ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು?, ನಾಲ್ವರಲ್ಲಿ ಪೈಪೋಟಿ!
Recommended Video

ಮಂಡ್ಯ, ಆಗಸ್ಟ್ 07 : ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿದೆ. ಜೆಡಿಎಸ್ ಪಕ್ಷದಿಂದ ಮಂಡ್ಯಕ್ಕೆ ಅಭ್ಯರ್ಥಿ ಯಾರು? ಎಂಬ ಪ್ರಶ್ನೆಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ.
2014ರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಿ.ಎಸ್.ಪುಟ್ಟರಾಜು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಜಯಗಳಿಸಿದ್ದರು. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾನೆ ಸಲ್ಲಿಸಿದ್ದರು.
ಸದ್ಯ ಮಂಡ್ಯ ಕ್ಷೇತ್ರದ ಸಂಸದ ಸ್ಥಾನ ತೆರವಾಗಿದೆ. ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಆದರೆ, 2019ರ ಚುನಾವಣೆ ಅಭ್ಯರ್ಥಿ ಯಾರು? ಎಂಬ ಚರ್ಚೆಗಳು ಆರಂಭವಾಗಿದೆ. ನಾಲ್ವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವುದಾಗಿ ಈಗಾಗಲೇ ಘೋಷಣೆ ಮಾಡಿವೆ. ಆದರೆ, ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಜೆಡಿಎಸ್ ಒಪ್ಪುವುದು ಕಷ್ಟ. ಜಿಲ್ಲೆಯ 7 ಕ್ಷೇತ್ರಗಳಲ್ಲಿಯೂ ಜೆಡಿಎಸ್ ಶಾಸಕರು ಗೆದ್ದು ಬಂದಿದ್ದಾರೆ. ಅಭ್ಯರ್ಥಿಗಳ ರೇಸ್‌ನಲ್ಲಿ ಯಾರು, ಯಾರು?..

ಎಚ್.ಡಿ.ದೇವೇಗೌಡ ಸ್ಪರ್ಧೆ?
ಮಂಡ್ಯ ಕ್ಷೇತ್ರದಿಂದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಪ್ರಸ್ತುತ ಅವರು ಹಾಸನ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದಾರೆ. 2019ರಲ್ಲಿ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬುದು ಸುದ್ದಿ.
ಹಾಸನ ಕ್ಷೇತ್ರವನ್ನು ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು, ಮಂಡ್ಯದಿಂದ ದೇವೇಗೌಡರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿ ಹಲವು ದಿನಗಳು ಕಳೆದಿವೆ. ಆದರೆ, ದೇವೇಗೌಡರು ಈ ಬಗ್ಗೆ ಅಧಿಕೃತವಾದ ಹೇಳಿಕೆ ನೀಡಿಲ್ಲ.

ಪ್ರಜ್ವಲ್ ರೇವಣ್ಣ ಅಭ್ಯರ್ಥಿ?
ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಮಂಡ್ಯದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಕಾರಣಕ್ಕಾಗಿಯೇ 2018ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎಂಬುದು ಪಕ್ಷದ ಮೂಲಗಳ ಮಾಹಿತಿ.
ಪ್ರಜ್ವಲ್ ರೇವಣ್ಣ ಅವರು ಹಾಸನ ಅಥವ ಮಂಡ್ಯದಿಂದ 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದೆ. ಎಚ್.ಡಿ.ದೇವೇಗೌಡರು ಯಾವು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಎಂಬುದರ ಮೇಲೆ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವ ಕ್ಷೇತ್ರ ಅಂತಿಮವಾಗಲಿದೆ.

ಅಂಬರೀಶ್ ಅಭ್ಯರ್ಥಿ?
ಮಾಜಿ ಸಚಿವ ಅಂಬರೀಶ್ ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅಂಬರೀಶ್ ಈಗಾಗಲೇ ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಜೆಡಿಎಸ್ ಬೆಂಬಲಿಸಿದ್ದರು. ಆದರೆ, ಅಧಿಕೃತವಾಗಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ.
ಅಂಬರೀಶ್ ಅವರು ಮಂಡ್ಯ ಕ್ಷೇತ್ರದ ಮಾಜಿ ಸಂಸದರು. ಅವರ ಆಪ್ತರಾದ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾರೆ. ಚುನಾವಣೆ ಹತ್ತಿರುವಾಗುತ್ತಿರುವಾಗ ಅವರು ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸಿ.ಎಸ್.ಪುಟ್ಟರಾಜು ಸ್ಪರ್ಧೆ
2019ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕು ಎಂಬುದು ಜೆಡಿಎಸ್ ಪಕ್ಷದ ಗುರಿ. ಆದ್ದರಿಂದ, ಸಿ.ಎಸ್.ಪುಟ್ಟರಾಜು ಅವರನ್ನು ಪುನಃ ಕಣಕ್ಕಿಳಿಸಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.
2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಪುಟ್ಟರಾಜು ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುಳಿವು ಕೊಟ್ಟ ಸಿ.ಎಸ್.ಪುಟ್ಟರಾಜು
ಮಂಡ್ಯದಲ್ಲಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು, 'ಮಂಡ್ಯದಿಂ ಸ್ಪರ್ಧಿಸಲು ದೇವೇಗೌಡರನ್ನು ಕರೆತರುವ ಪ್ರಯತ್ನ ನಡೆದಿದೆ. ಮತ್ತೆ ನಾನೇ ಸ್ಪರ್ಧೆ ಮಾಡಿದರೂ ಮಾಡಬಹುದು. ಪ್ರಜ್ವಲ್ ರೇವಣ್ಣ ಅವರು ನಿಲ್ಲಲಿದ್ದಾರೋ ಗೊತ್ತಿಲ್ಲ. ಅಂಬರೀಶ್ ಬಂದರೂ ಸ್ವಾಗತ' ಎಂದು ಹೇಳಿದ್ದಾರೆ. ಇದರಿಂದಾಗಿ ಅಭ್ಯರ್ಥಿಯಾರಾಗಲಿದ್ದಾರೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.












Click it and Unblock the Notifications