ಜಮೀನು ಅಕ್ರಮ ಖಾತೆ, ಮಳವಳ್ಳಿ ತಾಲೂಕು ಪಂಚಾಯತಿ ಇಓ, ಹಲಗೂರು ಪಿಡಿಓ ವಿರುದ್ಧ ಲೋಕಾಯುಕ್ತಕ್ಕೆ ದೂರು
ಮಂಡ್ಯ, ಜುಲೈ, 21: ಮಳವಳ್ಳಿ ತಾಲೂಕು ಹಲಗೂರು ಗ್ರಾಮದ ಸರ್ವೆ ನಂಬರ್ 165/3ರಲ್ಲಿ ಒಂದು ಹೆಕ್ಟೇರ್ 5 ಗುಂಟೆ ಜಮೀನು ಭೀಮಾ ನದಿ ಪಾತ್ರದ ನಿರ್ಬಂಧಿತ ಪ್ರದೇಶವಾಗಿದೆ. ಆದರೆ ಈ ಜಾಗವನ್ನು ಗ್ರಾಮ ಪಂಚಾಯಿತಿಯವರು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ಬೆಳಕಿಗೆಬಂದಿದೆ.
ಈ ಸಂಬಂಧ ಹಲಗೂರು ಗ್ರಾಪಂ ಸದಸ್ಯ ಕೆ.ಸುರೇಂದ್ರ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಹಾಗೂ ನದಿ ಪಾತ್ರದ ನಿರ್ಬಂಧಿತ ಪ್ರದೇಶವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿರುವ ಮಳವಳ್ಳಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿ.ರುದ್ರಯ್ಯ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಮಳವಳ್ಳಿ ತಾಲೂಕು ಹಲಗೂರು ಗ್ರಾಮದ ಸರ್ವೆ ನಂ.165/3ರ 1.05 ಹೆಕ್ಟೇರ್ ಜಮೀನು ವಿಶಾಲಕ್ಷಮ್ಮ ಮತ್ತು ಅವರ ಐದು ಜನ ಮಕ್ಕಳ ಹೆಸರಿನಲ್ಲಿ ಜಂಟಿ ಖಾತೆ ಇರುತ್ತದೆ. ಈ ಜಮೀನನ್ನು ವಿಶಾಲಕ್ಷಮ್ಮ ಮತ್ತು ಮಕ್ಕಳು ಕೆ.ಜಿ.ಜೀವನ್‌ಕುಮಾರ್, ವಿ.ಎಸ್.ಲೋಕೇಶ್ ಅವರಿಗೆ 25.4.2022ರಂದು ಮಳವಳ್ಳಿ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 2.34 ಕೋಟಿ ರೂಪಾಯಿಗಳಿಗೆ ಕ್ರಯದ ಒಪ್ಪಂದ ಕರಾರು ಪತ್ರ ಮಾಡಿಸಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಜಮೀನಿನ ಒಪ್ಪಂದದ ಕರಾರು ಪತ್ರ ಮಾಡಿಸಿಕೊಂಡ ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ವಿಶಾಲಾಕ್ಷಮ್ಮ ಮತ್ತು ಅವರ ಐದು ಜನ ಮಕ್ಕಳು 20.9.2022ರಂದು ಆಸ್ತಿ ವಿಭಾಗ ಪತ್ರ ಮಾಡಿಸಿಕೊಂಡಿದ್ದಾರೆ. 25.4.2022ರಂದು ಮಾಡಿಕೊಂಡಿರುವ ಒಪ್ಪಂದದ ಕರಾರುಪತ್ರವನ್ನೇ ರದ್ದುಪಡಿಸದೆ ಆಸ್ತಿವಿಭಾಗ ಪತ್ರ ಮಾಡಿಸಿಕೊಂಡಿರುವುದು ಕಾನೂನುಬಾಹೀರವಾಗಿದೆ. ಇದರಲ್ಲಿ ಉಪನೋಂದಣಾಧಿಕಾರಿ ಮತ್ತು ಅಲ್ಲಿನ ಸಿಬ್ಬಂದಿಯ ಕರ್ತವ್ಯಲೋಪ ಕಂಡುಬಂದಿದೆ ಎಂದು ಆರೋಪಿಸಿದ್ದಾರೆ.
ಈ ಖಾತೆ ಮಾಡಿರುವ ಒಂದು ಹೆಕ್ಟೇರ್ 5 ಗುಂಟೆ ಪ್ರದೇಶ ಭೀಮಾ ನದಿ ಪಾತ್ರದ ಬರ್‌ಜೋನ್ ಪ್ರದೇಶದಲ್ಲಿದೆ. ಇದರ ಜೊತೆಗೆ ಪಕ್ಕದಲ್ಲೇ ರಾಜಾಕಾಲುವೆಯೂ ಹಾದುಹೋಗಿದ್ದು, ರಾಜಾಕಾಲುವೆಯ ಬರ್‌ಜೋನ್ ಪ್ರದೇಶಕ್ಕೂ ಈ ಜಾಗವು ಒಳಪಡುತ್ತದೆ. ಈ ಪ್ರದೇಶದಲ್ಲಿ ಅಕ್ರಮ ಬಡಾವಣೆ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಲಗೂರು ಗ್ರಾಮ ಪಂಚಾಯತಿ ಸದಸ್ಯ ಎಂ.ಈರೇಶ ಅವರು ಗ್ರಾಮ ಪಂಚಾಯತಿ ಪಿಡಿಓ ಸಿ.ರುದ್ರಯ್ಯ, ಮಳವಳ್ಳಿ ತಾಲೂಕು ಪಂಚಾಯತಿ ಇಓ ರಾಮಲಿಂಗಯ್ಯ ಅವರಿಗೆ ದಾಖಲೆ ಸಹಿತ ದೂರು ನೀಡಿದ್ದಾರೆ.
