ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿಲ್ಲ ಏಕೆ?, ಏನಿದರ ರಹಸ್ಯ: ಇಲ್ಲಿದೆ ವಿವರ
ಮಂಡ್ಯ, ಏಪ್ರಿಲ್, 14: ಜಿಲ್ಲೆಯಲ್ಲಿರುವ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಮದ್ದೂರು ಕ್ಷೇತ್ರಕ್ಕೆ ಕಾಂಗ್ರೆಸ್ ಇದುವರೆಗೂ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಕ್ಷೇತ್ರದಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದರೆ. ಮತ್ತೊಂದೆಡೆ ಟಿಕೆಟ್ ಆಕಾಂಕ್ಷಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ ಆಗುತ್ತಿದೆ.
ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ಉಳಿದಂತೆ ಐದು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದರೆ ಮದ್ದೂರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂಬ ಗೊಂದಲ ಮುಂದುವರೆದಿದೆ. ಹೀಗಾಗಿ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.

ಹಾಗೆ ನೋಡಿದರೆ ಮದ್ದೂರು ಕ್ಷೇತ್ರ ಜೆಡಿಎಸ್‌ನ ಹಿಡಿತದಲ್ಲಿದೆ. ಇಲ್ಲಿ ಹಾಲಿ ಶಾಸಕರಾಗಿರುವ ಡಿ.ಸಿ.ತಮ್ಮಣ್ಣನವರು ಸತತವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಇವರಿಗೆ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಡುತ್ತಿದೆಯಾ? ಎನ್ನುವ ಪ್ರಶ್ನೆ ಕಾಡತೊಡಗಿದೆ. ಆದರೆ ಸದ್ಯ ಕ್ಷೇತ್ರದಲ್ಲಿರುವ ಆಕಾಂಕ್ಷಿಗಳಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲವಿದ್ದು, ಇದರಿಂದ ಅಭ್ಯರ್ಥಿಗಳ ಘೋಷಣೆ ವಿಳಂಬವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಆಕಾಂಕ್ಷಿಗಳ ಮಧ್ಯೆ ಭಾರಿ ಪೈಪೋಟಿ
ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರ ಎಸ್.ಶಂಕರ್ ಪುತ್ರ ಎಸ್.ಗುರುಚರಣ್ ಮತ್ತು ಉದ್ಯಮಿ ಕಾಂಗ್ರೆಸ್ ಮುಖಂಡ ಕದಲೂರು ಉದಯ್ ಅವರು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಇವರಿಬ್ಬರ ನಡುವೆ ಯಾರಿಗೆ ಹಸಿರು ನಿಶಾನೆ ತೋರುತ್ತದೆ ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಕೆಪಿಸಿಸಿಯಿಂದ ಬಿಡುಗಡೆಯಾದ ಪಟ್ಟಿಯಲ್ಲಿ ಮದ್ದೂರು ಕ್ಷೇತ್ರದ ಅಭ್ಯರ್ಥಿ ಘೋಷಣೆಯನ್ನು ತಡೆಹಿಡಿಯಲಾಗಿದೆ. ಆದರೆ ಈ ಕ್ಷೇತ್ರದ ಟಿಕೆಟ್ ನನಗೆ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಲ್ಲಿರುವ ಕದಲೂರು ಉದಯ್ ಅವರು ಕಳೆದೊಂದು ವರ್ಷದ ಹಿಂದಿನಿಂದಲೇ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಈ ಮೂಲಕ ಅವರು ಸಮಾಜ ಸೇವೆ ಮಾಡುತ್ತಾ ಮತದಾರರ ಮನವೊಲಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಮನವೊಲಿಸುವ ಕಾರ್ಯದಲ್ಲಿ "ಕೈ" ನಾಯಕರು
ಕ್ಷೇತ್ರದಲ್ಲಿ ನಿಜವಾಗಿಯೂ ವಿರೋಧ ಪಕ್ಷದ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಡಬೇಕಾಗಿತ್ತು. ಆದರೆ ಅಭ್ಯರ್ಥಿಗಳ ಘೋಷಣೆ ಮುನ್ನವೇ ಕಾಂಗ್ರೆಸ್ ಪಕ್ಷದೊಳಗೆ ಪೈಪೋಟಿ ಏರ್ಪಟ್ಟಿರುವುದರಿಂದ ಟಿಕೆಟ್ ಘೋಷಣೆ ಬಳಿಕ ಕಾಂಗ್ರೆಸ್ ಒಳಗೆ ಬಂಡಾಯದ ಹೊಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಗುರುಚರಣ್ ಮತ್ತು ಕದಲೂರು ಉದಯ್ ಅವರ ಮನವೊಲಿಸಿ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ ಕದಲೂರು ಉದಯ್ ಅವರಿಗೆ ಟಿಕೆಟ್ ಲಭಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಕೆಲವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಗುರುಗಳಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಬೆಳವಣಿಗೆಯಲ್ಲಿ ಎಸ್.ಎಂ.ಕೃಷ್ಣ ಅವರ ಕೊಡುಗೆ ಬಹಳಷ್ಟಿದ್ದು, ಹೀಗಾಗಿ ಅವರ ತಮ್ಮನ ಮಗನಾಗಿರುವ ಗುರುಚರಣ್‌ಗೆ ಟಿಕೆಟ್ ನೀಡಿ ಗುರುವಿನ ಋಣ ತೀರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಟಿಕೆಟ್ ಕಗ್ಗಂಟು ಬಗೆಹರಿಯುತ್ತಾ?
ಈಗಾಗಲೇ ಜೆಡಿಎಸ್‌ನಿಂದ ಡಿ.ಸಿ.ತಮ್ಮಣ್ಣ ಮತ್ತು ಬಿಜೆಪಿಯಿಂದ ಮನ್ಮುಲ್ ನಿರ್ದೇಶಕರಾದ ಎಸ್.ಪಿ.ಸ್ವಾಮಿ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದೊಳಗಿನ ಗೊಂದಲವನ್ನು ಸರಿಪಡಿಸಿಕೊಂಡು ಅಭ್ಯರ್ಥಿಯನ್ನು ಘೋಷಣೆ ಮಾಡುವುದು ಅನಿವಾರ್ಯವಾಗಿದೆ.
ಇಷ್ಟರಲ್ಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡದೆ ದಿನವನ್ನು ತಳ್ಳಿದಷ್ಟು ಅದರ ಲಾಭವನ್ನು ಜೆಡಿಎಸ್ ಅಭ್ಯರ್ಥಿ ಆಗಿರುವ ಡಿ.ಸಿ.ತಮ್ಮಣ್ಣ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಒಟ್ಟಾರೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಯಾವಾಗ ಟಿಕೆಟ್ ಘೋಷಣೆ ಮಾಡುತ್ತಾರೆ? ಯಾರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗುತ್ತಾರೆ? ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ನಾಯಕರು ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications