ಸಕ್ಕರೆ ನಾಡಿನಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದ ಕಮಲದಿಂದ ಸಂಚಲನ ಸೃಷ್ಟಿ
ಮಂಡ್ಯ, ನವೆಂಬರ್ 25 : ಮಂಡ್ಯ ಜಿಲ್ಲೆಯೊಳಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಗಟ್ಟಿ ನೆಲೆ ಕಂಡುಕೊಳ್ಳುವತ್ತ ದಾಪುಗಾಲಿಟ್ಟಿದೆ. ಕೆ. ಆರ್. ಪೇಟೆ ಉಪ ಚುನಾವಣೆ ಬಳಿಕ ಕಮಲ ಪಾಳಯದೊಳಗೆ ಹೊಸ ಸಂಚಲನ ಸೃಷ್ಟಿಯಾಗಿದ್ದು ಬದಲಾವಣೆಯ ಗಾಳಿ ಬೀಸಿದೆ. ಬಿಜೆಪಿಯಿಂದ ಟಿಕೆಟ್ ಬಯಸಿ ಕಣಕ್ಕಿಳಿಯಲು ಆಕಾಂಕ್ಷಿಗಳು ಹೆಚ್ಚಿನ ಉತ್ಸಾಹ ತೋರುತ್ತಿರುವುದು ಅಚ್ಚರಿ ಮೂಡಿಸಿದೆ.
ಜಿಲ್ಲೆಯಲ್ಲಿ ನಾಗಮಂಗಲ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳ ಪೈಪೋಟಿ ಇಲ್ಲದಿದ್ದರೂ, ಹೊಸ ಮುಖ ಫೈಟರ್ ರವಿ ಅವರು ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಆದರೆ ಉಳಿದ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಎದುರಾಳಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲಿದೆ. ಇನ್ನೂ ನಾಗಮಂಗಲದಲ್ಲೂ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಜಿಲ್ಲಾಧ್ಯಕ್ಷ ಸಿ. ಪಿ. ಉಮೇಶ್, ಚಂದಗಾಲು ಶಿವಣ್ಣ, ಡಾ.ಲಕ್ಷ್ಮೀ ಅಶ್ವಿನ್‌ಗೌಡ, ಹೆಚ್.ಆರ್.ಅರವಿಂದ್, ಅಶೋಕ್ ಜಯರಾಂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸಿ. ಪಿ. ಉಮೇಶ್ ಬ್ಯಾಂಕ್‌ನ್ನು ಲಾಭದತ್ತ ಮುನ್ನಡೆಸಿದ್ದಾರೆ. ಪಕ್ಷ ಸಂಘಟನೆಯಲ್ಲೂ ಚುರುಕಿನಿಂದ ತೊಡಗಿಸಿಕೊಂಡಿದ್ದಾರೆ. ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ್, ಎಸ್. ಟಿ. ಸೋಮಶೇಖರ್ ಸೇರಿದಂತೆ ಪ್ರಭಾವಿ ನಾಯಕರೊಂದಿಗೆ ಉತ್ತಮ ವಿಶ್ವಾಸ, ಒಡನಾಟವಿಟ್ಟುಕೊಂಡು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ಸಜ್ಜಾಗುತ್ತಿದ್ದಾರೆ.

