ಮಂಡ್ಯ ಲೋಕಸಭಾ ಫಲಿತಾಂಶ : ಚಲುವರಾಯಸ್ವಾಮಿ ಹೇಳಿದ್ದೇನು?
Recommended Video
ಮಂಡ್ಯ, ಏಪ್ರಿಲ್ 28 : 'ದೇಶದ ಫಲಿತಾಂಶ ಬೇರೆ, ಮಂಡ್ಯದ ಫಲಿತಾಂಶವೇ ಬೇರೆ. ಜಿಲ್ಲೆಯ ಜನರು ಈಗಾಗಲೇ ತಮ್ಮ ತೀರ್ಪು ನೀಡಿದ್ದಾರೆ. ಎಲ್ಲವೂ ಮತಯಂತ್ರ ಸೇರಿದೆ, ಮೇ 23ರ ತನಕ ಕಾಯೋಣ' ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಭಾನುವಾರ ಮಾತನಾಡಿದ ಚಲುವರಾಯಸ್ವಾಮಿ ಅವರು, 'ಮೇ 23ರ ಬಳಿಕ ಏನಾದರೂ ಹೇಳಬಹುದು. ಈಗ ಏನು ಹೇಳೋಣ?' ಎಂದು ಮಾಧ್ಯಮಗಳನ್ನು ಪ್ರಶ್ನೆ ಮಾಡಿದರು.
'ಚುನಾವಣೆ ಮುಗಿದ ಬಳಿಕ ನಮ್ಮ ಪರವಾಗಿ ಸಮೀಕ್ಷೆ ಫಲಿತಾಂಶ ಬಂದಿದೆ ಎಂದು ಅಭ್ಯರ್ಥಿಗಳು ಅಭಿಪ್ರಾಯ ಮೂಡಿಸಿಕೊಳ್ಳುವುದು ಸಹಜ. ಸ್ವಾಭಿಮಾನದ ಚುನಾವಣೆ ನಡೆಸಿದವರು ನಮ್ಮ ಪರ ರಿಪೋರ್ಟ್ ಇದೆ ಎಂದು ಹೇಳುತ್ತಿದ್ದಾರೆ' ಎಂದರು.

'ಸರ್ಕಾರವನ್ನು ಇಟ್ಟುಕೊಂಡು ಶಾಸಕರು, ಸಚಿವರು ಸೇರಿ 15 ರಿಂದ 20 ನಾಯಕರು, ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ, ಪತ್ನಿ, ಸಹೋದರನನ್ನು ಕಟ್ಟಿಕೊಂಡು ಚುನಾವಣೆ ಮಾಡಿದವರು ರಿಸಲ್ಟ್ ನಮ್ಮ ಕಡೆ ಎನ್ನುತ್ತಾರೆ' ಎಂದು ಹೇಳಿದರು.
'ಮಂಡ್ಯದ ಜನರು ಈಗಾಗಲೇ ರಿಸಲ್ಟ್ ಕೊಟ್ಟಾಗಿದೆ. ಅದರ ಪ್ರಕಟಣೆಗೆ ಕಾಯುತ್ತಿದ್ದೇವೆ. ಕಾಯುವುದನ್ನು ಮಂಡ್ಯದ ಜನರು ಕಲಿಸಿಕೊಟ್ಟಿದ್ದಾರೆ. ಕಾಯುವ ತಾಳ್ಮೆ ನಮಗೆ ಇದೆ' ಎಂದು ಚಲುವರಾಯಸ್ವಾಮಿ ತಿಳಿಸಿದರು.
'ಚುನಾವಣೆಗಾಗಿ ಅವರು ಮಂತ್ರಿಗಳು, ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕೆಲಸ ಮಾಡಿದ್ದಾರೆ. ದರ್ಶನ್, ಯಶ್, ಯುವಕರು, ಮಹಿಳೆಯರು ಇವರ ಪರವಾಗಿ ಕೆಲಸ ಮಾಡಿದ್ದಾರೆ. ಜನರ ತೀರ್ಮಾನವನ್ನು ಕಾದು ನೋಡೋಣ' ಎಂದರು.
'ಚುನಾವಣಾ ಫಲಿತಾಂಶದ ಬಗ್ಗೆ ಬೆಟ್ಟಿಂಗ್ ಕಟ್ಟಬೇಡಿ. ಬೆಟ್ಟಿಂಗ್ ಕಟ್ಟಿದರೆ ನಷ್ಟವಾಗುತ್ತದೆ. ನೀವು ನಮ್ಮ ಜಿಲ್ಲೆಯ ಜನರು. ಈಗಲೂ ಟೈಂ ಇದೆ. ಬೆಟ್ಟಿಂಗ್ ಕಟ್ಟಿದ್ದರೆ ಅದನ್ನು ವಾಪಸ್ ಪಡೆಯಿರಿ ಎಂದು ನಾನು ಮನವಿ ಮಾಡುವೆ' ಎಂದು ಚಲುವರಾಯಸ್ವಾಮಿ ಹೇಳಿದರು.












Click it and Unblock the Notifications