ಸಿ.ಪಿ.ಯೋಗೇಶ್ವರ್‌ಗೆ ಮಾಜಿ ಸಚಿವ ಪುಟ್ಟರಾಜು ವಾರ್ನಿಂಗ್! ಯಾವ ಕಾರಣಕ್ಕೆ?
ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಜೆಡಿಎಸ್ ಹಾಗೂ ದೇವೇಗೌಡರ ಬಗ್ಗೆ ಇತ್ತೀಚೆಗೆ ಯೋಗೇಶ್ವರ್ ನೀಡಿರುವ ಹೇಳಿಕೆ ಬಗ್ಗೆಯೂ ಕೆಂಡವಾಗಿದ್ದು, ಯೋಗೇಶ್ವರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಗೆಲುವಿನ ಅಹಂಕಾರದಲ್ಲಿ ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡರ ಬಗ್ಗೆ ನಾಲಿಗೆ ಹರಿಬಿಡುವುದು ಒಳ್ಳೆಯದಲ್ಲ. ದೇವೇಗೌಡರನ್ನು ಮನೆಯಲ್ಲಿರಿ ಎನ್ನುವುದು, ಎಚ್.ಡಿ.ಕುಮಾರಸ್ವಾಮಿ ಅವರಿಗೆ ರಣಹೇಡಿ ಎನ್ನುವುದು ಯೋಗೇಶ್ವರ್‌ಗೆ ಶೋಭೆ ತರುವಂತದ್ದಲ್ಲ ಎಂದು ಕಿಡಿಕಾರಿದ್ದಾರೆ.

ದೇವೇಗೌಡರು ರೈತರ ಸಮಸ್ಯೆಗಳಿಗಾಗಿ ಹೋರಾಟ ನಡೆಸಿದ್ದಾರೆ. ರೈತರು ಅವರನ್ನು ಒಪ್ಪಿಕೊಂಡಿರುವುದಕ್ಕೇ ಅವರಿನ್ನೂ ಗೌಡರಾಗಿದ್ದಾರೆ. ದೇವೇಗೌಡರು ಬೀದಿಯಲ್ಲಿ ರಾಜಕಾರಣಕ್ಕಾಗಿ ಓಡಾಡಿದವರಲ್ಲ ಎಂದು ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ.
ಯೋಗೇಶ್ವರ್ ಅವರು ಎಚ್.ಡಿ.ದೇವೇಗೌಡರ ಕುಟುಂಬದ ಬಗ್ಗೆ ಈ ರೀತಿ ಮಾತನಾಡಿದರೆ, ಗೂಟದ ಕಾರು ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದಾರೆ. ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತವಿರಲಿ. ನಿಮ್ಮ ನಡೆ ಸರಿಪಡಿಸಿಕೊಳ್ಳದಿದ್ರೆ ನಿಮ್ಮ ಬಗ್ಗೆ ಡಿಕೆ ಬ್ರದರ್ಸ್ (ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್) ಮಾತನಾಡಿರುವ ರೆಕಾರ್ಡ್ ಇದೆ. ಅದನ್ನ ಬೀದಿ ಬೀದಿಗಳಲ್ಲಿ ಹಾಕಿ ಮಾನ ಮರ್ಯಾದೆ ತೆಗೆಯುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಯೋಗೇಶ್ವರ್ ಬಗ್ಗೆ ಎಲ್ಲರಿಗೂ ಗೊತ್ತು. ಎಲೆಕ್ಷನ್ ಹತ್ತಿರ ಬಂದಾಗ ರಣಹೇಡಿಯಂತೆ ಕಾಂಗ್ರೆಸ್‌ಗೆ ಫಲಾಯನ ಮಾಡಿದರು. ಚನ್ನಪಟ್ಟಣದಲ್ಲಿ ಅವರು ಗೆದ್ದಿರುವುದು ಸ್ವಾಗತಾರ್ಹ. ಆದರೆ ಅವರು ಚನ್ನಪಟ್ಟಣ ಮತದಾರರಿಗೆ ಗೌರವ ಕೊಡುವುದು ಕಲೀಬೇಕು. ಯೋಗೇಶ್ವರ್ ಈ ಹಿಂದೆ ಹಲವು ಚುನಾವಣೆಗಳಲ್ಲಿ ಸೋತಿರೋದನ್ನ ಮರೆಯಬಾರದು ಎಂದು ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಯೋಗೇಶ್ವರ್‌ಗೆ ಭವಿಷ್ಯವಿಲ್ಲ!
ಯೋಗೇಶ್ವರ್ ಎಲೆಕ್ಷನ್ ಗೆದ್ದ ಮಾತ್ರಕ್ಕೆ ಎಲ್ಲ ಸಿಕ್ಕಿದೆ ಎಂದು ಬೀಗಬಾರದು. ಕಾಂಗ್ರೆಸ್‌ನಲ್ಲಿ ದೊಡ್ಡ ನಾಯಕರಿದ್ದಾರೆ, ಅಲ್ಲಿ ನಿನಗೆ ಮಾತನಾಡೋಕೂ ಬಿಡಲ್ಲ. ಇದೆಲ್ಲ ಸ್ವಲ್ವ ದಿನದಲ್ಲೇ ತಿಳಿಯುತ್ತೆ, ಕಾದು ನೋಡು. ನಿನಗೆ ತಾಕತ್ ಇದ್ರೆ ಒಬ್ಬ ಜೆಡಿಎಸ್ ಶಾಸಕನನ್ನು ಕರ್ಕೊಂಡು ಹೋಗು ಎಂದು ಸವಾಲ್ ಹಾಕಿದ್ದಾರೆ.
ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿಲ್ಲ? ನಿಮ್ಮ ಕಾಂಗ್ರೆಸ್ ಪಕ್ಷದ ನೆಹರು ಕುಟುಂಬ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಅನ್ನಪೂರ್ಣ ಅವರ ಕುಟುಂಬ ರಾಜಕಾರಣದಲ್ಲಿ ಇಲ್ಲವೇ? ನಿಮ್ಮ ಕುಟುಂಬದವರು ರಾಜಕೀಯದಲ್ಲಿ ಇಲ್ಲವಾ? ಎಂದು ಪ್ರಶ್ನೆ ಕೇಳಿದ್ದಾರೆ.
ಕುಮಾರಸ್ವಾಮಿ ಅವರು ಒದಗಿಸಲು ರಾಮನಗರಕ್ಕೆ ನೀರು ಹರಿಸಲು ಯೋಜನೆ ಮಾಡಿದರು. ಅವರು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದರೆ ಯಾವುದೇ ಕೆರೆಗೆ ನೀವು ನೀರು ಹರಿಸಿರುವ ವಿಚಾರಕ್ಕೆ ಇಷ್ಟೆಲ್ಲ ಮಾತನಾಡುವೆ ಎಂದು ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ.
ಇನ್ನು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಬಗ್ಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಮಂಡ್ಯ ಜಿಲ್ಲೆಯ ಜೊತೆಗೆ ನಟ ಅಂಬರೀಶ್ ಅವರಿಗೆ ಅವಿನಾಭಾವ ಸಂಬಂಧವಿತ್ತು. ಈ ಕಾರಣದಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಸೋಲು ಕಾಣಬೇಕಾಯಿತು. ನಿಖಿಲ್ ಅವರನ್ನು ಮಂಡ್ಯದಲ್ಲಿ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು ಎಂದು ನೆನೆದಿದ್ದಾರೆ.












Click it and Unblock the Notifications