ಕೈ ಕಾರ್ಯಕರ್ತರಿಗೆ ಈಡುಗಾಯಿಯಲ್ಲಿ ಹಲ್ಲೆಗೆ ಮುಂದಾದ ಜೆಡಿಎಸ್ ಶಾಸಕ ಅನ್ನದಾನಿ
ಮಂಡ್ಯ, ಜುಲೈ 5: ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷಗಳ ಸ್ಥಳೀಯ ಮುಖಂಡರ ಮತ್ತು ಕಾರ್ಯಕರ್ತರ ನಡುವೆ ದೈನಂದಿನ ಪರಿಪಾಠದಂತಾಗಿರುವ ಬೀದಿಜಗಳಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.
ಮಳವಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕೆಳಮಟ್ಟದ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಳ್ಳುತ್ತಾ, ತೆಂಗಿನಕಾಯಿಯಿಂದ ಜೆಡಿಎಸ್ ಶಾಸಕ ಹಲ್ಲೆ ಮಾಡಲು ಮುಂದಾದ ಘಟನೆ ನಡೆದಿದೆ.
ತಾಲೂಕಿನ ಮಾಗನೂರು ಬಳಿ ಪಾಲಿಟೆಕ್ನಿಕ್ ಕಟ್ಟದ ಭೂಮಿಪೂಜೆಗೆ ಜೆಡಿಎಸ್ ಶಾಸಕ ಡಾ. ಕೆ ಅನ್ನದಾನಿ ಆಗಮಿಸಿದ್ದರು. ಜೊತೆಗೆ, ಮಾಜಿ ಶಾಸಕ ಮತ್ತು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಪಿ ಎಂ ನರೇಂದ್ರಸ್ವಾಮಿ ಬೆಂಬಗಲಿಗರೂ ಆಗಮಿಸಿದ್ದರು.

ಸಿದ್ದರಾಮಯ್ಯನವರ ಅವಧಿಯಲ್ಲಿ ಈಗಾಗಲೇ ಭೂಮಿಪೂಜೆ ನೆರವೇರಿಸಿಯಾಗಿದೆ, ಮತ್ತೆ ನೀವೇನು ಭೂಮಿಪೂಜೆ ಮಾಡುವುದು ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ನರೇಂದ್ರಸ್ವಾಮಿ ಬೆಂಬಲಿಗರು ಮುಂದಾಗಿದ್ದಾರೆ.
ಆಗ, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಎಲ್ಲವನ್ನೂ ಗಮನಿಸುತ್ತಿದ್ದ ಶಾಸಕ ಅನ್ನದಾನಿ ತಾಳ್ಮೆ ಕಳೆದುಕೊಂಡು, ಭೂಮಿಪೂಜೆಗೆ ತಂದಿದ್ದ ಈಡುಗಾಯಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಸರಕಾರೀ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುತ್ತಿರುವ ನಿಮ್ಮನ್ನು ಜೈಲಿಗೆ ಕಳುಹಿಸುತ್ತೇನೆಂದು ಈಡುಗಾಯಿಯಲ್ಲಿ ಹಲ್ಲೆಗೆ ಮುಂದಾದ ಶಾಸಕರನ್ನು ಕೂಡಲೇ ಪೊಲೀಸರು ಮಧ್ಯಪ್ರವೇಶಿಸಿ, ಸಮಾಧಾನ ಮಾಡಿ ಕಳುಹಿಸಿದ್ದಾರೆ.












Click it and Unblock the Notifications