ರಾಜಕೀಯ ಪ್ರತಿಷ್ಠೆ ಕಣವಾದ ಶ್ರೀರಂಗಪಟ್ಟಣ ಕ್ಷೇತ್ರ: ಗೆಲುವು ಯಾರಿಗೆ?
ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೊದಲಿನಿಂದಲೂ ಎದುರಾಳಿ ಪಕ್ಷಗಳಾಗಿದ್ದು, ಈ ಬಾರಿ ಬಿಜೆಪಿ ಕೂಡ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.ಇದರ ನಡುವೆ ರೈತಸಂಘದ ಅಭ್ಯರ್ಥಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವುದು ಕಂಡು ಬಂದಿದೆ.
ಮಂಡ್ಯ, ಮಾರ್ಚ್3: ಮಂಡ್ಯ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದಾಗಿರುವ ಶ್ರೀರಂಗಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದೆ. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೊದಲಿನಿಂದಲೂ ಎದುರಾಳಿ ಪಕ್ಷಗಳಾಗಿದ್ದು, ಈ ಬಾರಿ ಬಿಜೆಪಿ ಕೂಡ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಇದರ ನಡುವೆ ರೈತ ಸಂಘವೂ ಪ್ರವೇಶಿಸಿದ್ದು, ಈಗಿನಿಂದಲೇ ರೈತಸಂಘದ ಅಭ್ಯರ್ಥಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವುದು ಕಂಡು ಬಂದಿದೆ.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಎರಡು ಪಕ್ಷ ಮಾತ್ರವಲ್ಲ ಎರಡು ಕುಟುಂಬಗಳು ರಾಜಕೀಯ ಪ್ರಾಬಲ್ಯ ಹೊಂದಿರುವುದನ್ನು ತಳ್ಳಿಹಾಕುವಂತಿಲ್ಲ. ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ಪ್ರತಿಷ್ಠಿತ ಎರಡು ಕುಟುಂಬಗಳ ಕಾದಾಟವೂ ಆಗಿದ್ದು, ಎರಡು ಕುಟುಂಬಗಳು ಸುಮಾರು ನಾಲ್ಕೈದು ದಶಕಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವುದು ವಿಶೇಷವಾಗಿದೆ. ಈ ಎರಡು ಕುಟುಂಬಗಳ ನಡುವೆ ಪೈಪೋಟಿ ಏರ್ಪಡುತ್ತಾ ಬಂದಿದ್ದು ಅಧಿಕಾರವನ್ನು ಎರಡು ಕುಟುಂಬಗಳು ಹಂಚಿಕೊಂಡಿರುವುದನ್ನು ಕಾಣಬಹುದಾಗಿದೆ.

ಹಾಗಾದರೆ ಈ ಎರಡು ಕುಟುಂಬಗಳ ಬಗ್ಗೆ ಕುತೂಹಲ ಮೂಡುವುದು ಸಹಜ. ಆ ಎರಡು ಕುಟುಂಬಗಳು ಯಾವುವು ಎಂದರೆ ಹಾಲಿ ಶಾಸಕ ಮತ್ತು ಮುಂದಿನ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಆಗಿರುವ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡರ ಕುಟುಂಬವಾಗಿದೆ. ಇದೆರಡು ಕುಟುಂಬಗಳ ನಡುವೆ ಯಾವ ರೀತಿಯ ರಾಜಕೀಯ ಹಗ್ಗಜಗ್ಗಾಟವಿತ್ತು ಎಂಬುದನ್ನು ನೋಡಬೇಕಾದರೆ ರಾಜಕೀಯ ಇತಿಹಾಸದ ಪುಟಗಳನ್ನು ನಾವು ತಿರುವಿ ಹಾಕಬೇಕಾಗುತ್ತದೆ.
