ಶೀಘ್ರದಲ್ಲೇ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ನಿಖಿಲ್ ಕುಮಾರಸ್ವಾಮಿ
ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಹೆಚ್.ಡಿ.ಕುಮಾರಸ್ವಾಮಿ ಒಗ್ಗೂಡಿ ರಾಜ್ಯವನ್ನು ಕಟ್ಟಲಿದ್ದಾರೆಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತಮ್ಮ ತಂದೆ ಹೆಚ್.ಡಿ.ಕುಮಾರಸ್ವಾಮಿ ಪರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೋಡ್ ಶೋ ಹಾಗೂ ಪ್ರಚಾರ ಸಭೆಗಳನ್ನು ನಡೆಸಿ ಮಾತನಾಡಿದ ಅವರು ಏಪ್ರಿಲ್ 26 ರ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ ಹುಟ್ಟೂರಾದ ಬೂಕನಕೆರೆಯಿಂದ ಪ್ರಚಾರ ಯಾತ್ರೆ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.
ಜೆಡಿಎಸ್ ಪಕ್ಷ ಸ್ಥಾಪನೆಯಾದ ದಿನದಿಂದ ಇಂದಿನವರೆಗೂ ಮಂಡ್ಯ ಜಿಲ್ಲೆ ನಮಗೆ ರಾಜಕೀಯವಾಗಿ ಅತೀ ಹೆಚ್ಚು ಶಕ್ತಿ ನೀಡಿದೆ. ಹೆಚ್.ಡಿ.ಕುಮಾರಸ್ವಾಮಿ ಎರಡು ಅವಧಿಗೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಅಧಿಕಾರ ನಡೆಸಿದ್ದು ಕೇವಲ 34 ತಿಂಗಳುಗಳ ಕಾಲ ಮಾತ್ರ. ಆದರೆ ಅಧಿಕಾರ ನಡೆಸಿದ ಅಲ್ಪ ಅವಧಿಯಲ್ಲಿಯೇ ಅವರು ಮಾಡಿದ ರೈತರ 25 ಸಾವಿರ ಕೋಟಿ ಸಾಲ ಮನ್ನಾ ಸೇರಿದಂತೆ ಇತರ ಜನಪರ ಯೋಜನೆಗಳು ಮನೆ ಮನೆ ಮಾತಾಗಿವೆ ಎಂದರು.
ಅನಿವಾರ್ಯವಾಗಿ ಹೆಚ್‌ಡಿಕೆ ಕಣಕ್ಕೆ
ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುವ ವಿಚಾರ ಪಕ್ಷದ ಮುಂದೆ ಇರಲ್ಲಿಲ್ಲ. ಆದರೆ ಅನಿರೀಕ್ಷಿತವಾದ ರಾಜಕೀಯ ಬೆಳವಣಿಗೆಯಲ್ಲಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಬೇಕಾಯಿತು. ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸಿದರೆ ಹಳೇ ಮೈಸೂರು ಪ್ರಾಂತ್ಯದ 12 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಿಂದ ಸಹಕಾರಿಯಾಗಲಿದೆ ಎನ್ನುವ ಕಾರಣವನ್ನು ಮುಂದಿಟ್ಟು ಬಿಜೆಪಿ ಮತ್ತು ಜಿಲ್ಲಾ ಜೆಡಿಎಸ್ ಮುಖಂಡರ ಒತ್ತಾಸೆಯ ಮೇರೆಗೆ ಸ್ಪರ್ಧಿಸಿದ್ದಾರೆ ಎಂದರು.
ರಾಜ್ಯ ಕಟ್ಟುವ ಕುಮಾರಣ್ಣನವರ ಚಿಂತನೆ ಮತ್ತು ಬದ್ದತೆಗಳನ್ನು ಗಮನಿಸಿ ಬಿಜೆಪಿ ನಾಯಕರು ಕುಮಾರಣ್ಣನನ್ನು ಬೆಂಬಲಿಸಿ ಮೈತ್ರಿ ಮಾಡಿಕೊಂಡಿದ್ದಾರೆ. ಕುಮಾರಣ್ಣ ಕೇವಲ ಮಂಡ್ಯದ ಸಂಸದರಂತೆ ಕೆಲಸ ಮಾಡದೆ ಸಮಸ್ತ ರಾಜ್ಯದ ಪ್ರತಿನಿಧಿಯಾಗಿ ಕೇಂದ್ರದಲ್ಲಿ ಕೆಲಸ ಮಾಡಲಿದ್ದಾರೆಂದು ನಿಖಿಲ್ ಹೇಳಿದರು.
ಮೈತ್ರಿ ಸರ್ಕಾರ ಅಧಿಕಾರಕ್ಕೆ
ಹೆಚ್.ಡಿ.ದೇವೇಗೌಡ, ಕುಮಾರಣ್ಣ ಅವರಂತೆಯೇ ಸದಾ ರೈತಪರವಾಗಿ ಚಿಂತಿಸುವ ಮತ್ತೊಬ್ಬ ನಾಯಕರೆಂದರೆ ಅದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಇಂದು ನಾಡಿನ ಮಣ್ಣಿನ ಮಕ್ಕಳಾದ ಕುಮಾರಣ್ಣ ಮತ್ತು ಬಿ.ಎಸ್.ಯಡಿಯೂರಪ್ಪ ಒಟ್ಟಾಗಿದ್ದಾರೆ. ಈ ಇಬ್ಬರೂ ನಾಯಕರೂ ಒಗ್ಗೂಡಿ ರಾಜ್ಯ ಕಟ್ಟಲಿದ್ದಾರೆ. ಅತಿ ಶಿಘ್ರದಲ್ಲಿಯೇ ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಈ ಇಬ್ಬರೂ ನಾಯಕರೂ ಒಗ್ಗೂಡಿ ಮೈತ್ರಿ ಮಾಡಿಕೊಂಡಿದ್ದರೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಡ್ರೆಸ್ ಹುಡುಕಬೇಕಾಗಿತ್ತು. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ, ಒಳ್ಳೆಯ ಉದ್ದೇಶಕ್ಕಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಲಿ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಕೈಜೋಡಿಸಿದ್ದಾರೆ ಎಂದರು.












Click it and Unblock the Notifications