ಫಲಿತಾಂಶಕ್ಕೆ ಮುನ್ನವೇ ನಿಖಿಲ್ ಕುಮಾರಸ್ವಾಮಿಗೆ ಸಂಸದನ ಪಟ್ಟ
ಮಂಡ್ಯ, ಮೇ 22: ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಹೈವೋಲ್ಟೇಜ್ ಕ್ಷೇತ್ರವೆಂದೇ ಹೆಸರಾದ ಮಂಡ್ಯದಲ್ಲಿ ಈ ಬಾರಿ ಜಿದ್ದಾಜಿದ್ದಿನ ಗುದ್ದಾಟ ನಡೆದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್, ಅಂಬರೀಶ್ ಪತ್ನಿ ಸುಮಲತಾ ಎದುರಾಳಿಗಳಾಗಿ ಸ್ಫರ್ಧಿಸಿದ್ದರು. ಇವರಿಬ್ಬರಲ್ಲಿ ನಾಳೆ ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಬಹುದೆಂಬ ಕಾತುರತೆಯೂ ಹೆಚ್ಚಾಗಿದೆ. ಈ ನಡುವೆ ಮದುವೆ ಆಮಂತ್ರಣದ ಪೋಸ್ಟ್ ಒಂದು ಭಾರಿ ವೈರಲ್ ಆಗಿದೆ.
ಜೆಡಿಎಸ್ ಮುಖಂಡರೊಬ್ಬರ ಮಗನ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸಂಸದ ಎಂದು ಮುದ್ರಿಸಲಾಗಿದೆ. ಜೂನ್ 6ರಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಟಿಎಪಿಎಸಿಎಂ ಕಲ್ಯಾಣ ಮಂಟಪದಲ್ಲಿ ನಡೆಯುವ ಅಶೋಕ್ ಕುಮಾರ್ ಹಾಗೂ ಅಭಿಲಾಷಾ ಎಂಬುವರ ವಿವಾಹದ ಆಹ್ವಾನ ಪತ್ರಿಕೆಯಲ್ಲಿ ನಿಖಿಲ್ ಫೋಟೊ ಮುದ್ರಿಸಿ ಸಂಸದರೆಂದು ಹಾಕಲಾಗಿದೆ. ಜೆಡಿಎಸ್ ಮುಖಂಡ ನಾಗರಾಜು ಎಂಬುವವರ ಮಗನ ಮದುವೆ ಇದಾಗಿದ್ದು, ವಿಶೇಷ ಆಹ್ವಾನಿತರ ಸ್ಥಾನದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಯುವ ಸಾರಥಿ, ಮಂಡ್ಯ ಸಂಸದರೆಂದು ನಮೂದಿಸಲಾಗಿದೆ.

ಈ ಹಿಂದೆ ಚುನಾವಣೆ ಮುಗಿದ ವೇಳೆಯಲ್ಲಿ, ನಿಖಿಲ್ ಕುಮಾರಸ್ವಾಮಿ ಮಂಡ್ಯ ಸಂಸದರು ಎಂಬ ನಾಮಫಲಕವನ್ನು ಉಡುಗೊರೆ ನೀಡಲಾಗಿತ್ತು.












Click it and Unblock the Notifications