ಕೆ.ಸಿ.ನಾರಾಯಣಗೌಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಮಂಡ್ಯ, ಜುಲೈ 8: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕೆ. ಸಿ ನಾರಾಯಣಗೌಡ ವಿರುದ್ಧ ಮಂಡ್ಯದ ಜಾತ್ಯತೀತ ಜನತಾದಳ ಪಕ್ಷದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಶಾಸಕ ನಾರಾಯಣಗೌಡ ವಿರುದ್ಧ ಕಾರ್ಯಕರ್ತರು ಕೆಂಡಕಾರುತ್ತಿದ್ದಾರೆ. ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿಗೆ ಶಾಸಕರು ಸೋಲ್ಡ್ ಆಗಿದ್ದಾರೆ ಎಂಬ ರೀತಿಯ ಬರಹ ಹಾಗೂ ಶ್ರದ್ಧಾಂಜಲಿ ಭಾವಚಿತ್ರವನ್ನು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶಾಸಕ ನಾರಾಯಣಗೌಡ ವಿರುದ್ಧ ದಳ ಕಾರ್ಯಕರ್ತರು ಆಕ್ರೋಶಗೊಂಡಿದ್ದರೆ, ಇತ್ತ ಮಾಜಿ ಶಾಸಕ ಚಂದ್ರಶೇಖರ್ ಬೆಂಬಲಿಗರು ಹರ್ಷ ವ್ಯಕ್ತಪಡಿಸುತ್ತಾ ಕೆಆರ್ ಪೇಟೆಗೆ ಅಂಟಿಕೊಂಡಿದ್ದ ಗ್ರಹಣ ತೊಲಗಿ ಬಿಡುಗಡೆಯಾಗುವ ಸಮಯ ಬಂದಿದೆ. ಮತ್ತೊಮ್ಮೆ ಚಂದ್ರಶೇಖರ್ ಎನ್ನುವ ಬರಹಗಳನ್ನು ಸಾಮಾಜಿಕ ಜಾಲತಾಣ ಹರಿಬಿಟ್ಟಿದಾರೆ.

ಶಾಸಕ ಕೆ ಸಿ ನಾರಾಯಣಗೌಡರು ರಾಜೀನಾಮೆ ನೀಡಿದ್ದು ಕೆ.ಆರ್ ಪೇಟೆ ಕ್ಷೇತ್ರಕ್ಕೆ ಉಪಚುನಾವಣೆ ನಿಗದಿಯಾದರೆ, ಜಾತ್ಯತೀತ ಜನತಾದಳದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕು ಎನ್ನುವ ಕೂಗು ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಕೇಳಿಬಂದಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ತೇಲಿಬಿಟ್ಟಿದ್ದಾರೆ.
'ನಮ್ಮ ಪಕ್ಷದ ಕೆಲವು ಶಾಸಕರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಕೆ.ಆರ್ ಪೇಟೆಯಿಂದ ನಮ್ಮ ಯುವರಾಜ ನಿಖಿಲ್ ಕುಮಾರಸ್ವಾಮಿ' ಎಂಬ ಸ್ಟೇಟಸ್ ಹಾಕುವ ಮೂಲಕ ನಿಖಿಲ್ ಸ್ಪರ್ಧಿಸುವಂತೆ ಕಾರ್ಯಕರ್ತರು ಮನವಿ ಮಾಡಿದ್ದಾರೆ.












Click it and Unblock the Notifications