Goback Ramya Campaign: ಮಂಡ್ಯದಲ್ಲಿ ರಮ್ಯಾಗೆ ಸಂಕಷ್ಟ, ಗೋಬ್ಯಾಕ್ ರಮ್ಯಾ ಎಂದ ಅಂಬಿ ಅಮಾನಿಗಳು,
ಬೆಂಗಳೂರು, ಮೇ 02: ರಾಜಕೀಯದಿಂದ ದೂರವಾಗಿದ್ದ ಕನ್ನಡ ಚಿತ್ರರಂಗದ ನಟಿ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಂಗಳವಾರ ಅವರು ಮಂಡ್ಯದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಈ ವೇಳೆ ಅವರು 'ಗೋಬ್ಯಾಕ್' ಅಭಿಯಾನ ಎದುರಿಸಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ದಿವಂಗತ ಅಂಬರೀಶ್ ಅಭಿಮಾನಿಗಳು ರಮ್ಯಾ ಕ್ಷೇತ್ರ ಪ್ರವೇಶಕ್ಕೆ ಫುಲ್ ಗರಂ ಆಗಿದ್ದಾರೆ. ರಮ್ಯಾ ವಿರುದ್ಧ ಕೆಂಡಾಮಂಡಲವಾಗಿ ಮಂಗಳವಾರ 'ಗೋಬ್ಯಾಕ್ ರಮ್ಯಾ' ಅಭಿಮಾನ ಆರಂಭಿಸಿದ್ದಾರೆ. ಇದರಿಂದ ರಮ್ಯಾ ಅವರಿಗೆ ಇರುಸು ಮುರುಸು ಆಗಿದೆ ಎಂದು ತಿಳಿದು ಬಂದಿದೆ.

ಹೌದು, ಮೂರು ವರ್ಷಗಳಿಂದ ರಾಜಕೀಯ ರಂಗದಿಂದ ದೂರವಾಗಿದ್ದ ರಮ್ಯಾ ಅವರು ಮೇ 1ರಿಂದ ಕಾಂಗ್ರೆಸ್ ಪರ ಪ್ರಚಾರ ಆರಂಭಿಸಿದ್ದಾರೆ. ಎರಡನೇ ದಿನ ಮಂಡ್ಯದಲ್ಲಿ ಅವರಿಗೆ ಪ್ರತಿರೋಧದ ಕಾವು ತಟ್ಟಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಧಿಕಾರ ಅನುಭವಿಸಲು ನಮ್ಮ ನಟ ಮತ್ತು ಕಾಂಗ್ರೆಸ್ ನಾಯಕ ರೆಬಲ್ ಸ್ಟಾರ್ ಅಂಬರೀಶ್ ಅವರು ಕಾರಣ. ಅವರು ನಿಧನರಾದ ಸಮಯದಲ್ಲಿ ರಮ್ಯಾ ಅಂತಿಮ ದರ್ಶನಕ್ಕೆ ಬರಲಿಲ್ಲ ಎಂದು ಅಂಬರೀಶ್ ಅಭಿಮಾನಿ ಸಂಘದ ಸದಸ್ಯರು ಆಕ್ರೋಶ ಹೊರ ಹಾಕಿದ್ದಾರೆ.
ಮಂಡ್ಯಕ್ಕೆ ರಮ್ಯಾ ಕೊಡುಗೆ ಶೂನ್ಯ
ಸ್ವಲ್ಪವು ನಿಯತ್ತಿಲ್ಲದ ರಮ್ಯಾ ಅವರು ನಂಬಿಕೆ ವಿಶ್ವಾಸ ದ್ರೋಹದ ಕೆಲಸ ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ದಿಢೀರನೇ ಮನೆ ಕಾಲಿ ಮಾಡಿ ಪರಾರಿಯಾಗಿದ್ದರು. ಆಗ ಅವರಿಗೆ ಮಂಡ್ಯದ ಕಾಂಗ್ರೆಸ್ ಕಾರ್ಯಕರ್ತರು ಅವರ ಅಭಿಮಾನಿಗಳ ಕುರಿತು ಯೋಚಿಸಲಿಲ್ಲ. ನಮ್ಮನ್ನೆಲ್ಲ ಕಡೆಗಣಿಸಿದ ರಮ್ಯಾ ಅವರಿಂದ ಮಂಡ್ಯಕ್ಕೆ ಕೊಡುಗೆ ಶೂನ್ಯ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಮ್ಯಾ ಅವರಿಗೆ ಈ ಹಿಂದೆ ಬೇಡವಾಗಿದ್ದ ಮಂಡ್ಯ ಕ್ಷೇತ್ರ ಇಲ್ಲಿನ ಜನರು ಈಗ ಏಕೆ ಬೇಕು? ಚುನಾವಣೆಗೋಸ್ಕರ ಮಂಡ್ಯ ನೆನಪಾಗಿದೆಯೇ ಎಂದು ಅಂಬಿ ಅಬಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಪಕ್ಷವು ಕಳೆದ 2018ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗದುಕೊಂಡು ಗೆಲುವಿನ ನಗೆ ಬೀರಿತ್ತು. ಆಗ ಮಂಡ್ಯದಲ್ಲಿ ಕಾಂಗ್ರೆಸ್ ಸೋಲು ಕಾಣಬೇಕಾಯಿತು. ಇದಾದ ಬಳಿಕ ಅವರು ಮಂಡ್ಯ ಕ್ಷೇತ್ರದಿಂದ ರಾಜಕೀಯದಿಂದಲೇ ದೂರವಾಗಿದ್ದರು.
ಸುಮಾರು ಮೂರು ವರ್ಷ ರಾಜಕೀಯದಿಂದ ದೂರುವಿದ್ದ ರಮ್ಯಾ ಅವರು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಅಖಾಡಕ್ಕಿಳಿಸಿದ್ದಾರೆ. ಮಂಡ್ಯ, ಹಾಸನ, ರಾಮನಗರ, ವಿಜಯಪುರ, ಬಬಲೇಶ್ವರ ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಆದರೆ ಅವರು ಮತಯಾಚನೆ ಆರಂಭಿಸಿದ (ಮೇ 1) ಎರಡನೇ ದೀನವೇ ಅವರಿಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.












Click it and Unblock the Notifications