ತಡರಾತ್ರಿ ಮಂಡ್ಯದ ಬಾಡಿಗೆ ಮನೆ ಖಾಲಿ ಮಾಡಿದ ನಟಿ ರಮ್ಯಾ!
Recommended Video

ಮಂಡ್ಯ, ಡಿಸೆಂಬರ್.03:ಅಂಬಿ ಅಂತಿಮ ದರ್ಶನಕ್ಕೆ ಬರದೆ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಮಾಜಿ ಸಂಸದೆ ರಮ್ಯಾ ರಾತ್ರೋ ರಾತ್ರಿ ಮಂಡ್ಯದ ಮನೆ ಖಾಲಿ ಮಾಡುವ ಮೂಲಕ ರಾಜಕೀಯವಾಗಿಯೂ ದೂರ ಸರಿದರಾ? ಎಂಬ ಊಹಾಪೋಹ ಮಂಡ್ಯ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.
ಈ ಊಹಾಪೋಹ ಸತ್ಯ ಎಂಬ ರೀತಿಯಲ್ಲಿ ತಡರಾತ್ರಿ ಮಂಡ್ಯದ ವಿದ್ಯಾನಗರದಲ್ಲಿರುವ ರಮ್ಯಾ ಅವರ ಮನೆಗೆ ಬಂದ ಎರಡು ಲಾರಿಗಳು ಅವರ ಮನೆಯ ವಸ್ತುಗಳನ್ನು ತುಂಬುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಮ್ಯಾ ಮೊದಲಬಾರಿಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಂಡ್ಯದಲ್ಲಿ ಮನೆ ಮಾಡಿ, ಇಲ್ಲೇ ಇದ್ದು ಜನರ ಕಷ್ಟಕ್ಕೆ ಸ್ಪಂದಿಸುವ ಭರವಸೆ ನೀಡಿದ್ದರು. ಅದಾದ ನಂತರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲನುಭವಿಸಿದ ರಮ್ಯಾ ಸದ್ದಿಲ್ಲದೆ ಮಂಡ್ಯದಿಂದ ಮನೆ ಖಾಲಿ ಮಾಡಿ ವರ್ಷಗಟ್ಟಲೆ ಈ ಕಡೆ ತಲೆ ಹಾಕಲೇ ಇಲ್ಲ.
ಮತ್ತೆ ಇದ್ದಕ್ಕಿದ್ದಂತೆ ಮಂಡ್ಯಕ್ಕೆ ಆಗಮಿಸಿದ ರಮ್ಯಾ ನಾನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಿದ್ದೆ. ಇನ್ನು ಮುಂದೆ ನಾನು ನಿಮ್ಮ ಜೊತೆಯೇ ಇರುತ್ತೇನೆ ಎಂದು ಮಂಡ್ಯದಲ್ಲಿ ಎರಡನೇ ಬಾರಿಗೆ ಬಾಡಿಗೆ ಮನೆ ಮಾಡಿದರು. ಮುಂದೆ ಓದಿ...

ಬಿಸಿ ತುಪ್ಪವಾಗಿ ಪರಿಣಮಿಸಿತ್ತು
ಮತ್ತೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಂಡಿದ್ದ ರಮ್ಯಾ ಅವರಿಗೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಇತ್ತೀಚೆಗೆ ನಡೆದ ಮಂಡ್ಯ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಯಾಗಿ, ಕಾಂಗ್ರೆಸ್ ಜೆಡಿಎಸ್ ಗೆ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿತ್ತು.

ಮಂಡ್ಯ ತೊರೆಯುವ ಯೋಚನೆ
ಅದರಂತೆ ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಡುವುದು ಬಹುತೇಕ ಖಚಿತವಾಗಿದೆ. ಹೀಗಿದ್ದಾಗ ಮಂಡ್ಯದಲ್ಲಿ ನನಗೆ ರಾಜಕೀಯ ನೆಲೆಯಿಲ್ಲ ಎಂದು ಯೋಚಿಸಿದ ರಮ್ಯಾ ಈ ಹಿಂದೆಯೇ ಮಂಡ್ಯ ತೊರೆಯುವ ಯೋಚನೆ ಮಾಡಿದರು.

ಆಕ್ರೋಶಗೊಂಡ ಅಂಬಿ ಅಭಿಮಾನಿಗಳು
ಇದೇ ವೇಳೆ ಅಂಬರೀಶ್ ಅವರು ಮೃತಪಟ್ಟಾಗ ಅವರ ಅಂತಿಮ ದರ್ಶನಕ್ಕೆ ರಮ್ಯಾ ಮಂಡ್ಯಕ್ಕೆ ಬರಲಿಲ್ಲ. ಇದರಿಂದ ಆಕ್ರೋಶಗೊಂಡ ಅಂಬಿ ಅಭಿಮಾನಿಗಳು ರಮ್ಯಾ ನಮ್ಮ ಪಾಲಿಗೆ ಸತ್ತಂತೆ ಎಂದು ಕಿಡಿಕಾರಿದರು.

ರಾಜಕೀಯ ಭವಿಷ್ಯವಿಲ್ಲ?
ಈ ಎಲ್ಲಾ ಬೆಳವಣಿಗೆ ನಡುವೆಯೇ ರಾತ್ರೋರಾತ್ರಿ ರಮ್ಯಾ ಅವರ ಮನೆಯಲ್ಲಿದ್ದ ವಸ್ತುಗಳನ್ನು ಎರಡು ಲಾರಿಗಳ ಮೂಲಕ ಹೊರಗೆ ಸಾಗಿಸಲಾಗಿದೆ. ಇದೆಲ್ಲವನ್ನು ನೋಡಿದರೆ ಮಂಡ್ಯದಲ್ಲಿ ನನಗಿನ್ನು ರಾಜಕೀಯವಾಗಿ ಭವಿಷ್ಯವಿಲ್ಲ ಎಂದು ಶಾಶ್ವತವಾಗಿ ರಮ್ಯಾ ಮಂಡ್ಯ ತೊರೆಯುತ್ತಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ.












Click it and Unblock the Notifications