್ ನಲ್ಲೀಗ ಭಿನ್ನಾಭಿಪ್ರಾಯವಿರುವುದು ಜೆಡಿಎಸ್‌ಗೆ ಲಾಭ ತಂದುಕೊಡಬಹುದು ಎಂದು ಹೇಳಲಾಗುತ್ತದೆ.
ಜೆಡಿಎಸ್ ನ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರ ಬಗ್ಗೆ ಹೇಳಬೇಕೆಂದರೆ ಇದುವರೆಗೆ ಅವರು ಆರು ಚುನಾವಣೆಗಳನ್ನು ಎದುರಿಸಿ ನಾಲ್ಕು ಬಾರಿ ಗೆಲುವು ಕಂಡಿದ್ದಾರೆ. ಇದೀಗ ಏಳನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. 1999ರಲ್ಲಿ ಕಿರುಗಾವಲು ಕ್ಷೇತ್ರಕ್ಕೆ ಕಾಂಗ್ರೆಸ್ ಮೂಲಕ ಎಂಟ್ರಿ ಕೊಟ್ಟ ಡಿ.ಸಿ.ತಮ್ಮಣ್ಣ ಅವರು ಅವತ್ತಿನ ನಾಯಕರಾಗಿದ್ದ ಜಿ.ಮಾದೇಗೌಡ, ಎಸ್.ಎಂ.ಕೃಷ್ಣ ಹಾಗೂ ಬೀಗ ದೇವೇಗೌಡರ ಪರೋಕ್ಷ ಸಹಕಾರದೊಂದಿಗೆ ಕೆ.ಎನ್.ನಾಗೇಗೌಡರ ವಿರುದ್ಧ ಗೆಲುವು ಸಾಧಿಸಿದ್ದರು. 2004ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗಿದ್ದ ಎಸ್.ಎಂ.ಕೃಷ್ಣ ಅವರು ಮದ್ದೂರು ಕ್ಷೇತ್ರದಿಂದ ಬೆಂಗಳೂರಿನ ಚಾಮರಾಜ ಕ್ಷೇತ್ರದತ್ತ ಮುಖ ಮಾಡಿದ್ದರು. ಈ ವೇಳೆ ಮದ್ದೂರಿನಿಂದ ಸ್ಪರ್ಧಿಸಿದ ಡಿ.ಸಿ.ತಮ್ಮಣ್ಣ ಅವರು ಗೆಲುವು ಕಂಡಿದ್ದರು.
ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ತಮ್ಮಣ್ಣ
2008ರಲ್ಲಿ ಘೋಷಣೆಯಾದ ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಎಂ.ಎಸ್.ಸಿದ್ದರಾಜು ಅವರು ಗೆಲುವು ಕಂಡಿದ್ದರಾದರೂ ಆರು ತಿಂಗಳಲ್ಲೇ ಅವರು ಅನಾರೋಗ್ಯದಿಂದ ಮೃತಪಟ್ಟ ಪರಿಣಾಮ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಡಿ.ಸಿ.ತಮ್ಮಣ್ಣ ಸೋಲುಂಡರು. ಆ ನಂತರ 2013ರಲ್ಲಿ ಜೆಡಿಎಸ್ ಸೇರ್ಪಡೆಯಾದ ತಮ್ಮಣ್ಣ ಅವರು ಜೆಡಿಎಸ್ ನಿಂದ ದೇವೇಗೌಡರ ಮೂಲಕ ಟಿಕೆಟ್ ಪಡೆದು, ಅಖಾಡಕ್ಕಿಳಿದರು. ಕಾಂಗ್ರೆಸ್ಸಿನಿಂದ ಮಧು ಜಿ.ಮಾದೇಗೌಡ ಕಣಕ್ಕಿಳಿದರೆ, ಕಲ್ಪನಾ ಸಿದ್ದರಾಜು ಪಕ್ಷೇತರವಾಗಿ ಕಣಕ್ಕಿಳಿದರು. ಕಲ್ಪನಾ ಸಿದ್ದರಾಜು ಒಂದಷ್ಟು ಮತ ಪಡೆದಿದ್ದರಿಂದ ತಮ್ಮಣ್ಣರಿಗೆ ಒಂದಷ್ಟು ಲಾಭವಾಗಿ ಮೂರನೇ ಬಾರಿ ವಿಧಾನ ಸಭೆ ಪ್ರವೇಶಿಸಲು ಸಾಧ್ಯವಾಯಿತು.
ಮತದಾರರು ಯಾರ ಕೈಹಿಡಿಯುತ್ತಾರೆ?
2018ರ ಚುನಾವಣೆ ವೇಳೆಗೆ ಕಲ್ಪನಾ ಸಿದ್ದರಾಜು ಜೆಡಿಎಸ್‌ಗೆ ಮುಖ ಮಾಡಿದರು ಕಾಂಗ್ರೆಸ್ಸಿನಿಂದ ಮಧು ಜಿ.ಮಾದೇಗೌಡ ಕಣಕ್ಕಿಳಿದರು. ಕೊನೆಯ ಕ್ಷಣಗಳಲ್ಲಾದ ರಾಜಕೀಯ ಬೆಳವಣಿಗೆಯಲ್ಲಿ ಡಿ.ಸಿ.ತಮ್ಮಣ್ಣ ನಾಲ್ಕನೇ ಬಾರಿ ವಿಧಾನ ಸಭೆ ಪ್ರವೇಶಿಸುವಂತೆ ಮಾಡಿತು ಅಷ್ಟೇ ಅಲ್ಲದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗುವ ಅವಕಾಶ ಮಾಡಿಕೊಟ್ಟಿತು. ಇದೀಗ ಮತ್ತೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಡಿ.ಸಿ.ತಮ್ಮಣ್ಣ ಇದ್ದಾರೆ. ಈಗಾಗಲೇ ಕ್ಷೇತ್ರದ ಗ್ರಾಮ ಗ್ರಾಮಗಳಿಗೆ ತೆರಳಿ ಮತ ಕೇಳುತ್ತಿದ್ದಾರೆ. ಆದರೆ ಮತದಾರರು ಯಾರ ಕೈಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications