ಮಂಡ್ಯ; ಜೆಡಿಎಸ್ ಭದ್ರಕೋಟೆಯಲ್ಲೀಗ ರಾಜಕೀಯ ಬಿರುಗಾಳಿ!
ಮಂಡ್ಯ, ಫೆಬ್ರವರಿ 02; ತಳಮಟ್ಟದಿಂದಲೇ ಸಂಘಟನೆಗೊಂಡು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಸಾಧಿಸುವುದರೊಂದಿಗೆ ಭದ್ರಕೋಟೆಯನ್ನು ಕಟ್ಟಿದ್ದ ಜೆಡಿಎಸ್ ಪಕ್ಷದಲ್ಲೀಗ ತಲ್ಲಣ ಶುರುವಾಗಿದೆ.
2019ರ ಲೋಕಸಭಾ ಚುನಾವಣೆ ನಂತರ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯವಾಗಿ ಒಂದಷ್ಟು ಬದಲಾವಣೆಗಳು ಕಾಣಿಸಲು ಆರಂಭಿಸಿದೆ. ಜೆಡಿಎಸ್‌ನ ಕೆಲವು ಹಿರಿಯ ನಾಯಕರ ತಪ್ಪು ನಿರ್ಧಾರಗಳಿಂದಾಗಿ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಒಲವು ತೋರುವಂತೆ ಮಾಡಿದೆ.
ಲೋಕಸಭಾ ಚುನಾವಣೆ ನಡೆಯುವಾಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇತ್ತು. ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಹೀಗಾಗಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲದಿಂದ ಸುಲಭವಾಗಿ ಗೆಲ್ಲಿಸಿಕೊಂಡು ಬರಬಹುದು ಎಂಬ ತಪ್ಪು ನಿರ್ಧಾರ ಮಾಡಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಸುಮಲತಾ ಅಂಬರೀಶ್ ಎದುರಾಳಿಯಾಗಿಸಿಕೊಂಡು ಜೆಡಿಎಸ್ ನಾಯಕರು ಮನಬಂದಂತೆ ಮಾತನಾಡಿದ್ದು, ಜನರಲ್ಲಿ ಬೇಸರ ಮೂಡಿಸಿತು.
ಹೀಗಾಗಿ ಜೆಡಿಎಸ್ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು ಸುಮಲತಾ ಬೆಂಬಲಿಸಿದರು. ಪರಿಣಾಮ ಜೆಡಿಎಸ್ ಸೋಲು ಕಂಡಿತ್ತು. ಅದಕ್ಕೂ ಹಿಂದೆ ಎಲ್. ಆರ್. ಶಿವರಾಮೇಗೌಡರು ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ ಅವರಿಗೆ ಟಿಕೆಟ್ ನೀಡದೆ ನಿಖಿಲ್ ಕುಮಾರಸ್ವಾಮಿ ಕರೆತಂದು ಕಣಕ್ಕಿಳಿಸಿದ್ದು, ಮೊದಲೇ ಕುಟುಂಬ ರಾಜಕಾರಣದ ಬಗ್ಗೆ ಎದ್ದಿದ್ದ ಅಸಮಾಧಾನಗಳಿಗೆ ತುಪ್ಪ ಸುರಿದಂತಾಗಿತ್ತು.

ಹೆಚ್ಡಿಕೆಗೆ ನಂಬಿದವರು ಮೋಸ ಮಾಡಿದ್ದರು!
ಎಚ್. ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ ಮಂಡ್ಯಕ್ಕೆ ಒಂದಷ್ಟು ಘೋಷಣೆಗಳನ್ನು ಮಾಡುವ ಮೂಲಕ ಗಮನಸೆಳೆದಿದ್ದರು. ಅಷ್ಟೇ ಅಲ್ಲದೇ ಸದಾ ಮಂಡ್ಯದಲ್ಲಿಯೇ ಕಾಣಿಸಿಕೊಂಡಿದ್ದರು. ಇಡೀ ಜಿಲ್ಲೆಯಲ್ಲಿ ಸಂಸದರು, ಶಾಸಕರು ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಪ್ರತಿನಿಧಿಗಳೇ ತುಂಬಿದ್ದರು. ಹೀಗಾಗಿ ಮಂಡ್ಯದ ಬಗ್ಗೆ ಜೆಡಿಎಸ್‍ನ ನಾಯಕರಿಗೆ ಅಪಾರವಾದ ಪ್ರೀತಿಯಿತ್ತು.
ಯಾವಾಗ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಿ ಸೋಲು ಕಂಡರೋ ಆ ನಂತರದ ಕುಮಾರಸ್ವಾಮಿಗೆ ಮಂಡ್ಯದ ಕಡೆಗಿದ್ದ ಒಲವು ತುಸು ಕಡಿಮೆಯಾಯಿತು ಎಂದರೆ ತಪ್ಪಾಗಲಾರದು. ತಾವು ನಂಬಿದ್ದವರು ಮೋಸ ಮಾಡಿಬಿಟ್ಟರು ಎಂಬ ನೋವು ಕಾಡಲಾರಂಭಿಸಿತು. ಅದಾದ ನಂತರ ರಾಜಕೀಯ ಬೆಳವಣಿಗೆಯಲ್ಲಿ ತಾವು ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡರು ಜತೆಗೆ ಒಂದಷ್ಟು ಶಾಸಕರು ಪಕ್ಷ ಬಿಟ್ಟರು.

