ನಿಖಿಲ್ V/s ಸುಮಲತಾ: ಮಂಡ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ!?
ಮಂಡ್ಯ, ಫೆಬ್ರವರಿ 09: ರಾಜ್ಯದಲ್ಲಿ ಇತ್ತೀಚೆಗೆ ಸಕತ್ ಸದ್ದು ಮಾಡುತ್ತಿರೋದು ಸಕ್ಕರೆ ನಾಡು ಮಂಡ್ಯ ಕ್ಷೇತ್ರ. 2019 ರ ಲೋಕಸಭಾ ಚುನಾವಣೆಯಲ್ಲಿ ಭಾರಿ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಇದು ಈಗ ಮತ್ತೆ ಮೈತ್ರಿಯ ಮುಸುಕಿನಲ್ಲಿ ಜಿದ್ದಾಜಿದ್ದಿಗೆ ಬಿದ್ದಿವೆ. ಸ್ವತಂತ್ರ ಅಭ್ಯರ್ಥಿಯಾಗಿದ್ದ ನಟಿ ಸುಮಲತಾ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ಭಾರಿ ಪೈಪೋಟಿಯಿತ್ತು. ಈ ಬಾರಿ ಇಬ್ಬರು ಒಂದೆಡೆ ಸೇರಿದ್ದಾರೆ.
ಸಂಸದೆ ಸುಮಲತಾಗೆ ಕಳೆದ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿದ್ದವು. ಈ ಬಾರಿ ಅವರು ಬಿಜೆಪಿ ಜೊತೆಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರೆ ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಅದಕ್ಕೆ ಟಕ್ಕರ್ ಕೊಡುವಂತೆ ಹೊಸ ಅಪ್‌ಡೇಟ್ ಸಿಕ್ಕಿದ್ದು, ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.

ಮಂಡ್ಯದಿಂದ ನಿಖಿಲ್ ಸ್ಪರ್ಧೆ ಫಿಕ್ಸ್!
ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿರುವ ನಟ ನಿಖಿಲ್ ಕುಮಾರಸ್ವಾಮಿ ಕಳೆದ ಬಾರಿ ಸೋತ ಕ್ಷೇತ್ರದಿಂದಲೇ ಮತ್ತೆ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಯೇ ನಿಂತು ಮತ್ತೆ ಗೆಲ್ಲುವ ಛಲದಲ್ಲಿದ್ದಾರೆ. ಹೀಗಾಗಿ ಅವರು ಪ್ರಚಾರದ ಕೆಲಸ ಆರಂಭಿಸಿದ್ದಾರೆ. ಫೆಬ್ರುವರಿ 19ರಿಂದ ಜಿಲ್ಲಾ ಪ್ರವಾಸ ಕೂಡ ಆರಂಭಿಸಲಿದ್ದಾರೆ. ಇದು ಅವರೆ ಎನ್‌ಡಿಎ ಅಭ್ಯರ್ಥಿ ಎನ್ನುವುದನ್ನು ಸಾರುತ್ತಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಎದುರು ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದರು. ಆದರೆ ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೂ ಸೋತ ನೆಲದಲ್ಲೇ ಗೆಲ್ಲಬೇಕೆಂಬ ಉದ್ದೇಶದಿಂದ ಮಂಡ್ಯದಿಂದಲೇ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗುತ್ತಿದೆ.

ಮಂಡ್ಯದಲ್ಲಿ ಆಕ್ಟಿವ್ ಆಗಿದ್ದಾರೆ ನಿಖಿಲ್ ಕುಮಾರಸ್ವಾಮಿ
ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಈ ಬಾರಿ ಮತ್ತೆ ಜೆಡಿಎಸ್ ಪಕ್ಷ ಆಕ್ಟೀವ್ ಆಗಿದೆ. ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಂಡ್ಯದಲ್ಲಿ ಗೆಲುವು ಕಾಣಲೇಬೇಕು ಎಂದು ಪಣ ತೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಪಕ್ಷ ಸಂಘಟನೆ, ಪ್ರಚಾರಗಳಲ್ಲಿ ತಿಡಗಿಸಿಕೊಂಡಿದ್ದಾರೆ. ಬಿಜೆಪಿ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಇನ್ನು ಘೋಷಿಸದೇ ಇದ್ದರು ಕೂಡ ಅವರೇ ಅಭ್ಯರ್ಥಿ ಎನ್ನಲಾಗುತ್ತಿದೆ.
ಮಂಡ್ಯದ ಎಲ್ಲಾ ಕ್ಷೇತ್ರದಲ್ಲೂ ನಿಖಿಲ್ ಕುಮಾರಸ್ವಾಮಿ ಸಂಚಾರ ಮಾಡಲಿದ್ದಾರೆ. ಕ್ಷೇತ್ರದ ಎಂಟು ತಾಲೂಕುಗಳಲ್ಲಿಯೂ ಪ್ರಚಾರ ನಡೆಸಲಿದ್ದಾರೆ. ಇದಾದ ಬಳಿಕ ಅಭ್ಯರ್ಥಿ ಘೋಷಣೆಯಾಗಲಿದೆ. ಇನ್ನು, ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ನಿಖಿಲ್ ಇಲ್ಲಿಂದ ಸ್ಪರ್ಧೆ ಮಾಡಬೇಕು ಎಂದು ಈಗಾಗಲೇ ಜೆಡಿಎಸ್ ನಾಯಕರು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಟಿಕೆಟ್‌ಗಾಗಿ ಸುಮಲತಾ ಪ್ರಯತ್ನ
ಇತ್ತ, ಹಾಲಿ ಸಂಸದೆ ಸುಮಲತಾ ಕೂಡ ಎನ್‌ಡಿಎ ಅಬ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಕಳೆದ ವರ್ಷದಿಂದ ಬಿಜೆಪಿ ಜೊತೆಗೆ ಗುರುತಿಸಿಕೊಳ್ಳುತ್ತಿರುವ ಅವರು, ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಟಿಕೆಟ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಗುರುವಾರವಷ್ಟೇ ದೆಹಲಿಗೆ ಹೋಗಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಇನ್ನು, ಕೆಲ ದಿನಗಳ ಹಿಂದಷ್ಟೆ ಸಂಸದೆ ಸುಮಲತಾ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ನಾಯಕರ ಜೊತೆಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಮತ್ತೆ ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್ ಮತ್ತು ಸುಮಲತಾ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದೆ.












Click it and Unblock the Notifications