ಮಂಡ್ಯದಲ್ಲಿ ತನ್ನ ಹಿಡಿತ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ
ಮಂಡ್ಯ, ಮೇ 4: ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 2018ರಲ್ಲಿ ಹೊಂದಿದ್ದ ತನ್ನ ಹಿಡಿತವನ್ನು ಮತ್ತೆ ಗಟ್ಟಿಗೊಳಿಸಲು ಜೆಡಿಎಸ್ ತೀವ್ರವಾಗಿ ಕಸರತ್ತು ಮಾಡುತ್ತಿದೆ.
2018ರಲ್ಲಿ ಮಂಡ್ಯ ಲೋಕಸಭೆ ವ್ಯಾಪ್ತಿಗೆ ಬರುವ ಎಲ್ಲ ಎಂಟು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿತ್ತು. ಆದಾಗ್ಯೂ, ಬದಲಾದ ರಾಜಕೀಯ ಬೆಳವಣಿಗೆ ಮತ್ತು ಮಂಡ್ಯದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿರುವುದು ಜೆಡಿಎಸ್ ಶಾಸಕರನ್ನು ಬೆವರು ಹರಿಸುವಂತೆ ಮಾಡುತ್ತಿದೆ. 2019ರ ಉಪಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದ ಎಂಟು ಸ್ಥಾನಗಳ ಪೈಕಿ ಕೆಆರ್ ಪೇಟೆಯನ್ನು ಬಿಜೆಪಿಗೆ ಕಳೆದುಕೊಂಡಿತ್ತು. ಇದೀಗ ಕೆಆರ್‌ಪೇಟೆ ಜತೆಗೆ ಜೆಡಿಎಸ್‌ಗೆ ಸವಾಲು ಎದುರಾಗಿರುವ ಇನ್ನೂ ಕೆಲವು ಕ್ಷೇತ್ರಗಳಲ್ಲಿ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ಪಡುತ್ತಿದೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ಗೆ ಎರಡು ಸವಾಲು ಎದುರಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನಿರಾಕರಿಸಿದ ಹಿನ್ನೆಲೆ ಹಾಲಿ ಶಾಸಕ ಎಂ.ಶ್ರೀನಿವಾಸ್ ಅವರು ಮಾಜಿ ಸಂಸದ ಕೆ.ಶಂಕರೇಗೌಡ ಅವರ ಮೊಮ್ಮಗ ವಿಜಯಾನಂದ ಅವರೊಂದಿಗೆ ಸ್ವಾಭಿಮಾನಿ ಪಡೆ ರಚಿಸಿಕೊಂಡು ಬಂಡಾಯ ಸಾರಿದ್ದಾರೆ. ಸದ್ಯ ಜೆಡಿಎಸ್ ಮನ್ಮುಲ್ ಅಧ್ಯಕ್ಷ ಬಿ ಆರ್ ರಾಮಚಂದ್ರ ಅವರನ್ನು ಕಣಕ್ಕಿಳಿಸಿದೆ.
ಮೇಲುಕೋಟೆಯಲ್ಲಿ ಜೆಡಿಎಸ್ ಶಾಸಕ ಸಿ ಎಸ್ ಪುಟ್ಟರಾಜು ಅವರು ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದಾರೆ. 2018ರಲ್ಲಿ ದಿವಂಗತ ರೈತ ಮುಖಂಡ ಕೆ ಎಸ್ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಸೋಲಿನ ರುಚಿ ಕಂಡಿದ್ದರು. ಬಳಿಕ ಅಮೇರಿಕಾಗೆ ಹಿಂತಿರುಗಿದರು. ಅಲ್ಲಿ ತಮ್ಮ ಕಂಪನಿಯನ್ನು ಮಾರಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಂದರು. ದರ್ಶನ್‌ಗೆ ಬೆಂಬಲ ನೀಡಿರುವ ಕಾಂಗ್ರೆಸ್ ಅಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ನಾಗಮಂಗಲದಲ್ಲಿ ಜೆಡಿಎಸ್‌ನ ಶಾಸಕ ಸುರೇಶ್‌ಗೌಡ ಅವರು ಬಿಜೆಪಿಯ ಸುಧಾ ಶಿವರಾಮೇಗೌಡ, ಮಂಡ್ಯದ ಮಾಜಿ ಸಂಸದ ಎಲ್‌ಆರ್ ಶಿವರಾಮೇಗೌಡರ ಪತ್ನಿ ಹಾಗೂ ಕಾಂಗ್ರೆಸ್‌ನ ಎನ್ ಚಲುವರಾಯ ಸ್ವಾಮಿ ಅವರನ್ನು ಎದುರಿಸುತ್ತಿರುವ ಸನ್ನಿವೇಶವೂ ಭಿನ್ನವಾಗಿಲ್ಲ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬೆಂಬಲ ಹೊಂದಿರುವ ಬಿಜೆಪಿಯ ಇಂಡವಾಳು ಸಚ್ಚಿದಾನಂದ ವಿರುದ್ಧ ಹಾಲಿ ಶಾಸಕ ಡಾ.ರವೀಂದ್ರ ಶ್ರೀಕಂಠಯ್ಯ ಕಣಕ್ಕಿಳಿದಿರುವುದರಿಂದ ಶ್ರೀರಂಗಪಟ್ಟಣ ಜೆಡಿಎಸ್‌ಗೆ ಸುಲಭವಲ್ಲ. ಮದ್ದೂರಿನಲ್ಲಿ ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರಿಗೆ ಕಾಂಗ್ರೆಸ್‌ನ ಕೆಎಂ ಉದಯ್ ಮತ್ತು ಬಿಜೆಪಿಯ ಎಸ್‌ಪಿ ಸ್ವಾಮಿ ಎದುರಾಳಿಗಳಾಗಿದ್ದಾರೆ.
ಮಂಡ್ಯದಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ. ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್.ಪೇಟೆ, ನಾಗಮಂಗಲ ಮಳವಳ್ಳಿ. ಇವುಗಳಲ್ಲಿ ಮಳವಳ್ಳಿ ಮಾತ್ರ ಮೀಸಲು ವಿಧಾನಸಭಾ ಕ್ಷೇತ್ರ. ಇಲ್ಲಿ ಸದ್ಯ ಅನ್ನದಾನಿ ಶಾಸಕರು. ಉಳಿದ 6 ವಿಧಾನಸಭಾ ಕ್ಷೇತ್ರಗಳಲ್ಲೂ ರಾಜ್ಯದ ಮೂರು ಪ್ರಮುಖ ಪಕ್ಷಗಳಿಂದ ಒಕ್ಕಲಿಗ ಸಮುದಾಯದವರೇ ಅಭ್ಯರ್ಥಿಗಳಾಗಿದ್ದಾರೆ.












Click it and Unblock the Notifications