ಆಘಾತ ನೀಡಿದ ಡಾ. ನಾರಾಯಣಗೌಡರು
ಜಿಲ್ಲೆಯ ಕೆ. ಆರ್. ಪೇಟೆ ಕ್ಷೇತ್ರದ ಅಂದಿನ ಶಾಸಕರಾಗಿದ್ದ ಡಾ. ನಾರಾಯಣಗೌಡರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಉಪಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಿ ಗೆಲ್ಲುವುದರೊಂದಿಗೆ ಜಿಲ್ಲೆಯಲ್ಲಿ ಬಿಜೆಪಿಯ ಖಾತೆ ತೆರೆದದ್ದು ಜೆಡಿಎಸ್‌ಗೆ ನೀಡಿದ ಮೊದಲ ಆಘಾತವಾಗಿತ್ತು. ಇದೆಲ್ಲ ಬೆಳೆವಣಿಗೆ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು, ಈ ಹಿಂದೆ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಇದು ಕೂಡ ಜೆಡಿಎಸ್‌ಗೆ ಒಂದು ರೀತಿಯಲ್ಲಿ ನೀಡಿದ ಹೊಡೆತ ಎಂದರೆ ತಪ್ಪಾಗಲಾರದು.

ಸಿ. ಎಸ್. ಪುಟ್ಟರಾಜು ಜೆಡಿಎಸ್ ಬಿಡುವ ವದಂತಿ
ಇತ್ತೀಚೆಗೆ ಜೆಡಿಎಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಜಿಲ್ಲೆಯಲ್ಲಿರುವ ಕೆಲವು ನಾಯಕರು ಬೇರೆ ಪಕ್ಷದತ್ತ ಮುಖ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಶಾಸಕ ಸಿ. ಎಸ್. ಪುಟ್ಟರಾಜು ಪಕ್ಷಬಿಡುವ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಅವರು ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕ ಸಚಿವ ಮಾಧುಸ್ವಾಮಿಯನ್ನು ಬಾಯಿತುಂಬಾ ಹೊಗಳಿರುವುದನ್ನು ನೋಡಿದರೆ ಅವರ ಮುಂದಿನ ನಿರ್ಧಾರಗಳು ಏನೆಂಬುದೇ ಗೊತ್ತಾಗುತ್ತಿಲ್ಲ. ಪುಟ್ಟರಾಜು ಪಕ್ಷ ಬಿಡುವುದಿಲ್ಲ ಎಂದು ಹೇಳುತ್ತಿದ್ದರೂ ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ ಎಂಬುದಂತು ಸತ್ಯ.

ಮುಂದೆ ಏನೆಲ್ಲಾ ಬೆಳವಣಿಗೆಯಾಗಲಿದೆಯೋ?
ಎಚ್. ಡಿ. ಕುಮಾರಸ್ವಾಮಿ ಸದ್ಯ ರಾಮನಗರ ಬಿಟ್ಟು ಮಂಡ್ಯದ ಕಡೆಗೆ ಗಮನಹರಿಸಿದಂತೆ ಕಾಣುತ್ತಿಲ್ಲ. ಇದೆಲ್ಲದರ ನಡುವೆ ಒಕ್ಕಲಿಗ ಸಮುದಾಯದ ಹಿರಿಯರೂ ಆಗಿದ್ದ ದಿವಂಗತ ಜಿ. ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತಂತೆ ಮಾಜಿ ಲೋಕಸಭಾ ಸದಸ್ಯ ಎಲ್. ಆರ್. ಶಿವರಾಮೇಗೌಡರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಇದು ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆಯಿದೆ.
2023ರ ವಿಧಾನಸಭಾ ಚುನಾವಣೆಗೆ ಕಾಲ ಹತ್ತಿರವಾಗುತ್ತಿದೆ. ರಾಜ್ಯ ರಾಜಕೀಯದಲ್ಲಿ ದಿನ ಕಳೆದಂತೆ ಹೊಸ ಬೆಳವಣಿಗೆಗಳು ಆರಂಭವಾಗುವ ಸೂಚನೆಗಳು ಗೋಚರಿಸುತ್ತಿವೆ. ಅದು ಮಂಡ್ಯದಲ್ಲಿ ಅದರಲ್ಲೂ ಜೆಡಿಎಸ್ ಪಕ್ಷದಲ್ಲಿ ಯಾವ್ಯಾವ ರೀತಿಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications