Loksabha elections 2024: ಸಕ್ಕರೆ ನಾಡಿನಲ್ಲಿ 3 ಪಕ್ಷಗಳಿಂದ ಸಿದ್ಧತೆ ಹೇಗಿದೆ ಗೊತ್ತಾ?, ಇಲ್ಲಿದೆ ವಿವರ
ಮಂಡ್ಯ, ನವೆಂಬರ್, 05: ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಮಂಡ್ಯ ಕ್ಷೇತ್ರದಲ್ಲಿ ತ್ರಿವಳಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹುಡುಕಾಟದೊಡನೆ ಪೂರ್ವ ಸಿದ್ಧತೆಗೆ ಮುಂದಾಗಿವೆ.
ಈಗಾಗಲೇ ಬಿಜೆಪಿ, ಜೆಡಿಎಸ್ ಮೈತ್ರಿಯ ಅಧಿಕೃತ ಘೋಷಣೆಯಾಗಿದ್ದು, ಎರಡೂ ಪಕ್ಷಗಳು ಮಂಡ್ಯ ಕ್ಷೇತ್ರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪೈಪೋಟಿಗೆ ಇಳಿದಂತೆ ಕಂಡುಬಂದರೆ, ಆಡಳಿತಾರೂಢ ಕಾಂಗ್ರೆಸ್ ತನ್ನ ಅಧಿಕಾರ ಬಲವನ್ನು ಬಳಸಿ ಕ್ಷೇತ್ರವನ್ನು ಗಳಿಸಿಕೊಳ್ಳುವ ಸಾಹಸಕ್ಕೆ ಮುಂದಾಂತಿದೆ.
ಸಂಸದೆ ಸುಮಲತಾ ಅಂಬರೀಶ್ ಈಗಾಗಲೇ ಸ್ಪರ್ಧೆಗೆ ಉತ್ಸುಕರಾಗಿದ್ದು, ಮೈತ್ರಿಯ ಅವಕಾಶವನ್ನು ತಮಗೇ ನೀಡುವಂತೆ ಕೋರಿರುವುದರ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳಿದ್ದರೂ, ಜೆಡಿಎಸ್ ಈ ಸವಾಲನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕೂಡ ಪ್ರಶ್ನಾರ್ಹವಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಸೋಲಿಸುವುದರೊಡನೆ ತನ್ನ ರಾಜಕೀಯ ಪ್ರಾಭಲ್ಯವನ್ನು ಮೆರೆದಿದ್ದ ಕಾಂಗ್ರೆಸ್‌ನ ಒಂದು ಗುಂಪು ಈ ಚುನಾವಣೆಯಲ್ಲಿ ಮತ್ತೊಮ್ಮೆ ತನ್ನ ಬಲಪ್ರಯೋಗದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದೆ.
ವಾರದೊಳಗೆ ಕಾಂಗ್ರೆಸ್ ಸಂಭಾವ್ಯ ಪಟ್ಟಿ
ಈಗಾಗಲೇ ಕಾಂಗ್ರೆಸ್ ನಡೆಸಿದ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಟ್ಟಿತ್ತು. ಆದರೆ ನಿನ್ನೆಯ ಸಭೆಯಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಾರದೊಳಗೆ ಸಂಭಾವ್ಯ ಅಭ್ಯರ್ಥಿ ಹೆಸರನ್ನು ಸೂಚಿಸುವಂತೆ ಆದೇಶಿಸಿರುವುದು ಜಿಲ್ಲೆಯಲ್ಲಿ ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಂತೆ ಕಂಡುಬರುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯ ಕೆಲವು ಟಿಕೆಟ್ ಆಕಾಂಕ್ಷಿತರನ್ನೂ ಒಳಗೊಂಡಂತೆ ಮಾಜಿ ಶಾಸಕರು ಮತ್ತು ಮುಖಂಡರು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದರೂ, ಅಂತಿಮವಾಗಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚೆ ನಡೆದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಭೀಕರ ಸೋಲನ್ನು ಅನುಭವಿಸಿದ್ದ ಕಾಂಗ್ರೆಸ್, ನಂತರದ ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಗೆಲುವಿಗೆ ತಟಸ್ಥ ಧೋರಣೆ ಮೂಲಕ ಬೆಂಬಲ ವ್ಯಕ್ತಪಡಿಸಿದ್ದರು.
