ಹೊಸಹೊಳಲು ಕೆರೆ ನೀರಾವರಿ ಯೋಜನೆ ಹಳ್ಳಹಿಡಿದು ಇಪ್ಪತೈದು ವರ್ಷ
ಮಂಡ್ಯ, ಏಪ್ರಿಲ್ 03: ನೀರಾವರಿ ಯೋಜನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾ ಬಂದಿರುವುದರಿಂದಲೇ ಇವತ್ತು ನಾವು ಮುಂಗಾರು ಕೈಕೊಟ್ಟಾಗಲೆಲ್ಲ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೆ ನೀರಿಲ್ಲದೆ ಪರದಾಡುವಂತಾಗಿದೆ. ಇನ್ನು ಮುಂದೆಯೂ ಎಚ್ಚೆತ್ತುಕೊಳ್ಳದೆ ಇನ್ನೆಷ್ಟು ಸಂಕಷ್ಟಗಳನ್ನು ಅನುಭವಿಸಬೇಕೋ ಆ ದೇವರಿಗೆ ಗೊತ್ತು.
ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಹೊಸಹೊಳಲು ಕೆರೆ ಕೋಡಿಯ ಮೇಲ್ಮಟ್ಟದ ನಾಲಾ ಯೋಜನೆ ಕಳೆದ ಇಪತ್ತೈದು ವರ್ಷಗಳಿಂದ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿರುವುದನ್ನು ಗಮನಿಸಿದರೆ ನಮ್ಮ ಸರ್ಕಾರಗಳು ನೀರಾವರಿ ಯೋಜನೆ ಕುರಿತಂತೆ ಯಾವ ರೀತಿಯ ನಿರ್ಲಕ್ಷ್ಯ ವಹಿಸುತ್ತಿವೆ ಎಂಬುದು ಗೊತ್ತಾಗಿ ಬಿಡುತ್ತದೆ. ಈ ಯೋಜನೆ ಕಾರ್ಯಗತಗೊಂಡಿದ್ದರೆ ಹಲವು ರೀತಿಯ ಉಪಯೋಗವಾಗುತ್ತಿತ್ತು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?.

ಈ ಯೋಜನೆ ಕುರಿತಂತೆ ಮೆಲುಕು ಹಾಕಿದ್ದೇ ಆದರೆ 24 ಗ್ರಾಮಗಳ 3960 ಎಕರೆ ಭೂ ಪ್ರದೇಶಕ್ಕೆ ನೀರುಣಿಸುವ ಹೊಸಹೊಳಲು ಕೆರೆ ಕೋಡಿಯ ಮೇಲ್ಮಟ್ಟದ ನಾಲಾ ಯೋಜನೆಯನ್ನು 25 ವರ್ಷಗಳ ಹಿಂದೆ ಆರಂಭಿಸಲಾಗಿದ್ದು, ಅರ್ಧಕ್ಕೆ ನಿಂತ ಕಾಮಗಾರಿ ಇವತ್ತು ಪೂರ್ಣವಾಗುತ್ತದೆ ನಾಳೆ ಪೂರ್ಣವಾಗುತ್ತದೆ ಎಂದು ರೈತರು ಕಾಯುತ್ತಲೇ ಇದ್ದು, ಕಾಯುವುದರಲ್ಲೇ 25 ವರ್ಷಗಳನ್ನು ಸವೆಸಿದ್ದಾರೆ.
ಪೋಲಾಗುವ ನೀರನ್ನು ಸಂಗ್ರಹಿಸುವ ಯೋಜನೆ
ಕೆ.ಆರ್.ಪೇಟೆ ಪಟ್ಟಣ ವ್ಯಾಪ್ತಿಗೆ ಒಳಪಡುವ ಹೊಸಹೊಳಲು ದೊಡ್ಡಕೆರೆ ಸುಮಾರು 2.30 ಕಿ.ಮಿ ಉದ್ದದ ಏರಿಯನ್ನು ಹೊಂದಿದ್ದು ಕೆರೆಯ ಏರಿಯ ಎರಡೂ ಕಡೆ ನಾಲೆಯಿದ್ದು ಸುಮಾರು 550 ಎಕರೆ ಅಚುಕಟ್ಟು ಪ್ರದೇಶವಿದೆ. ಕೆರೆಯ ಎಡ ಮತ್ತು ಬಲಭಾಗದಲ್ಲಿ ಕ್ರಮವಾಗಿ 84 ಮೀಟರ್ ಮತ್ತು 71 ಮೀಟರ್ ಉದ್ದದ ಕೋಡಿಯಿದ್ದು ಹೆಚ್ಚುವರಿ ನೀರು ಕೋಡಿಯ ಮೂಲಕ ಹೇಮಾವತಿ ನದಿ ಸೇರುತ್ತದೆ.