ಚಂದಗಾಲ ಶಿವಣ್ಣ, ಅಶ್ವಿನಿಗೌಡ ಸೇರಿ ಹಲವರಿಂದ ಪೈಪೋಟಿ
2018ರ ಚುನಾವಣೆಯಲ್ಲಿ ಚಂದಗಾಲು ಶಿವಣ್ಣ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 32,064 ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದರು. ಆ ಸಮಯದಲ್ಲಿ ಡಾ. ಸದಾನಂದ, ಎಸ್. ಸಿ. ಮಧುಚಂದನ್, ಹೆಚ್. ಆರ್. ಅರವಿಂದ್ ಸೇರಿದಂತೆ ಬಿಜೆಪಿಯ ಪ್ರಮುಖರು ಶಿವಣ್ಣ ಪರ ನಿಂತು ಶ್ರಮಿಸಿದ್ದರು. ಬಿಜೆಪಿಯಿಂದ ಕಣಕ್ಕಿಳಿಯುತ್ತಿದ್ದವರಲ್ಲಿ ಠೇವಣಿ ಕಳೆದುಕೊಳ್ಳುವವರೇ ಇರುವಾಗ ಶಿವಣ್ಣ ಪಡೆದ ಮತಗಳು ಹೊಸ ಭರವಸೆಯನ್ನು ಮೂಡಿಸಿದ್ದವು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾಗಿದ್ದ ಐಆರ್‌ಎಸ್ ಅಧಿಕಾರಿ ಡಾ. ಲಕ್ಷ್ಮೀ ಅಶ್ವಿನ್‌ಗೌಡ ಈಗ ಬಿಜೆಪಿ ಸೇರಿದ್ದಾರೆ. ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಯಲು ಒಲವು ವ್ಯಕ್ತಪಡಿಸಿದ್ದಾರೆ. ಉದ್ಯೋಗಮೇಳಗಳನ್ನು ಆಯೋಜಿಸಿ ಯುವಕರ ಗಮನಸೆಳೆದಿದ್ದು, ಕ್ಷೇತ್ರದ ಹಲವು ನಾಯಕರ ಮನೆಗಳಿಗೆ ತೆರಳಿ ಬೆಂಬಲ ಕೋರಿದ್ದಾರೆ. ಚುನಾವಣಾ ಪೂರ್ವ ಸಿದ್ಧತೆಗಳ ತಯಾರಿಯಲ್ಲಿ ತೊಡಗಿದ್ದಾರೆ.
ಬಿಜೆಪಿ ನಗರ ಘಟಕ ಮಾಜಿ ಅಧ್ಯಕ್ಷರಾಗಿರುವ ಹೆಚ್. ಆರ್. ಅರವಿಂದ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ಅವರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಸಿಗುವ ನಿರೀಕ್ಷೆಗಳಿದ್ದವು. ಕಳೆದ ನಗರಸಭಾ ಚುನಾವಣೆಯಲ್ಲೂ ಬಿಜೆಪಿ ಪಕ್ಷದಿಂದ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಬಿಜೆಪಿ ಶಕ್ತಿ ಪ್ರದರ್ಶಿಸಿದ್ದರು. ಹಲವಾರು ಬಿಜೆಪಿ ಪ್ರಮುಖ ನಾಯಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಪಕ್ಷವನ್ನು ಮುನ್ನಡೆಸುತ್ತಾ ಟಿಕೆಟ್ ನಿರೀಕ್ಷೆಯೊಂದಿಗೆ ಶ್ರಮಿಸುತ್ತಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಅವರು ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಾ, ಚಿಕ್ಕಮಂಡ್ಯ-ಕೆಹೆಚ್‌ಬಿ ಬಡಾವಣೆಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವುದರೊಂದಿಗೆ ಜನವಿಶ್ವಾಸ ಗಳಿಸುವ ಪ್ರಯತ್ನದಲ್ಲಿ ಮುನ್ನಡೆದಿದ್ದಾರೆ.

ಮದ್ದೂರಿನಿಂದ ಎಸ್‌ಪಿ ಸ್ವಾಮಿಗೆ ಟಿಕೆಟ್ ಸಾಧ್ಯತೆ
ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಎಸ್. ಪಿ. ಸ್ವಾಮಿ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ ಎಸ್. ಪಿ. ಸ್ವಾಮಿ ಅವರು ಕಳೆದ ಮನ್‌ಮುಲ್ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಕಳೆದ 17 ವರ್ಷಗಳಿಂದ ಶ್ರೀನಿ ಪ್ರತಿಷ್ಠಾನದ ಹೆಸರಿನಲ್ಲಿ ಆರೋಗ್ಯ ಮೇಳ, ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, ಸಂಕಷ್ಟದಲ್ಲಿರುವವರಿಗೆ ಆರ್ಥಿಕ ನೆರವು, ಕೊರೊನಾ ಸಮಯದಲ್ಲಿ ಆಹಾರ ಕಿಟ್ ವಿತರಣೆ, ಬಡವರಿಗೆ ಕಂಬಳಿ ವಿತರಣೆಯಂತಹ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಮದ್ದೂರು ಕ್ಷೇತ್ರದಲ್ಲಿ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಟಿಕೆಟ್‌ಗೆ ತೀವ್ರ ಪ್ರಯತ್ನ ನಡೆಸಿದ್ದಾರೆ. ಬಿಜೆಪಿಯ ಪ್ರಮುಖ ನಾಯಕರೂ ಕೂಡ ಎಸ್. ಪಿ. ಸ್ವಾಮಿ ಬಿಜೆಪಿ ಅಭ್ಯರ್ಥಿಯಾಗಲಿದ್ದು, ಎಲ್ಲರೂ ಅವರನ್ನು ಬೆಂಬಲಿಸುವಂತೆ ತಿಳಿಸಿರುವುದರಿಂದ ಎಸ್. ಪಿ. ಸ್ವಾಮಿ ಅವರಿಗೆ ಟಿಕೆಟ್ ಅಂತಿಮಗೊಳ್ಳುವ ಸಾಧ್ಯತೆಗಳಿವೆ.

ಡಾ. ಇಂದ್ರೇಶ್‌ಗೆ ಮೇಲುಕೋಟೆ ಟಿಕೆಟ್
ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಡಾ.ಇಂದ್ರೇಶ್ ಬಿಜೆಪಿ ಅಭ್ಯರ್ಥಿಯಾಗುವುದಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಪರಿವರ್ತನಾ ಟ್ರಸ್ಟ್ ಹೆಸರಿನಲ್ಲಿ ಕಳೆದ ಮೂರು ವರ್ಷದಿಂದ ದೇವಸ್ಥಾನಗಳ ಜೀರ್ಣೋದ್ಧಾರ, ಕೊರೊನಾದಿಂದ ಮೃತಪಟ್ಟವರಿಗೆ ಆರ್ಥಿಕ ನೆರವು, ಸಂಕಷ್ಟದಲ್ಲಿರುವ ಬಡವರಿಗೆ ಔಷಧಗಳ ವಿತರಣೆ, ಆರೋಗ್ಯ ಮೇಳ, ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ, ಗ್ರಾಮಗಳಿಗೆ ಹೈಮಾಸ್ಕ್ ದೀಪ ಸೇರಿದಂತೆ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಮೆಚ್ಚುಗೆಗೆ ಗಳಿಸಲು ಶ್ರಮಿಸುತ್ತಿದ್ದಾರೆ. ಕ್ಷೇತ್ರದೊಳಗೆ ಬಿಜೆಪಿಯ ಹೊಸ ಭರವಸೆಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇವರ ಕಾರ್ಯವನ್ನು ಶ್ಲಾಘಿಸಿ ಬೆನ್ನುತಟ್ಟಿದ್ದು, ಸಚಿವರಾದ ಡಾ. ಸಿ. ಎನ್. ಅಶ್ವಥನಾರಾಯಣ, ಕೆ. ಸಿ. ನಾರಾಯಣಗೌಡ, ಕೆ. ಗೋಪಾಲಯ್ಯ, ಹಾಸನ ಶಾಸಕ ಪ್ರೀತಂಗೌಡ ಸಂಪರ್ಕದಲ್ಲಿದ್ದುಕೊಂಡು ಮೇಲುಕೋಟೆ ಕ್ಷೇತ್ರದಿಂದ ಕಣಕ್ಕಿಳಿಯುವುದಕ್ಕೆ ರೆಡಿಯಾಗುತ್ತಿದ್ದಾರೆ.

ಶ್ರೀರಂಗಪಟ್ಟಣಕ್ಕೆ ಇಬ್ಬರಿಂದ ಪೈಪೋಟಿ
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಎಸ್. ಸಚ್ಚಿದಾನಂದ, ಕೆ. ಎಸ್. ನಂಜುಂಡೇಗೌಡ ಅಭ್ಯರ್ಥಿಗಳಾಗಲು ಪೈಪೋಟಿ ನಡೆಸುತ್ತಿದ್ದಾರೆ. ಸಂಸದೆ ಸುಮಲತಾ ಆಪ್ತರಾಗಿರುವ ಎಸ್. ಸಚ್ಚಿದಾನಂದ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ತಮ್ಮ ತಂದೆ ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಕ್ಷೇತ್ರದೊಳಗೆ ಬಡ ಕುಟುಂಬದಲ್ಲಿ ಸಾವನ್ನಪ್ಪಿದವರಿಗೆ ಆರ್ಥಿಕ ನೆರವು, ಋತುಮತಿಯಾದ ಹೆಣ್ಣು ಮಕ್ಕಳಿಗೆ ಪೌಷ್ಠಿಕ ಆಹಾರ, ಶಾಲೆಗಳಿಗೆ ಪ್ರೊಜೆಕ್ಟರ್, ಟಿವಿ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೆರವು ನೀಡುತ್ತಾ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ.
ಯುವ ನಾಯಕರಾಗಿ ಬೆಳವಣಿಗೆ ಸಾಧಿಸುತ್ತಿರುವ ಅವರು ಇತ್ತೀಚೆಗೆ ಶ್ರೀರಂಗಪಟ್ಟಣದಲ್ಲಿ ಕನ್ನಡ ಹಬ್ಬ ಆಯೋಜಿಸಿ ನಟ ದರ್ಶನ್, ಸಂಸದೆ ಸುಮಲತಾ, ನಟ ಅಭಿಷೇಕ್ ಅಂಬರೀಶ್ ಅವರನ್ನು ಕರೆಸಿ ದೊಡ್ಡಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು. ಕಾಂಗ್ರೆಸ್‌ನಿಂದ ಕಳೆದ ಬಾರಿ ಟಿಕೆಟ್ ಬಯಸಿದ್ದ ಎಸ್. ಸಚ್ಚಿದಾನಂದ ಅವರು ರಮೇಶ್ ಬಂಡಿಸಿದ್ದೇಗೌಡರ ಸೇರ್ಪಡೆಯಿಂದ ಕೈತಪ್ಪಿತ್ತು. ಈಗ ಸುಮಲತಾ ಬೆಂಬಲದೊಂದಿಗೆ ಬಿಜೆಪಿ ಟಿಕೆಟ್ ಪಡೆಯುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ.
ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿರುವ ಕೆ. ಎಸ್. ನಂಜುಂಡೇಗೌಡ ಅವರು ಮತ್ತೊಬ್ಬ ಆಕಾಂಕ್ಷಿಯಾಗಿದ್ದು, ಈಗಾಗಲೇ ರೈತಸಂಘದಿಂದ ಹಲವಾರು ಚುನಾವಣೆಗಳನ್ನು ಎದುರಿಸಿರುವ ನಂಜುಂಡೇಗೌಡರು ಗೆಲುವಿನ ದಡ ತಲುಪಲು ಸಾಧ್ಯವಾಗಿಲ್ಲ. ಇದೀಗ 2023ರ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದು, ವರಿಷ್ಠ ನಾಯಕರೊಂದಿಗೆ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ.

ಮಳವಳ್ಳಿಯಿಂದ ಇಬ್ಬರ ಪ್ರಯತ್ನ
ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಜಿ.ಮುನಿರಾಜು ಅವರು ಬಿಜೆಪಿಯಿಂದ ಕಣಕ್ಕಿಳಿಯುವುದಕ್ಕೆ ಸಜ್ಜಾಗಿದ್ದಾರೆ. 2013ರಲ್ಲಿ ಕೆಜೆಪಿ ಪಕ್ಷದಿಂದ ಅಖಾಡ ಪ್ರವೇಶಿಸಿದ್ದ ಜಿ.ಮುನಿರಾಜು 26,500 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 2018ರ ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಬಿ.ಸೋಮಶೇಖರ್ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಅವರಿಗೆ ಟಿಕೆಟ್ ನೀಡಿದ್ದರಿಂದ ಮುನಿರಾಜು ಅವಕಾಶ ವಂಚಿತರಾಗಿದ್ದರು. ಆ ಸಮಯದಿಂದಲೂ ಕ್ಷೇತ್ರದೊಳಗೆ ಸದ್ದಿಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಚಾರಕ್ಕೆ ಬಾರದೆ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಅವರ ಸಂಪರ್ಕದಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.
ಬಿಜೆಪಿ ಪ್ರಭಾವಿ ನಾಯಕರ ಸಂಪರ್ಕದಲ್ಲಿರುವ ಮುನಿರಾಜು ಅವರು ಈ ಬಾರಿ ಟಿಕೆಟ್ ಪಡೆಯುವುದಕ್ಕೆ ತೀವ್ರ ಹೋರಾಟ ನಡೆಸುತ್ತಿದ್ದಾರೆ. ಟಿಕೆಟ್ ಪಡೆದುಕೊಂಡು ಜೆಡಿಎಸ್-ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವುದಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸಚಿವ ಬಿ.ಸೋಮಶೇಖರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಪಕ್ಷದೊಳಗೆ ಸಕ್ರಿಯವಾಗಿದ್ದರೂ ಚುನಾವಣಾ ಕಾರ್ಯಚಟುವಟಿಕೆಗಳಿಂದ ದೂರವೇ ಉಳಿದಿದ್ದಾರೆ.

4ನೇ ಬಾರಿ ಗೆಲುವಿನತ್ತಾ ನಾರಾಯಣಗೌಡ
ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಸಚಿವ ಕೆ. ಸಿ. ನಾರಾಯಣಗೌಡ ಅವರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. ಅವರನ್ನು ಹೊರತುಪಡಿಸಿದಂತೆ ಬೇರೆ ಯಾರೂ ಟಿಕೆಟ್ ಪೈಪೋಟಿ ನಡೆಸದಿರುವುದು ಕಂಡುಬಂದಿದೆ. ಸಚಿವರಾಗಿ ಕೆ. ಸಿ. ನಾರಾಯಣಗೌಡರು ಸಾವಿರಾರು ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿಪಡಿಸಿರುವುದಾಗಿ ಹೇಳುತ್ತಿದ್ದು, ಮತ್ತೆ ಕಣಕ್ಕಿಳಿಯುವುದಕ್ಕೆ ರೆಡಿಯಾಗುತ್ತಿದ್ದಾರೆ. ಈಗಾಗಲೇ 2013, 2018ರಲ್ಲಿ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ 2019ರಲ್ಲಿ ಬಿಜೆಪಿ ಸೇರುವುದರೊಂದಿಗೆ ಉಪಚುನಾವಣೆಯಲ್ಲಿ ದಿಗ್ವಿಜಯ ಸಾಸಿ ಹ್ಯಾಟ್ರಿಕ್ ಗೆಲುವಿನೊಂದಿಗೆ ದಾಖಲೆ ನಿರ್ಮಿಸಿರುವ ಕೆ. ಸಿ. ನಾರಾಯಣಗೌಡರು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳೇ ಇಲ್ಲ
ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಯಾರೊಬ್ಬರೂ ಮುಂದಾಗಿಲ್ಲ. ಆ ಕ್ಷೇತ್ರದಿಂದ ಟಿಕೆಟ್‌ಗೆ ಯಾವುದೇ ಪೈಪೋಟಿ ಕಮಲ ಪಾಳಯದಿಂದ ಕಂಡುಬರದಿರುವುದು ವಿಶೇಷವಾಗಿದೆ. ಈ ಮಧ್ಯೆ ಫೈಟರ್ ರವಿ ಅವರು ಬಿಜೆಪಿ ಪಕ್ಷ ಸೇರ್ಪಡೆಗೊಂಡು ಆ ಪಕ್ಷದಿಂದಲೇ ಸ್ಪರ್ಧಿಸಲು ಚಿಂತನೆ ನಡೆಸಿದ್ದು, ಈಗಾಗಲೇ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಪೈಟರ್ ರವಿ ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿಪಡುವಂತಿಲ್ಲ.












Click it and Unblock the Notifications