ಎಚ್ಡಿಕೆ ತನ್ನ ಹೆಸರು ಉಳಿಸಿಕೊಳ್ಳಲು ರೇವಣ್ಣನ ಹೆಸರು ಹಾಳು ಮಾಡುತ್ತಿದ್ದಾರೆ: ಚೆಲುವರಾಯಸ್ವಾಮಿ
Recommended Video
ಮಂಡ್ಯ, ಜುಲೈ 15: ಅತೃಪ್ತ ಶಾಸಕರು ಯಾವುದೇ ಮನವೊಲಿಕೆಗೆ, ಆಫರ್ ಗಳಿಗೆ ಬಗ್ಗುತ್ತಿಲ್ಲ ಎಂದರೆ, ಅವರಿಗೆಲ್ಲಾ ಸಮ್ಮಿಶ್ರ ಸರಕಾರದ ಮೇಲೆ ಎಷ್ಟು ಬೇಸರ ಇರಬೇಡ. ಇದಕ್ಕೆಲ್ಲಾ ಕಾರಣ ಸಿಎಂ ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಎಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ದೂರಿದ್ದಾರೆ.
ಎಲ್ಲರೂ ರೇವಣ್ಣನನ್ನು ದೂರುತ್ತಿದ್ದಾರೆ, ಸಮಸ್ಯೆಗಳಿಗೆ ಅವರೊಬ್ಬರೇ ಕಾರಣರಲ್ಲ. ಅದರಲ್ಲೂ ಕುಮಾರಸ್ವಾಮಿಯದ್ದೂ ಪಾಲಿದೆ. ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಉಳಿಸಿಕೊಳ್ಳಲು ರೇವಣ್ಣನ ಹೆಸರನ್ನು ಡ್ಯಾಮೇಜ್ ಮಾಡುತ್ತಿದ್ದಾರೆಂದು ಚೆಲುವರಾಯಸ್ವಾಮಿ ಆರೋಪಿಸಿದ್ದಾರೆ.
ಬೇರೆ ಬೇರೆ ಇಲಾಖೆಗಳಲ್ಲಿ ರೇವಣ್ಣ ಎಷ್ಟೇ ಮೂಗು ತೂರಿಸಿದರೂ, ಕೊನೆಗೆ ಕಡತಕ್ಕೆ ಸಹಿ ಹಾಕಬೇಕಾದವರು ಮುಖ್ಯಮಂತ್ರಿಗಳಲ್ಲವೇ ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದ್ದಾರೆ.

ನನ್ನ ಪ್ರಕಾರ, ಸಮ್ಮಿಶ್ರ ಸರಕಾರ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಕುಮಾರಸ್ವಾಮಿಯೇ ಹೊಣೆ. ಸುಮ್ಮನೆ ರೇವಣ್ಣನ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಚೆಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯದ ಬಗ್ಗೆ ಹೆಚ್ಚು ಅನುಭವವಿಲ್ಲದವರು ರೇವಣ್ಣನವರನ್ನು ದೂರುತ್ತಿದ್ದಾರೆ. ಅಸಲಿಗೆ ಸಮಸ್ಯೆ ಅದಲ್ಲ ಎಂದು ಚೆಲುವರಾಯಸ್ವಾಮಿ, ಮುಖ್ಯಮಂತ್ರಿಗಳನ್ನು ದೂರಿದ್ದಾರೆ.
ರೇವಣ್ಣ ಒಬ್ಬರಿಂದಲೇ ಸಮ್ಮಿಶ್ರ ಸರಕಾರಕ್ಕೆ ಸಮಸ್ಯೆ ಎಂದಾದರೆ, ಅವರನ್ನು ಸಂಪುಟದಿಂದ ಕೈಬಿಡಬಹುದಲ್ಲವೇ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.












Click it and Unblock the Notifications