ಮಂಡ್ಯ ಲೋಕಸಭಾ ಚುನಾವಣೆ : ಇವಿಎಂ ಮೇಲೆ ಶಾಸಕರಿಗೆ ಅನುಮಾನ
ಮಂಡ್ಯ, ಜೂನ್ 02 : 'ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು ಜನರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ಹಾಕಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆದ್ದಿರುವುದು ಹೇಗೆ?' ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಪ್ರಶ್ನೆ ಮಾಡಿದ್ದಾರೆ.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು, 'ಇವಿಎಂ ಸಂಶೋಧನೆ ಮಾಡಿದ ದೇಶದಲ್ಲಿಯೇ ಅದನ್ನು ಬಳಸುವುದಿಲ್ಲ. ಇನ್ನು ನಮ್ಮ ದೇಶದಲ್ಲಿ ಯಾಕೆ?' ಎಂದು ಪ್ರಶ್ನಿಸಿದರು.

'ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆದ್ದಿರುವುದು ಹೇಗೆ?. ಇವಿಎಂಗಳ ಬಗ್ಗೆ ನಮಗೆ ನಂಬಿಕೆ ಇಲ್ಲ. ಇಬಿಎಂಗಳ ಬಗ್ಗೆ ತನಿಖೆ ನಡೆಸಬೇಕು' ಎಂದು ಸುರೇಶ್ ಗೌಡ ಹೇಳಿದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದರು.
ಸುಮಲತಾ ಅಂಬರೀಶ್ ಅವರು 703660 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ನಿಖಿಲ್ ಕುಮಾರಸ್ವಾಮಿ 577784 ಮತಗಳನ್ನು ಪಡೆದಿದ್ದರು. ಸುಮಲತಾ ಅವರು 125876 ಮತಗಳ ಅಂತರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.












Click it and Unblock the Notifications