ಕೆರೆಯ ಮೇಲ್ಬಾಗದ ನಾರಾಯಣದುರ್ಗ ಕಣಿವೆಯಿಂದ ಹರಿದು ಬರುವ ಹಳ್ಳದ ನೀರು ಮತ್ತು ಹೇಮಾವತಿ ಜಲಾಶಯ ಯೋಜನೆಯ ಸಾಹುಕಾರ್ ಚೆನ್ನಯ್ಯ ನಾಲೆಯ 55,56, 56(ಎ), 57, 58, 59, 60, 61 ಮತ್ತು 62ನೇ ವಿತರಣಾ ನಾಲೆಗಳಿಂದ ಹರಿದು ಬರುವ ಬಸಿ ನೀರು ಈ ಕೆರೆಗೆ ಹರಿದು ಬರುತ್ತದೆ. ನೀರಾವರಿ ಇಲಾಖೆಯ ಅಂದಾಜಿನ ಪ್ರಕಾರ 250 ರಿಂದ 275 ಕ್ಯೂಸೆಕ್ಸ್ ನೀರು ಬಳಕೆಯಾಗದೆ ಈ ಕರೆ ಕೋಡಿಯ ಮೂಲಕ ಹೇಮಾವತಿ ನದಿಯನ್ನು ಸೇರುತ್ತದೆ.
3960 ಎಕರೆ ಭೂಮಿಗೆ ನೀರುಣಿಸುವ ಕನಸು
ವ್ಯರ್ಥವಾಗಿ ಹರಿದು ಹೋಗುವ ಕೆರೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಸದುದ್ದೇಶದಿಂದ ಅಂದಿನ ನೀರಾವರಿ ಸಚಿವರಾದ ಕೆ.ಎನ್.ನಾಗೇಗೌಡರ (ಟಿಪ್ಪಣಿ ಸಂಖ್ಯೆ 923/31.10.1996ರ) ಮೇರೆಗೆ ಹೊಸಹೊಳಲು ಕೆರೆ ಕೋಡಿಯ ಮೇಲ್ಮಟ್ಟದ ನಾಲಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.
ಸುಮಾರು 17.25 ಕಿ.ಮಿ ಉದ್ದದ ಈ ನಾಲೆಯ ಮೂಲಕ ಬೂಕನಕೆರೆ ಹೊಬಳಿಯಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆಯ ವಿತರಣಾ ನಾಲೆ 62 ಮತ್ತು 64 ರ ಕೊನೆಯ ಹಂತದಲ್ಲಿ ನೀರಾವರಿ ವಂಚಿತರಾಗಿರುವ ಸಫರಿಂಗ್ ಅಚ್ಚುಕಟ್ಟು ಪ್ರದೇಶದ 3960 ಎಕರೆ ಭೂಮಿಗೆ ನೀರುಣಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

ನನಸಾಗದ ಶಾಶ್ವತ ನೀರಾವರಿಯ ಕನಸು
1996ರಲ್ಲಿ ಶಾಸಕರಾಗಿದ್ದ ಬಿ.ಪ್ರಕಾಶ್ ಅವರ ಒತ್ತಾಸೆಯಿಂದ ಈ ಯೋಜನೆ ರಾಜ್ಯ ಸರ್ಕಾರದಿಂದ ಅನುಮೋದನೆಗೊಂಡಿತು. ನಂತರ 1999ರಲ್ಲಿ ಶಾಸಕರಾಗಿ ಆಯ್ಕೆಗೊಂಡ ಕೆ.ಬಿ.ಚಂದ್ರಶೇಖರ್ ವಿಶೇಷ ಆಸಕ್ತಿಯಿಂದ ಈ ಹೊಸಹೊಳಲು ಮೇಲ್ಗಾಲುವೆಗೆ 8.25 ಕೋಟಿ ಅಂದಾಜು ಪಟ್ಟಿ ತಯಾರಿಸಿ ಕಾಮಗಾರಿ ಆರಂಭಿಸಲಾಯಿತು.
ಈ ನಾಲೆ ಪೂರ್ಣಗೊಂಡಿದ್ದರೆ ಬೂಕನಕೆರೆ ಹೋಬಳಿಯ ಚೌಡೇನಹಳ್ಳಿ, ನಾರ್ಗೋನಹಳ್ಳಿ, ಬಳ್ಳೇಕೆರೆ, ಕಾಪನಹಳ್ಳಿ, ಹಳಿಯೂರು, ನಾಟನಹಳ್ಳಿ, ವಿಠಲಾಪುರ, ಹೆಮ್ಮಡಹಳ್ಳಿ, ಕೀಳನಕೊಪ್ಪಲು, ಬಿ.ಬಾಚಹಳ್ಳಿ, ಸಂಕನಹಳ್ಳಿ, ವಿಜಯಹೊಸೂರು, ಅರಳಕುಪ್ಪೆ, ಶೆಟ್ಟಹಳ್ಳಿ, ಚಿಕ್ಕಗಾಡಿಗನಹಳ್ಳಿ, ಯಗಚಕುಪ್ಪೆ, ಕಟ್ಟಹಳ್ಳಿ, ಕುರುಬಹಳ್ಳಿ, ಗಂಜೀಗೆರೆ, ಬೂಕಹಳ್ಳಿ, ರಾಜೇನಹಳ್ಳಿ, ಪೂವನಹಳ್ಳಿ, ಮುದುಗೆರೆ ಮತ್ತು ವರಹನಾಥ ಕಲ್ಲಹಳ್ಳಿ ಗ್ರಾಮದ ಪ್ರದೇಶಕ್ಕೆ ಶಾಶ್ವತವಾಗಿ ನೀರು ನೀಡುವ ಕನಸು ಈ ಯೋಜನೆಯಲ್ಲಿತ್ತು.
ಯೋಜನೆಯಲ್ಲಿ ಹಣ ದುರ್ಬಳಕೆಯ ಆರೋಪ
ಇದುವರೆಗೆ ಈ ನಾಲಾ ಕಾಮಗಾರಿಗೆ ನೀರಾವರಿ ಇಲಾಖೆ ಸುಮಾರು 10ಕೋಟಿಗೂ ಅಧಿಕ ರೂ ವೆಚ್ಚ ಮಾಡಿದೆ. ಆದರೆ ಕಾಲುವೆ ತೋಡುವ ಕಾರ್ಯ ಪುರ್ಣಗೊಂಡಿಲ್ಲ. ತಾಲೂಕಿನ ವಿಜಯಹೊಸಳ್ಳಿ ಬಳಿ ಕಿರು ಹಳ್ಳವೊಂದು ಹರಿಯುತ್ತಿದೆ. ಈ ಹಳ್ಳದ ಮೇಲೆ ಸುಮಾರು 0.650 ಕಿ.ಮಿ ಉದ್ದ ಮೇಲ್ಗಾಲುವೆ ನಿರ್ಮಿಸಿ ಮುಂದಕ್ಕೆ ನಾಲೆ ಸಾಗಬೇಕು.
ಮೇಲಗಾಲುವೆ ನಿರ್ಮಿಸಲು ಅಗತ್ಯ ಮಟ್ಟಕ್ಕೆ ಮಣ್ಣಿನ ಏರಿ ನಿರ್ಮಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಈ ಹಿಂದೆ 06 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಮಣ್ಣಿನ ಏರಿ ನಿರ್ಮಾಣದ ಹಣ ದುರ್ಬಳಕೆಯಾಗಿದೆ. ಬಂದ ಅನುದಾನವನ್ನು ಮಣ್ಣಿನ ಏರಿಯ ನಿರ್ಮಾಣ ಮಾಡದೇ ಅರ್ಧಕ್ಕೆ ನಿಂತಿರುವ ನಾಲಾ ತೋಡುವಿಕೆಯ ಕಾಮಗಾರಿಗೆ ಬಳಕೆ ಮಾಡುವ ಬದಲು ನೀರಾವರಿ ಇಲಾಖೆಯ ಈ ಹಿಂದಿನ ಎಂಜಿನಿಯರುಗಳು ವಿಜಯ ಹೊಸಹಳ್ಳಿಯ ವರೆಗೆ 0 ಕಿ.ಮಿ ಯಿಂದ 11 ಕಿ.ಮೀ ವರೆಗೆ ಲೈನಿಂಗ್ ಮಾಡಲು ಬಳಕೆ ಮಾಡಿದ್ದಾರೆ.
ಈ ಯೋಜನೆ ಬಗ್ಗೆ ಗಮನಹರಿಸುತ್ತಾರಾ?
ನೀರು ಹರಿಯದ ನಿರುಪಯುಕ್ತವಾದ ಅಪೂರ್ಣ ನಾಲೆಯ ಲೈನಿಂಗ್ ಕಾಮಗಾರಿಯ ಬಗ್ಗೆ ಅಂದಿನ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರು ಸ್ವಲ್ಪ ಗಮನ ಹರಿಸಿದ್ದರೆ ನಾಲಾ ಕಾಮಗಾರಿ ವೇಗವು ಚುರುಕುಗೊಳ್ಳುತ್ತಿತ್ತು ಎನ್ನುವುದು ರೈತರ ಅಭಿಪ್ರಾಯವಾಗಿದೆ. ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಈ ಯೋಜನೆಯನ್ನು ಪೂರ್ಣಗೊಳಿಸುವ ಇಚ್ಚಾಸಕ್ತಿ ಯಾರಿಗೂ ಇಲ್ಲದಂತಾಗಿದೆ. ಜನರ ಹಣ ಈ ರೀತಿಯಾಗಿ ಪೋಲಾಗಿರುವುದು ನಿಜಕ್ಕೂ ದುರ್ದೈವದ ಸಂಗತಿಯೇ...
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications