Yogi Adityanath in Mandya: ಏಪ್ರಿಲ್ 26ರಂದು ಮಂಡ್ಯದಲ್ಲಿ ರೋಡ್ ಶೋ ನಡೆಸಲಿರುವ ಯೋಗಿ ಆದಿತ್ಯಾನಾಥ್
ಮಂಡ್ಯ, ಏಪ್ರಿಲ್, 23: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರು ಏಪ್ರಿಲ್ 26ರಂದು ಮಂಡ್ಯಕ್ಕೆ ಭೇಟಿ ನೀಡಲಿದ್ದು, ಕ್ಷೇತ್ರದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಆಗಮಿಸುವ ಯೋಗಿ ಆದಿತ್ಯಾನಾಥ್ ಅವರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ರೋಡ್‌ಶೋ ನಡೆಸಲಿದ್ದಾರೆ. ರಾಜೇಂದ್ರ ಪ್ರಸಾದ್ ರಸ್ತೆ (ಆರ್.ಪಿ.ರಸ್ತೆ), ಅಂಬೇಡ್ಕರ್ ವೃತ್ತ (ಕರ್ನಾಟಕ ಬಾರ್ ಸರ್ಕಲ್), ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ವಿಶ್ವೇಶ್ವರಯ್ಯ ರಸ್ತೆ (ವಿ.ವಿ. ರಸ್ತೆ) ಸೇರಿದಂತೆ ವಿವಿಧ ರಸ್ತೆಗಳಲ್ಲಿ ರೋಡ್ ಶೋ ನಡೆಸಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿ.ವಿ. ರಸ್ತೆ ಮೂಲಕ ಮಹಾವೀರ ವೃತ್ತ, ಮೈಸೂರು-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ಸಿಲ್ವರ್ ಜ್ಯೂಬಿಲಿ ಪಾರ್ಕಿನವರೆಗೆ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಏಪ್ರಿಲ್ 25ರಂದೇ ಬೆಂಗಳೂರಿಗೆ ಆಗಮಿಸುವ ಯೋಗಿ ಆದಿತ್ಯಾನಾಥ್ ಅವರು, ರಾತ್ರಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 26ರಂದು ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಜೆಪಿ ಗೆಲ್ಲುವುದು ಮುಖ್ಯ
ಇನ್ನು ಹಳೇ ಮೈಸೂರು ಪ್ರದೇಶದಲ್ಲಿ ಬರುವ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲುವುದು ಮುಖ್ಯ. ಮುಂದಿನ ಸರ್ಕಾರದ ರಚನೆಯಲ್ಲಿ ಇದು ಮಹತ್ವದ ಪಾತ್ರವನ್ನು ವಹಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಇತ್ತೀಚೆಗಷ್ಟೇ ಹೇಳಿದ್ದರು.
ಮೈಸೂರಿನಲ್ಲಿ ಪಕ್ಷದ ಡಿಜಿಟಲ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂತೋಷ್, 'ಕರಾವಳಿ ಜಿಲ್ಲೆಗಳು, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಕೇಸರಿ ಪಕ್ಷದ ಸಾಧನೆ ಉತ್ತುಂಗಕ್ಕೇರಿದೆ. ಈಗ ಹಳೇ ಮೈಸೂರು ಭಾಗದಲ್ಲಿ ಇದನ್ನು ನೋಡುವ ಆಕಾಂಕ್ಷೆ ಇದೆ' ಎಂದು ಅವರು ತಿಳಿಸಿದ್ದರು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 1.8 ಕೋಟಿ ಮತಗಳನ್ನು ಪಡೆದಿತ್ತು. 'ಈಗ ಕರ್ನಾಟಕದಲ್ಲಿ 123 ಸ್ಥಾನಗಳನ್ನು ದಾಟಲು ನಮಗೆ 1.5 ಕೋಟಿ ಮತಗಳು ಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಡಿಜಿಟಲ್ ಮಾಧ್ಯಮದತ್ತ ಗಮನ ಹರಿಸಿ ಮತದಾರರಿಗೆ ಸರಿಯಾದ ಸಂದೇಶ ತಲುಪಿಸಬೇಕು' ಎಂದು ಅವರು ಸಲಹೆ ನೀಡಿದ್ದರು.
54 ಲಕ್ಷ ಕನಿಷ್ಠ ರೈತರಿಗೆ ವಾರ್ಷಿಕ 10,000 ರೂ.ಗಳನ್ನು ವಿಸ್ತರಿಸುವಂತಹ ಬಿಜೆಪಿ ಸರ್ಕಾರದ ಪ್ರಮುಖ ಸಾಧನೆಗಳನ್ನು ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತದಾರರಿಗೆ ಮನವರಿಕೆ ಮಾಡಬೇಕು. ಎಸ್‌ಸಿ ಮತ್ತು ಎಸ್‌ಟಿಗಳ ಹೊರತಾಗಿ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳದ ಬಗ್ಗೆಯೂ ಮಾತನಾಡುವ ಅಗತ್ಯವಿದೆ ಎಂದು ಬಿಎಲ್ ಸಂತೋಷ್ ತಿಳಿಸಿದ್ದರು.
ಏಪ್ರಿಲ್ 29 ರಿಂದ ಪ್ರಧಾನಿ ಮೋದಿ ಪ್ರಚಾರ ಆರಂಭಿಸಿದ ನಂತರ ಪಕ್ಷವು 100 ಸ್ಥಾನಗಳನ್ನು ಗೆಲ್ಲುವತ್ತ ಹೆಜ್ಜೆ ಹಾಕುತ್ತದೆ. ಆ ನಂತರ ಸರಳ ಬಹುಮತವನ್ನು ( 113 ) ದಾಟಲಿದೆ ಎಂದು ಸಮೀಕ್ಷೆಗಳು ಈಗಾಗಲೇ ತೋರಿಸಿವೆ ಎಂದು ಅವರು ಹೇಳಿದ್ದರು.
ಕಾಂಗ್ರೆಸ್ 130 ಸ್ಥಾನಗಳನ್ನು ಪಡೆಯುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಸಂತೋಷ್ ತಳ್ಳಿಹಾಕಿದರು. ಆದರೆ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗದೆ ಗಮನಹರಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಏಪ್ರಿಲ್ 29 ರಿಂದ ಪ್ರಧಾನಿ ಮೋದಿ ಪ್ರಚಾರ ಆರಂಭಿಸಿದ ನಂತರ ಪಕ್ಷವು 100 ಸ್ಥಾನಗಳನ್ನು ಗೆಲ್ಲುವತ್ತ ಹೆಜ್ಜೆ ಹಾಕುತ್ತದೆ. ಆ ನಂತರ ಸರಳ ಬಹುಮತವನ್ನು ( 113 ) ದಾಟಲಿದೆ ಎಂದು ಸಮೀಕ್ಷೆಗಳು ಈಗಾಗಲೇ ತೋರಿಸಿವೆ. ಕಾಂಗ್ರೆಸ್ 130 ಸ್ಥಾನಗಳನ್ನು ಪಡೆಯುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಸಂತೋಷ್ ತಳ್ಳಿಹಾಕಿದರು. ಆದರೆ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗದೆ ಗಮನಹರಿಸುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದ್ದರು.












Click it and Unblock the Notifications