ನಂತರ ನಡೆದ 2019ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಇದ್ದರೂ ಕಾಂಗ್ರೆಸ್‌ನ ಪ್ರಭಾವಿ ನಾಯಕರ ಗುಂಪು ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸುವುದರ ಮೂಲಕ ತಮಗಾಗಿದ್ದ ಸೋಲಿನ ಅಪಮಾನದ ಸೇಡನ್ನು ತೀರಿಸಿಕೊಂಡಿದ್ದರು.

ನಂತರ ವಿಧಾನಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳೀಗೌಡ ಮತ್ತು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಧು ಜಿ.ಮಾದೇಗೌಡ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾದ ಕಾಂಗ್ರೆಸ್, 2023ರ ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಗೆಲ್ಲುವುದರ ಮೂಲಕ ಸಂಘಟಿತ ರಾಜಕೀಯ ಹೋರಾಟದಲ್ಲಿ ಯಶಸ್ಸನ್ನು ಕಂಡಿದೆ.
ಹೊಸ ಪ್ರಯೋಗದ ಸಾಧ್ಯತೆ
2024ರ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಸವಾಲಾಗಿದೆ. ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಧಿಕಾರದ ಪ್ರಾಬಲ್ಯವನ್ನು ಹೊಂದಿದ್ದು, ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದ್ದರಿಂದಲೇ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದಂತೆ ಕಂಡುಬರುತ್ತಿದೆ. ಸದ್ಯ ಚಲಾವಣೆಯಲ್ಲಿರುವ ಕೆಲವು ಹೆಸರುಗಳು ಗೆಲುವಿನ ಭರವಸೆಯನ್ನು ಮೂಡಿಸುತ್ತಿಲ್ಲ. ಆದ್ದರಿಂದ ಹೊಸ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.
2018ರ ವಿಧಾನಸಭಾ ಚುನಾವಣಾ ಸೋಲಿನಿಂದ ಪಾಠ ಕಲಿತಿದ್ದ ಕಾಂಗ್ರೆಸ್ ನಿಧಾನವಾಗಿ ಸಂಘಟಿತ ಪ್ರಯತ್ನದಿಂದಾಗಿ ಒಂದೊಂದೇ ಸ್ಥಾನಗಳನ್ನು ಗೆಲ್ಲುತ್ತಲೇ ಸಾಗಿತ್ತು. ಈ ಬಾರಿಯೂ ಲೋಕಸಭಾ ಚುನಾಣೆಯನ್ನೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಗೆಲ್ಲಲು ತಂತ್ರಗಾರಿಕೆ ಹೂಡಿದ್ದು, ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. ಈ ಮಧ್ಯೆ ಚಲುವರಾಯಸ್ವಾಮಿ ಅವರು ಪತ್ನಿ ಧನಲಕ್ಷ್ಮಿಯವರನ್ನು ಕ್ಷೇತ್ರದಾದ್ಯಂತ ಎಲ್ಲ ಕಾರ್ಯಕ್ರಮಗಳಿಗೂ ಕರೆದೊಯ್ಯುತ್ತಿರುವುದು ಸಹ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದ್ದ ಆಕಾಂಕ್ಷಿತರೂ ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದು, ಅಂತಿಮವಾಗಿ ಹೈಕಮಾಂಡ್ ಯಾವ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದು ಕಾದುನೋಡಬೇಕಿದೆ.
ಗುಟ್ಟು ಬಿಡದ ಜೆಡಿಎಸ್
ಮತ್ತೊಂದೆಡೆ ಬಿಜೆಪಿ-ಜೆಡಿಎಸ್ ಮೈತ್ರಿಯ ಘೋಷಣೆಯಾಗಿದ್ದು, ಜೆಡಿಎಸ್ ಕಳೆದ ಚುನಾವಣೆಯ ಸೋಲಿನ ಅಪಮಾನದಿಂದ ಹೊರಬರಲು ಬಿಜೆಪಿಯ ಬೆಂಬಲವನ್ನು ಕೋರಿದೆ. ಜೆಡಿಎಸ್‌ನಿಂದ ಸಿ.ಎಸ್.ಪುಟ್ಟರಾಜು ಅವರನ್ನು ಕಣಕ್ಕಿಳಿಸಿರುವ ಸಿದ್ಧತೆಗಳು ನಡೆದಂತೆ ಮೇಲ್ನೋಟಕ್ಕೆ ಕಂಡುಬಂದರೂ, ಆಂತರಿಕವಾಗಿ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಸ್ಪರ್ಧಿಸುತ್ತಾರಾ ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತಿವೆ.
ಈ ಹಿಂದೆ ಕಾಂಗ್ರೆಸ್ ಪುಟ್ಟರಾಜು ಅವರನ್ನು ಪಕ್ಷಕ್ಕೆ ಸೆಳೆದು ಅಭ್ಯರ್ಥಿಯನ್ನಾಗಿಸುವ ಬಗ್ಗೆ ವದಂತಿಗಳು ಕೇಳಿಬಂದಿದ್ದವು. ಅದಕ್ಕೆ ಪ್ರತಿಯಾಗಿ ಜೆಡಿಎಸ್ ಪುಟ್ಟರಾಜು ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದಂತೆ ಕಂಡುಬಂದಿತ್ತು. ಸಧ್ಯಕ್ಕೆ ಜೆಡಿಎಸ್ ತನ್ನ ಅಧೀಕೃತ ಅಭ್ಯರ್ಥಿಯ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಸಂಸದೆ ಸುಮಲತಾ ಮಾತ್ರ ಮೈತ್ರಿ ಅಭ್ಯರ್ಥಿಯನ್ನಾಗಿ ತಮ್ಮನ್ನೇ ಘೋಷಿಸುವಂತೆ ವರಿಷ್ಠರನ್ನು ಮನವಿ ಮಾಡಿದ್ದಾರೆಂದು ಹೇಳಲಾಗುತ್ತಿದೆ.
ಸುಮಲತಾ ಸ್ಪರ್ಧೆ ಜೆಡಿಎಸ್‌ಗೆ ನುಂಗಲಾರದ ತುತ್ತು
ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದಲೇ ತನ್ನ ಚುನಾವಣಾ ಹೋರಾಟವನ್ನು ನಡೆಸುವುದಾಗಿ ಸ್ಪಷ್ಟಪಡಿಸಿದ್ದು, ಇದು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ. ಒಂದು ವೇಳೆ ಬಿಜೆಪಿಗೇ ಮಂಡ್ಯ ಕ್ಷೇತ್ರ ಮೀಸಲಾದರೆ, ಸುಮಲತಾ ಅವರನ್ನು ಅಭ್ಯರ್ಥಿಯನ್ನಾಗಿಸುವುದರಲ್ಲಿ ಅನುಮಾನವಿಲ್ಲ. ಅದೇ ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟುಕೊಟ್ಟರೆ ಕಾಂಗ್ರೆಸ್‌ಗೆ ಪ್ರಬಲ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸುವ ಚಿಂತನೆಯನ್ನು ಜೆಡಿಎಸ್ ನಡೆಸಲಿದೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಸುನಾಮಿ ಎಬ್ಬಿಸಿದ್ದ ಜೆಡಿಎಸ್, ಈ ಚುನಾವಣೆಯಲ್ಲಿ ಅತ್ಯಂತ ದುರ್ಬಲವಾಗಿ ಕಂಡುಬಂದಿದೆ. ರಾಜ್ಯದಲ್ಲಿ ಕೂಡ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮುವಲ್ಲಿ ವಿಫಲವಾಗಿದ್ದು, ಲೋಕಸಭಾ ಚುನಾವಣೆ ಸವಾಲಾಗಿರುವ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications