KRS Dam: ಕೆಆರ್ಎಸ್ ತುಂಬಲು 4 ಅಡಿ ಬಾಕಿ; ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆ
ಕೆಆರ್ಎಸ್ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲುಪಿದ್ದು, ಜಲಾಶಯದ ಮಟ್ಟ 120 ಅಡಿಗೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸಂದರ್ಭದಲ್ಲಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ನದಿಗೆ ಹೆಚ್ಚಿನ ನೀರು ಹರಿಯಬಿಡುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ. ಯಾವುದೇ ಹಾನಿಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆಆರ್ಎಸ್ ಜಲಾಶಯಕ್ಕೆ ಪ್ರಸ್ತುತ 51,375 ಕ್ಯೂಸೆಕ್ಸ್ ಒಳ ಹರಿವು ಇದ್ದು, ಅಣೆಕಟ್ಟೆಯ ಸುರಕ್ಷತಾ ದೃಷ್ಠಿಯಿಂದ ಭಾರೀ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕೆಆರ್ಎಸ್ ಜಲಾಶಯದಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಸಂದರ್ಭದಲ್ಲಿ ನದಿ ಪಾತ್ರದಲ್ಲಿರುವ ಶ್ರೀರಂಗಪಟ್ಟಣ ತಾಲೂಕಿನ 53, ಪಾಂಡವಪುರ ತಾಲೂಕಿನ 15, ಮಳವಳ್ಳಿ ತಾಲೂಕಿನ 21 ಹಾಗೂ ಹೇಮಾವತಿ ಜಲಾಶಯಕ್ಕೆ ಸಂಬಂಧಿಸಿದಂತೆ ಕೆಆರ್ ಪೇಟೆ ತಾಲೂಕಿನ 3 ಗ್ರಾಮಗಳಿಗೆ ಹಾನಿಯುಂಟಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ನಿಗಾ ವಹಿಸಲಾಗಿದೆ.
ಈ ಗ್ರಾಮಗಳಿಗೆ ಖುದ್ದು ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸೀಫ್ ಸೇರಿದಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜಿಲ್ಲಾ ಮಟ್ಟದ ಜೊತೆಗೆ ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಟಾಸ್ಕ್ ಸಮಿತಿ ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀರಾವರಿ ನಿಗಮದ ಅಧಿಕಾರಿಗಳ ಜೊತೆಗೆ ಸಮನ್ವಯತೆ ಸಾಧಿಸಿ ಕಾಲ ಕಾಲಕ್ಕೆ ಬಿಡುಗಡೆಯಾಗುವ ನೀರು ಹಾಗೂ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಕಂಟ್ರೋಲ್ ರೂಂ ಸ್ಥಾಪನೆ
ಜಿಲ್ಲೆಯಲ್ಲಿ ಯಾವುದೇ ಸ್ಥಳ ಅಥವಾ ಮನೆಗಳು ಪ್ರವಾಹಕ್ಕೆ ಸಿಲುಕಿದರೆ ರಕ್ಷಣೆಗಾಗಿ ಎಲ್ಲಾ ತಾಲೂಕು ಕಚೇರಿಯಲ್ಲಿ ಕಂಟ್ರೋಲ್ ರೂಂನ್ನು ಸ್ಥಾಪಿಸಬೇಕು. ಮಳೆ ಹಾಗೂ ನದಿಗಳಿಂದ ಯಾವುದೇ ಅಪಾಯಗಳು ಉಂಟಾದಾಗ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ಸಲ್ಲಿಸುವುದರಿಂದ ಸಾರ್ವಜನಿಕರನ್ನು ಸಮಸ್ಯೆಯಿಂದ ಪಾರು ಮಾಡಬಹುದು. ಚೆಸ್ಕಾಂ ಹಾಗೂ ಕಾವೇರಿ ನೀರಾವರಿ ನಿಗಮದಿಂದಲೂ ಸಹಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರತಿ ತಾಲೂಕಿಗೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ತಾಲೂಕು ಮಟ್ಟದಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲಾಗಿದೆ. 3 ಹಂತಗಳಲ್ಲಿಯೂ ತಂಡಗಳನ್ನು ರಚಿಸಿಕೊಂಡು ಸಮನ್ವಯತೆಯಿಂದ ಸಹಕಾರ ಮನೋಭಾವದಿಂದ ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸುವತೆ ಸೂಚಿಸಿದರು.
ಸೂಚನಾ ಫಲಕ ಅಳವಡಿಸಲು ಸಲಹೆ
ಯಾವುದೇ ಅಪಾಯಗಳು ಸಂಭವಿಸುವುದಕ್ಕೂ ಮುನ್ನ ಮುಂಜಾಗ್ರತಾ ಕ್ರಮವಾಗಿ ಅವಶ್ಯಕತ ಸಿದ್ಧತೆಯನ್ನು ಮಾಡಿಟ್ಟುಕೊಳ್ಳುವುದು ಸೂಕ್ತ. ಅಗ್ನಶಾಮಕ ಇಲಾಖೆ, ಪೊಲೀಸ್ ಇಲಾಖೆಗಳು ಸ್ವಯಂ ಸೇವಕರು, ಈಜು ಪರಿಣಿತರ ಪಟ್ಟಿ, ಜೆ.ಸಿ.ಬಿ. ಹಾಗೂ ಬೋಟ್ ವ್ಯವಸ್ಥೆಯನ್ನು ಮಾಡಿಕೊಂಡಿರುವಂತೆ ಸಲಹೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನಾಲೆಗಳಿಗೆ ಬಿಟ್ಟಾಗ ಯಾವುದೇ ಕುಟುಂಬದ ಸ್ಥಳಾಂತರ ಘಟನೆಗಳು ನಡೆದಿಲ್ಲ. ಒಂದು ವೇಳೆ ತೀವ್ರ ಪ್ರವಾಹದಿಂದಾಗಿ ಯಾವುದೇ ಕುಟುಂಬವನ್ನು ಸ್ಥಳಾಂತರಿಸಬೇಕಾದರೆ ಮುನ್ನೆಚ್ಚರಿಕಾ ಕ್ರಮವಾಗಿ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಿದ್ದಾರೆ.












Click it and Unblock the Notifications