ಜೆಡಿಎಸ್ ತೊರೆದು ಕೈ ಹಿಡಿದ ರಮೇಶ್ ಬಾಬು
ದಿವಂಗತ ಎ.ಬಿ.ಬಂಡಿಸಿದ್ದೇಗೌಡ ಅವರು ಎರಡು ಬಾರಿ ಶಾಸಕರಾಗಿ ಉಗ್ರಾಣ ಸಚಿವರಾಗಿ ಕಾರ್ಯನಿರ್ವಹಿದ್ದರು. ಅವರ ಅಕಾಲಿಕ ನಿಧನದ ಬಳಿಕ ಉಪಚುನಾವಣೆ ನಡೆದಾಗ ಅವರ ಪತ್ನಿ ವಿಜಯಲಕ್ಷ್ನಿ ಬಂಡಿಸಿದ್ದೇಗೌಡರು ರಾಜಕೀಯಕ್ಕೆ ಎಂಟ್ರಿ ಕೊಡುವುದರೊಂದಿಗೆ ಗೆಲುವು ಸಾಧಿಸಿದ್ದರು. ಆ ನಂತರ ಮೂರು ಬಾರಿ ಶಾಸಕಿಯಾದ ಅವರು ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದರು.

ಇವರ ಪುತ್ರರಾಗಿರುವ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡರು ಈ ಹಿಂದೆ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು. ಆದರೆ ಬದಲಾದ ರಾಜಕೀಯದಲ್ಲಿ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು ಈಗ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಪ್ರತಿನಿಧಿಸಿಕೊಂಡು ಬರುತ್ತಿದ್ದಾರೆ.
ಜನತಾ ಪರಿವಾರದಲ್ಲಿದ್ದ ಕುಟುಂಬ
ಈ ಕುಟುಂಬದ ರಾಜಕೀಯ ಚರಿತ್ರೆಯನ್ನು ನೋಡಿದ್ದೇ ಎ.ಎಸ್ ಬಂಡಿಸಿದ್ದೇಗೌಡ ಅವರು 1983ರಲ್ಲಿ ಕ್ರಾಂತಿರಂಗ ಮತ್ತು 1985ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. 1986ರಲ್ಲಿ ಅವರು ಅಕಾಲಿಕವಾಗಿ ನಿಧನರಾದಾಗ ಅವರ ಪತ್ನಿ ವಿಜಯಲಕ್ಷ್ಮಿ ಅವರು ಉಪಚುನಾವಣೆಯಲ್ಲಿ ಜನತಾ ಪಕ್ಷದಿಂದಲೇ ಗೆಲುವು ಕಂಡರು.
ನಂತರ 1989ರಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್‌ನ ದಮಯಂತಿ ಬೋರೇಗೌಡರ ಮುಂದೆ ಸೋಲು ಕಂಡರು. ಇದಾದ ಬಳಿಕ 1994ರಲ್ಲಿ ಚುನಾವಣೆ ನಡೆದಾಗ ಮತ್ತೆ ಜನತಾದಳದಿಂದ ಸ್ಪರ್ಧಿಸಿದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಗೆಲುವು ಕಂಡರು. 1999ರಲ್ಲಿ ಕಾಂಗ್ರೆಸ್ ಮುಂದೆ ಸೋಲು ಕಂಡರೂ ಆ ನಂತರ ಜನತಾದಳ ಇಬ್ಬಾಗವಾದಾಗ ಜೆಡಿಎಸ್ ನಿಂದ ಸ್ಪರ್ಧಿಸಿದ ಅವರು 2004ರಲ್ಲಿ ಗೆಲುವು ಕಂಡರು.
ಇದಾದ ನಂತರ ಅವರ ಪುತ್ರ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಚುನಾವಣಾ ಕಣಕ್ಕಿಳಿದು 2008ರಲ್ಲಿ ಗೆಲುವಿನ ನಗೆ ಬೀರಿದರು. ಮುಂದೆ 2013ರಲ್ಲೂ ಗೆಲುವು ಕಂಡರು. 2018ರವರೆಗೆ ಜೆಡಿಎಸ್ ನಲ್ಲಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು 2018ರ ವೇಳೆಗೆ ಜೆಡಿಎಸ್ ತೊರೆದು ಕಾಂಗ್ರೆಸ್ ನತ್ತ ವಾಲಿದ್ದರು. ಅಲ್ಲದೆ ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಸೋಲು ಕಂಡರು.
ಕೈ ಬಿಟ್ಟು ಜೆಡಿಎಸ್ ನತ್ತ ರವೀಂದ್ರ ಶ್ರೀಕಂಠಯ್ಯ
ಇನ್ನು ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಗ್ಗೆ ಹೇಳುವುದಾದರೆ ಅವರ ತಾತ ಚುಂಚೇಗೌಡರು 1957ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಪುತ್ರ ಶ್ರೀಕಂಠಯ್ಯ ತಂದೆ ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿದ್ದರೂ ಗೆಲುವು ಸಾಧ್ಯವಾಗಿರಲಿಲ್ಲ. ಬಳಿಕ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗಿಳಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಅವರ ಪತ್ನಿ ಪಾರ್ವತಿ ಶ್ರೀಕಂಠಯ್ಯ ಅವರು 1999ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇವರ ಪುತ್ರರೇ ರವೀಂದ್ರ ಶ್ರೀಕಂಠಯ್ಯರಾಗಿದ್ದಾರೆ.
2018ರವರೆಗೆ ಜೆಡಿಎಸ್ ನಲ್ಲಿದ್ದು ಎರಡು ಬಾರಿ ಗೆಲುವು ಸಾಧಿಸಿ ಮೂರನೇ ಬಾರಿಯೂ ಗೆಲುವಿನ ಹಾದಿಯಲ್ಲಿದ್ದ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಬದಲಾದ ರಾಜಕೀಯ ಕಾರಣಗಳಿಂದ ಕಾಂಗ್ರೆಸ್‌ಗೆ ಮುಖಮಾಡಿ ಅಲ್ಲಿಂದ 2018ರ ಸ್ಪರ್ಧೆಗೆ ಟಿಕೆಟ್ ಪಡೆದಿದ್ದರು. ಇದೇ ವೇಳೆ ಕಾಂಗ್ರೆಸ್ ನಲ್ಲಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು ಸದ್ಯ ಶಾಸಕರಾಗಿರುವ ಅವರು ಮುಂದಿನ ಬಾರಿಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ.
ಮತದಾರರ ಒಲವು ಯಾರತ್ತ ?
ಕಾಂಗ್ರೆಸ್ ಮತ್ತು ಬಿಜೆಪಿ ಕ್ಷೇತ್ರದಲ್ಲಿ ಅಧಿಕೃತವಾಗಿ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಕಾಂಗ್ರೆಸ್ ನಿಂದ ರಮೇಶ್ ಬಾಬು ಅವರಿಗೆ ಬಿಜೆಪಿಯಿಂದ ಇಂಡುವಾಳು ಸಚ್ಚಿದಾನಂದ ಎಂದು ಹೇಳಲಾಗುತ್ತಿದೆ. ಇವರ ನಡುವೆ ರೈತಸಂಘವೂ ಎಂಟ್ರಿಕೊಟ್ಟಿದೆ.
ರೈತ ಸಂಘದಲ್ಲಿ ಹೋರಾಟದ ಮೂಲಕ ಗುರುತಿಸಿಕೊಂಡಿದ್ದ ಕಿರಂಗೂರು ಪಾಪು (ಮೋಹನ್ ಕುಮಾರ್) ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಚ್ಛೆ ತೋರುತ್ತಿದ್ದಾರೆ. ಒಟ್ಟಾರೆ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಈ ಬಾರಿಯ ರಾಜಕೀಯ ಜಿದ್ದಾಜಿದ್ದಿನಲ್ಲಿ ಯಾರತ್ತ ಮತದಾರರು ಒಲವು ತೋರುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ.











Click it and Unblock the Notifications