'ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಕಣಕ್ಕೆ'
ಮಂಡ್ಯ, ಆಗಸ್ಟ್ 27: ಮಂಡ್ಯ ಕ್ಷೇತ್ರದ ಮಾಜಿ ಸಂಸದೆ ರಮ್ಯಾ ಅವರು ಎಐಸಿಸಿಯಿಂದ ಉನ್ನತ ಸ್ಥಾನ ಪಡೆದು, ಸಾಮಾಜಿಕ ಜಾಲ ತಾಣಗಳ ಉಸ್ತುವಾರಿ ವಹಿಸಿಕೊಂಡು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಕಾರ್ಯಕರ್ತರಿಗೆ ಅವರನ್ನು ಮತ್ತೊಮ್ಮೆ ಸಂಸದರಾಗಿ ಕಾಣುವ ಬಯಕೆ ಇದೆ ಎಂದು ರಮ್ಯಾ ಅವರ ತಾಯಿ ರಂಜಿತಾ ಅವರು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಅವರು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ರಂಜಿತಾ ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದರು.

ರಮ್ಯಾ ಅವರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲಸದ ಪರ ಪ್ರಚಾರಕ್ಕೆ ಬರಲು ಮುಂದಾಗಿದ್ದರು. ಆದರೆ, ಸದ್ಯ ಪ್ರವಾಸದಲ್ಲಿದ್ದಾರೆ. ಹೀಗಾಗಿ, ಅವರ ಬದಲಿಗೆ ನನ್ನನ್ನು ಚುನಾವಣಾ ಪ್ರಚಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದೇವೆ. 35 ವಾರ್ಡ್‍ಗಳಲ್ಲೂ ಪ್ರಚಾರಕ್ಕೆ ಹೋಗಿ ನಮ್ಮ ಪಕ್ಷದ ಬಗ್ಗೆ ತಿಳಿಸಿ, ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸ್ಪರ್ಧೆಯಿದೆ. ಆದರೆ, ಕಾಂಗ್ರೆಸ್ ತನ್ನ ಕ್ಷೇತ್ರ ಮತ್ತೆ ಪಡೆಯಲಿದೆ. ರಮ್ಯಾ ಮತ್ತೆ ಗೆಲ್ಲುವ ಮೂಲಕ ಮಂಡ್ಯ ಜನರ ಸೇವೆ ಮಾಡುತ್ತಾರೆ. ಇಲ್ಲಿನ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಮಂಡ್ಯ ಕ್ಷೇತ್ರದಲ್ಲಿ ದಳಕ್ಕೆ ಬಿಟ್ಟು ಕೊಡಲು ನಾವು ತಯಾರಿಲ್ಲ. ನೂರಕ್ಕೆ ನೂರು ಮಂಡ್ಯದ ಕ್ಷೇತ್ರದ ಲೋಕಸಭೆ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ರಮ್ಯಾ ಸ್ಪರ್ಧಿಸುತ್ತಾರೆ ಎಂದರು.











Click it and Unblock the Notifications