ಆದರೂ ಕೂಡ ಹಣದ ಆಮಿಷಕ್ಕೆ ಒಳಗಾಗಿ ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿದ್ದಾರೆ. ಈ ಅಕ್ರಮದ ಬಗ್ಗೆ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ದೂರು ಸಲ್ಲಿಸಿ ಗಮನಸೆಳೆದಿರುವುದಾಗಿಯೂ ತಿಳಿಸಿದ್ದಾರೆ. ಸರ್ಕಾರದ ನಿಯಮಾವಳಿಗಳ ಅನ್ವಯ ಒಂದು ಹೆಕ್ಟೇರ್ ಮೇಲ್ಪಟ್ಟು ವಸತಿ ಬಡಾವಣೆ ನಿರ್ಮಿಸಲು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಿಂದ ವಿನ್ಯಾಸ ನಕ್ಷೆ ಅನುಮೋದನೆ ಪಡೆಯಬೇಕೆಂಬ ಉದ್ದೇಶದಿಂದ 1.05 ಎಕರೆ ಜಮೀನನ್ನು ವಿಭಾಗಿಸಿ, ವಿಭಾಗ ಮಾಡಿ ಒಂದೇ ಕುಟುಂಬದ ವ್ಯಕ್ತಿಗಳಿಗೆ ಉದ್ದೇಶಪೂರ್ವಕವಾಗಿ ಅಕ್ರಮ ಖಾತೆ ಮಾಡಿಕೊಡಲಾಗಿದೆ.
ಈ ಜಮೀನಿನಲ್ಲಿ ಯಾವುದೇ ಮೂಲಸೌಲಭ್ಯಗಳನ್ನು ಒದಗಿಸದಿದ್ದರೂ ಅಕ್ರಮ ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿ ಮತ್ತು ಸರ್ಕಾರಕ್ಕೆ ಸೇರಬೇಕಾದ ಸಿಎ ನಿವೇಶನ, ಉದ್ಯಾನವನ, ರಸ್ತೆ ಮತ್ತು ನಗರ-ಗ್ರಾಮಾಂತರ ಯೋಜನಾ ಇಲಾಖೆಗೆ ಭರಿಸಬೇಕಾದ ಶುಲ್ಕ ನಷ್ಟವಾಗಿರುತ್ತದೆ ಎಂದು ಆರೋಪಿಸಿದ್ದಾರೆ.
ಹಲಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆ ನಿರ್ಮಾಣ ಮಾಡುತ್ತಿರುವ ದೂರಿನ ಸಂಬಂಧ ಜಿ.ಪಂ. ಉಪ ಕಾರ್ಯದರ್ಶಿ, ಮಳವಳ್ಳಿ ತಾ.ಪಂ. ಇಓ ಅವರಿಗೆ ಪತ್ರ ಬರೆದು ತನಿಖಾ ತಂಡವನ್ನು ನೇಮಿಸಿ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಅದರಂತೆ ಮಳವಳ್ಳಿ ತಾ.ಪಂ. ಇಓ ರಾಮಲಿಂಗಯ್ಯ ಅವರು ತಾಲೂಕು ಯೋಜನಾಧಿಕಾರಿ ದೀಪು, ಸಹಾಯಕ ನಿರ್ದೇಶಕ ಹೆಚ್.ಜಿ.ಪಾರ್ಥಸಾರಥಿ, ವಿಷಯ ನಿರ್ವಾಹಕ ಎಸ್.ಪಿ.ನವೀನ್‌ರಾಜ್ ಅವರನ್ನು ನೇಮಿಸಲಾಗಿದೆ. ಈ ತಂಡಕ್ಕೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ವಿವರವಾದ ವರದಿ ಸಲ್ಲಿಸುವಂತೆ 26.6.2023ರಲ್ಲಿ ಸೂಚಿಸಿದ್ದಾರೆ.
ಮಳವಳ್ಳಿ ತಾ.ಪಂ. ಇಓ ತನಿಖೆಗೆ ನಿಯೋಜಿಸಿದ ತಂಡ ಇದುವರೆಗೂ ಹಲಗೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆಯನ್ನೇ ನಡೆಸದಿರುವುದು ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ ಎಂದು ದೂರುದಾರ ಕೆ.ಸುರೇಂದ್ರ ಆರೋಪಿಸಿದ್ದಾರೆ. ತಂಡ ರಚನೆಯಾಗಿ ಸುಮಾರು ಒಂದು ತಿಂಗಳು ಸಮೀಪಿಸಿದೆ. ಇದುವರೆಗೂ ಪಂಚಾಯಿತಿಗೆ ಭೇಟಿ ಕೊಟ್ಟು ದೂರಿನಲ್ಲಿರುವ ಅಂಶಗಳ ಬಗ್ಗೆ ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿರುವುದು ವಿಳಂಬಕ್ಕೆ ಕಾರಣವಾಗಿದೆ. ಈ ಸಂಬಂಧ ತಕ್ಷಣವೇ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications