ಅತ್ಯಾಚಾರ ಎಸಗಿ ಬಾಲಕಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ
ಮಳವಳ್ಳಿ, ಅಕ್ಟೋಬರ್, 19: ವ್ಯಕ್ತಿಯೋರ್ವ ಬಾಲಕಿಯನ್ನು ಟ್ಯೂಷನ್‌ಗೆ ಬರುವಂತೆ ಕರೆಯಿಸಿ, ಬಳಿಕ ಚಾಕೋಲೆಟ್ ಕೊಡಿಸುವುದಾಗಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆಗೈದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಹಾಗಾದರೆ ಆ ಅತ್ಯಾಚಾರಿ ಹಾಗೂ ಕೊಲೆಗಾರನಿಗೆ ಕೋರ್ಟ್ ನೀಡಿದ ಶಿಕ್ಷೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಈ ವಿಷಯ ಬಹಿರಂಗವಾಗಬಹುದೆಂದು ಹೆದರಿ ಶವವನ್ನು ಸಂಪಿನೊಳಗೆ ಹಾಕಿ ಆಕೆಯ ಪೋಷಕರೊಂದಿಗೆ ಸೇರಿ ಬಾಲಕಿಯ ಹುಡುಕಾಟದ ನಾಟಕವಾಡಿದ್ದ ಕಾಮುಕ. ಇನ್ನು ಈ ಕೃತ್ಯವು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆ ಅಪರಾಧಿಗೆ ಮಂಡ್ಯ ಜಿಲ್ಲಾ ಒಂದನೇ ತ್ವರಿತಗತಿ ನ್ಯಾಯಾಲಯವು ಶನಿವಾರ (ಅಕ್ಟೋಬರ್ 19) ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ನೀಡಿದೆ.

ಟ್ಯೂಷನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾಂತರಾಜು(52) ಎಂಬಾತನೇ ಶಿಕ್ಷೆಗೆ ಗುರಿಯಾದವನು. ಈತ ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದವನಾಗಿದ್ದು, ಸುಮಾರು 15 ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿದ್ದ. ಬಳಿಕ ಮಳವಳ್ಳಿ ಪಟ್ಟಣಕ್ಕೆ ಬಂದ ಈತ ಅಲ್ಲಿನ ಟ್ಯೂಷನ್ ಸೆಂಟರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು. ಅದೇನಾಯಿತೋ ಈ ಕಾಮುಕ ಕಾಂತರಾಜು ಬಾಲಕಿ ಮೇಲೆ ಅತ್ಯಾಚಾರ ಎಸಗುವ ಸ್ಕೆಚ್ ಹಾಕಿದ್ದನು.
ಅದರಂತೆಯೇ 2022ರ ಅಕ್ಟೋಬರ್ 10ರಂದು ತಾನು ಕೆಲಸ ಮಾಡುತ್ತಿದ್ದ ಟ್ಯೂಷನ್ ಸೆಂಟರ್‌ಗೆ ಟ್ಯೂಷನ್‌ಗಾಗಿ ಬರುತ್ತಿದ್ದ ಮಳವಳ್ಳಿ ಪಟ್ಟಣದ ಎಸ್‌ಇಎಸ್ ಬಡಾವಣೆಯಲ್ಲಿ ವಾಸವಾಗಿರುವ ದಂಪತಿಯ ಪುತ್ರಿಗೆ ಕರೆ ಮಾಡಿ ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ಯೂಷನ್‌ಗೆ ಬರುವಂತೆ ತಿಳಿಸಿದ್ದನು. ಬಾಲಕಿ ಟ್ಯೂಷನ್‌ಗೆ ಬಂದ ವೇಳೆ ಚಾಕೊಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಅಲ್ಲಿಂದ ಕರೆದೊಯ್ದು ಸಮೀಪದ ನಿರ್ಜನ ಗಲ್ಲಿಯಲ್ಲಿ ಅತ್ಯಾಚಾರ ನಡೆಸಿದ್ದಾನೆ.
ಬಳಿಕ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಕೊಲೆಗೈದು ಶವವನ್ನು ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿಗೆ ಹಾಕಿ ತನಗೇನು ಗೊತ್ತೇ ಇಲ್ಲ ಎಂಬಂತೆ ಇದ್ದು ಬಿಟ್ಟಿದ್ದ. ಇನ್ನು ಬೆಳಗ್ಗೆ 11 ಗಂಟೆಗೆ ಟ್ಯೂಷನ್ ಗೆಂದು ಮನೆಯಿಂದ ಹೋದ ಬಾಲಕಿ ಸಂಜೆಯಾದರೂ ಮನೆಗೆ ಬಾರದೆ ಇದ್ದಾಗ ಪೋಷಕರು ಗಾಬರಿಗೊಂಡಿದ್ದಾರೆ. ಬಳಿಕ ಟ್ಯೂಷನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಟ್ಯೂಷನ್ ಸೆಂಟರ್ ನೋಡಿಕೊಂಡಿದ್ದ ಕಾಂತರಾಜು ಕೂಡ ನನಗೆ ಬಾಲಕಿ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿ, ಆತನೂ ಬಾಲಕಿಯ ಪಾಲಕರೊಂದಿಗೆ ಹುಡುಕಾಟ ನಡೆಸಿದ್ದನು. ಕೊನೆಗೆ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ಸಮೀಪದಲ್ಲಿದ್ದ ಯಾರೋ ಒಬ್ಬರು ಬಾಲಕಿ ನೀರಿನ ಸಂಪ್‌ನಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಆಗ ಪೊಲೀಸರು ನೀರಿನ ಸಂಸ್‌ನಲ್ಲಿ ಪರಿಶೀಲನೆ ನಡೆಸಿದ್ದಾಗ ಬಾಲಕಿಯ ಶವ ಪತ್ತೆಯಾಗಿತ್ತು. ಆಗಲೇ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದವು. ಬಳಿಕ ಈ ಪ್ರಕರಣದ ತನಿಖೆ ಕೈಗೊಂಡಿದ್ದ ಮಳವಳ್ಳಿ ಪಟ್ಟಣ ಠಾಣೆಯ ಪೋಲಿಸರು ಕಾಂತರಾಜನನ್ನು ಬಂಧಿಸಿ ವಿಚಾರಣೆ ನಡೆಸಿ, ಹಲವು ಸಾಕ್ಷ್ಯಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಡ್ಯ ಜಿಲ್ಲಾ 1ನೇ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ಅವರು ಸಾಕ್ಷ್ಯಾಧಾರಗಳಿಂದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದಂತೆ ಅತ್ಯಾಚಾರಕ್ಕೊಳಕ್ಕಾಗಿ ಕೊಲೆಯಾದ ಬಾಲಕಿಯ ಕುಟುಂಬದ ಪರವಾಗಿ ನ್ಯಾಯವಾದಿ ಬಿ.ಟಿ.ವಿಶ್ವನಾಥ್ ವಕಾಲತ್ತು ವಹಿಸುವುದಾಗಿ ಮಂಡ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರವೇ ವಿಶೇಷ ಅಭಿಯೋಕರನ್ನಾಗಿ ವಿ.ಎಸ್.ಭಟ್ ಅವರನ್ನು ನೇಮಕ ಮಾಡಿದ್ದು, ಅವರು ಸಮರ್ಥವಾಗಿ ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications